ಮುಖ್ಯ ರಸ್ತೆ ಅಗಲೀಕರಣಕ್ಕೆ ಸಹಕರಿಸದಿದ್ದರೇ ಬ್ಯಾಡಗಿ ಬಂದ್ ಎಚ್ಚರಿಕೆ

KannadaprabhaNewsNetwork |  
Published : Oct 21, 2025, 01:00 AM IST
ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡುತ್ತಿರುವ ಸುರೇಶ ಛಲವಾದಿ.. | Kannada Prabha

ಸಾರಾಂಶ

ಮುಖ್ಯರಸ್ತೆ ಅಗಲೀಕರಣ ವಿಚಾರದಲ್ಲಿ ಅಲ್ಲಿನ ಮಾಲೀಕರು ಕಳೆದ ಜೂ.10ರಂದು ಪ್ರತಿಭಟನೆ ವಾಪಸ್ ಪಡೆಯುವ ವೇಳೆಯಲ್ಲಿ ಅಗಲೀಕರಣಕ್ಕೆ ಸಹಕರಿಸುವುದಾಗಿ ಜಿಲ್ಲಾಡಳಿತ ಸೇರಿದಂತೆ ಸಾರ್ವಜನಿಕರೆದುರು ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು, ಇಲ್ಲದಿದ್ದಲ್ಲಿ ಮುಖ್ಯರಸ್ತೆ ಸ್ಥಗಿತಗೊಳಿಸಿ ಬ್ಯಾಡಗಿ ಬಂದ್ ಮಾಡಿ ಬೃಹತ್ ಹೋರಾಟ ಅನಿವಾರ್ಯವಾಗಲಿದೆ ಎಂದು ಅಗಲೀಕರಣ ಹೋರಾಟ ಸಮಿತಿ ಅಧ್ಯಕ್ಷ ಸುರೇಶ ಛಲವಾದಿ ಎಚ್ಚರಿಸಿದರು.

ಬ್ಯಾಡಗಿ: ಮುಖ್ಯರಸ್ತೆ ಅಗಲೀಕರಣ ವಿಚಾರದಲ್ಲಿ ಅಲ್ಲಿನ ಮಾಲೀಕರು ಕಳೆದ ಜೂ.10ರಂದು ಪ್ರತಿಭಟನೆ ವಾಪಸ್ ಪಡೆಯುವ ವೇಳೆಯಲ್ಲಿ ಅಗಲೀಕರಣಕ್ಕೆ ಸಹಕರಿಸುವುದಾಗಿ ಜಿಲ್ಲಾಡಳಿತ ಸೇರಿದಂತೆ ಸಾರ್ವಜನಿಕರೆದುರು ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು, ಇಲ್ಲದಿದ್ದಲ್ಲಿ ಮುಖ್ಯರಸ್ತೆ ಸ್ಥಗಿತಗೊಳಿಸಿ ಬ್ಯಾಡಗಿ ಬಂದ್ ಮಾಡಿ ಬೃಹತ್ ಹೋರಾಟ ಅನಿವಾರ್ಯವಾಗಲಿದೆ ಎಂದು ಅಗಲೀಕರಣ ಹೋರಾಟ ಸಮಿತಿ ಅಧ್ಯಕ್ಷ ಸುರೇಶ ಛಲವಾದಿ ಎಚ್ಚರಿಸಿದರು.ಪಟ್ಟಣದ ಪ್ರವಾಸಿಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬ್ಯಾಡಗಿ ಮುಖ್ಯರಸ್ತೆ ಅಗಲೀಕರಣಕ್ಕೆ ಕಳೆದ 15 ವರ್ಷ ವಿರೋಧಿಸಿದ್ದು ಸಾಕಾಗಲಿಲ್ಲವೇ, ಇದೀಗ ಸೆಟ್‌ಬ್ಯಾಕ್ ಮುಂದಿಟ್ಟುಕೊಂಡು ಮತ್ತೆ ಕ್ಯಾತೆ ತೆಗೆದು ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಯಾರು ಕಿವಿಗೊಡದೇ ಕೊಟ್ಟ ಮಾತಿನಂತೆ ಅಧಿಕಾರಿಗಳಿಗೆ ಸಹಕರಿಸಿ ಅಗಲೀಕರಣಕ್ಕೆ ಅವಕಾಶ ಮಾಡಿ ಕೊಡಬೇಕು ಇಲ್ಲದಿದ್ದಲ್ಲಿ ಯಾವುದೇ ಕಾರಣಕ್ಕೂ ಅಗಲೀಕರಣದ ಎಲ್ಲಾ ಕಾರ್ಯ ಮುಗಿಯುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಎಚ್ಚರಿಸಿದರು.

