ಕೆ.ಆರ್.ಪೇಟೆ : ರಾಜ್ಯದಲ್ಲಿ ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸಧೃಡವಾಗಿದೆ. ನಮ್ಮ ಸರ್ಕಾರ ನೀಡಿದ ಜನಪರ ಕಾರ್ಯಕ್ರಮಗಳು ಚುನಾವಣೆಯಲ್ಲಿ ನಮ್ಮ ಕೈ ಹಿಡಿದಿವೆ ಎಂದರು.
ಚನ್ನಪಟ್ಟಣ ಕ್ಷೇತ್ರದಲ್ಲಿ ಜೆಡಿಎಸ್ ಎಷ್ಟೆ ಅಬ್ಬರ ಮಾಡಿದರೂ ಅಲ್ಲಿನ ಜನ ನಮ್ಮ ಪಕ್ಷಕ್ಕೆ ಮತ ಹಾಕಿದ್ದಾರೆ. ಜೆಡಿಎಸ್ ಪ್ರಚಾರದ ಅಬ್ಬರ ನೋಡಿ ನಮ್ಮ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಚುನಾವಣಾ ಫಲಿತಾಂಶದ ವಿಶ್ಲೇಷಣೆ ಮಾಡಿದ್ದಾರೆಯೇ ಹೊರತು ಅವರು ಸೋಲಿನ ಹತಾಶೆಗೆ ಒಳಗಾಗಿಲ್ಲ ಎಂದರು.
ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಬಗ್ಗೆ ಜನ ನಂಬಿಕೆ ಕಳೆದುಕೊಂಡಿದ್ದಾರೆ. ಅಭಿವೃದ್ಧಿಗಾಗಿ ಚನ್ನಪಟ್ಟಣ, ಸಂಡೂರು ಮತ್ತು ಶಿಗ್ಗಾವಿಯಲ್ಲಿ ಜನ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ಹಾಕಿದ್ದು ಮೂರು ಕ್ಷೇತ್ರಗಳಲ್ಲೂ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೆ-ಶಿಪ್‌ಗೆ ಸೇರಿಸಿ ಅಭಿವೃದ್ಧಿ:
ಶ್ರೀರಂಗಪಟ್ಟಣ- ಕೆ.ಆರ್.ಪೇಟೆ- ಚನ್ನರಾಯಪಟ್ಟಣ ರಾಜ್ಯ ಹೆದ್ದಾರಿ ರಸ್ತೆ ಸಂಪೂರ್ಣ ಹಾಳಾಗಿದೆ. ಪ್ರತಿನಿತ್ಯ ಅಪಘಾತವಾಗಿ ವಾಹನಗಳ ಸಂಚಾರಕ್ಕೆ ತೊಡಕಾಗಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಹೆದ್ದಾರಿಯನ್ನು ಕೆಶಿಪ್ ಗೆ ಸೇರಿಸಿ ಅಭಿವೃದ್ದಿಗೊಳಿಸಲು ಯೋಜನೆ ರೂಪಿಸಲಾಗಿದೆ. ಶೀಘ್ರದಲ್ಲಿಯೇ ಈ ಸಂಭಂದ ಕಾಮಗಾರಿ ಪ್ರಕ್ರಿಯೆ ಆರಂಭವಾಗಲಿದೆ ಎಂದರು.
ಸಮ್ಮೇಳನದ ಪ್ರಚಾರ ರಥಕ್ಕೆ ಸ್ವಾಗತ:
ತಾಲೂಕಿನ ವಿವಿಧ ಭಾಗಗಳಲ್ಲಿ ಸಂಚರಿಸಿ ಪಟ್ಟಣಕ್ಕೆ ಆಗಮಿಸಿದ್ದ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರ ರಥವನ್ನು ಸಚಿವ ಚಲುವರಾಯಸ್ವಾಮಿ ಪಟ್ಟಣದ ಪ್ರವಾಸಿಮಂದಿರ ವೃತ್ತದಲ್ಲಿ ಕನ್ನಡಾಂಬೆಗೆ ಪುಷ್ಪಾರ್ಚನೆ ಮಾಡಿ ಸ್ವಾಗತಿಸಿದರು.
ಡಿಸೆಂಬರ್‌ನಲ್ಲಿ ಮಂಡ್ಯದಲ್ಲಿ ನಡೆಯಲಿರುವ 87ನೇ ಕನ್ನಡ ಸಾಹಿತ್ಯ ಸಮ್ಮೇಳನದ ಬಗ್ಗೆ ಜಿಲ್ಲೆಯ ಪ್ರತಿಹಳ್ಳಿಯ ಮನೆ ಮನೆಗೂ ಮಾಹಿತಿ ತಲುಪಬೇಕೆಂಬ ಉದ್ದೇಶದಿಂದ ರಥಯಾತ್ರೆ ಆರಂಭಿಸಲಾಗಿದೆ ಎಂದರು.
ಈ ವೇಳೆ ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಬಿ.ಪ್ರಕಾಶ್, ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್.ದೇವರಾಜು, ಮುಖಂಡರಾದ ವಿಜಯರಾಮೇಗೌಡ, ಪುರಸಭೆ ಅಧ್ಯಕ್ಷೆ ಪಂಕಜಾ ಪ್ರಕಾಶ್, ಬಿಇಒ ತಿಮ್ಮೇಗೌಡ, ಸಮಾಜ ಕಲ್ಯಾಣಾಧಿಕಾರಿ ದಿವಾಕರ್, ಕಸಾಪ ತಾಲೂಕು ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ ಹಲವರು ಇದ್ದರು.