ಯಾವ ಪುರುಷಾರ್ಥಕ್ಕೆ ಸನ್ಮಾನ: ಬಿಜೆಪಿ ಮಾಜಿ ತಾಲೂಕಾಧ್ಯಕ್ಷ ಶಿವಯೋಗಿ ಶಿರೂರ ಮಾತನಾಡಿ, ನಾವು ಅಭಿವೃದ್ಧಿ ವಿರೋಧಿಗಳಲ್ಲವೆಂದು ಜನರೆದುರು ಮೊಸಳೆ ಕಣ್ಣೀರು ಸುರಿಸುವುದನ್ನು ನಿಲ್ಲಿಸಬೇಕು, ನಿಮ್ಮಿಂದ ಬ್ಯಾಡಗಿ ಅಭಿವೃದ್ಧಿಗೆ ಗ್ರಹಣ ಹಿಡಿದಿದೆ, ಅಷ್ಟಕ್ಕೂ ಜಿಲ್ಲಾಡಳಿತದಿಂದ ಯಾವ ಪುರುಷಾರ್ಥಕ್ಕೆ ಸನ್ಮಾನ ಶಹಬ್ಬಾಸಗಿರಿ ಪಡೆದುಕೊಳ್ಳಬೇಕಾಗಿತ್ತು ಕೊಟ್ಟ ಮಾತಿನಂತೆ ನಡೆದುಕೊಳ್ಳದೇ ಮತ್ತೆ ನ್ಯಾಯಾಲಯದ ಮೊರೆ ಹೋಗಲು ಸಿದ್ಧತೆ ನಡೆಸುತ್ತಿರುವುದು ಸರಿಯಲ್ಲ ಇದನ್ನೆಲ್ಲ ಬಿಟ್ಟು ಅಭಿವೃದ್ಧಿಗೆ ಸಹಕರಿಸುವಂತೆ ಕಿವಿಮಾತು ತಿಳಿಸಿದರು.ಅಗಲೀಕರಣವಾಗದೇ ಮತ್ತೊಂದು ರಸ್ತೆ ಅಸಾಧ್ಯ: ಗೌರವಾಧ್ಯಕ್ಷ ಗಂಗಣ್ಣ ಎಲಿ ಮಾತನಾಡಿ, ರಸ್ತೆ ಅಗಲೀಕರಣಕ್ಕೆ ಎಲ್ಲ ರೀತಿಯಿಂದಲೂ ಸಹಕಾರ ನೀಡುತ್ತೇವೆ ಎಂದು ಹೇಳಿದವರು ಇದೀಗ ವರಸೆ ಬದಲಾಯಿಸಿದ್ದು ವರ್ತುಲರಸ್ತೆ (ರಿಂಗ್ ರೋಡ್)ಬೈಪಾಸ್ ರಸ್ತೆ ನಿರ್ಮಿಸುವಂತೆ ಜಿಲ್ಲಾಧಿಕಾರಿಗಳಿಗೆ ಒತ್ತಡ ಹಾಕುತ್ತಿದ್ದಾರೆ, ಮುಖ್ಯರಸ್ತೆ ಅಗಲೀಕರಣವಾಗದೇ ಯಾವುದೇ ಕಾರಣಕ್ಕೂ ಜಾಗವನ್ನು ಕೊಡುವುದಿಲ್ಲ ಎಂದು ಎಚ್ಚರಿಸಿದರು.

ಸೆಟ್ ಬ್ಯಾಕ್ ಹೊಸ ಕಟ್ಟಡಕ್ಕೆ ಮಾತ್ರ ಅನ್ವಯ: ಎಂ.ಎಲ್. ಕಿರಣಕುಮಾರ ಮಾತನಾಡಿ, ಸೆಟ್‌ಬ್ಯಾಕ್ ವಿಚಾರ ಹೊಸ ಕಟ್ಟಡಗಳಿಗೆ ಮಾತ್ರ ಅನ್ವಯವಾಗಲಿದೆ, ಈಗಾಗಲೇ ನಿರ್ಮಾಣ ಮಾಡಿರುವ ಕಟ್ಟಡಗಳಿಗೆ ಭೂಸ್ವಾಧೀನಪಡಿಸಿಕೊಂಡು ರಸ್ತೆ ನಿರ್ಮಾಣ ಮಾಡುವಾಗ ಇದು ಅನ್ವಯಿಸುವುದಿಲ್ಲ, ಸದರಿ ರಸ್ತೆಯನ್ನು ಅಭಿವೃದ್ಧಿಪಡಿಸಿ ಪುರಸಭೆಗೆ ಹಸ್ತಾಂತರದ ಕುರಿತು ಶಾಸಕರು ಭರವಸೆ ನೀಡಿದ್ದಾರೆ. ಹೀಗಾಗಿ 6 ಮೀ.ಸೆಟ್ ಬ್ಯಾಕ್ ವಿಚಾರ ಇಲ್ಲಿ ಅಪ್ರಸ್ತುತ, ಆದ್ದರಿಂದ ಮುಖ್ಯರಸ್ತೆ ಮಾಲೀಕರು ಇಂತಹ ಅಗಲೀಕರಣ ವಿರೋಧಿಗಳ ಮಾತಿಗೆ ಕಿವಿಗೊಡದೆ ರಸ್ತೆ ಅಭಿವೃದ್ಧಿಗೆ ಸಹಕರಿಸಿ ಇಲ್ಲದೇ ಹೋದಲ್ಲಿ ಬರುವಂತಹ ಪರಿಹಾರವೂ ಸಿಗುವುದಿಲ್ಲ ಎಂದರು.

ಶೀಘ್ರದಲ್ಲೇ ಲೋಕಾಯುಕ್ತರಿಗೆ ದೂರು: ವಿನಾಯಕ ಕಂಬಳಿ ಮಾತನಾಡಿ, ಕಳೆದ ವರ್ಷ ಸುಪ್ರೀಂ ಕೋರ್ಟ್ ಪ್ರಕರಣ ಸಂಖ್ಯೆ ಸಿವಿಲ್ ಅಪಿಲ್ ಸಂಖ್ಯೆ 14604/2024ರಲ್ಲಿ, ಪ್ರತಿ ರಾಜ್ಯದ ಯಾವುದೇ ಸ್ಥಳೀಯ ಸಂಸ್ಥೆಗಳು ಅಥವಾ ಇಲಾಖೆಗಳು ಕಟ್ಟಡ ಪೂರ್ಣಗೊಂಡಿರುವ ಬಗ್ಗೆ ನಿರಪೇಕ್ಷಣಾ ಪತ್ರ ಅಥವಾ ಆಕುಪೆನ್ಸಿ ಸರ್ಟಿಫಿಕೇಟ್ ಪಡೆಯದೆ ವಾಣಿಜ್ಯ ಚಟುವಟಿಕೆಗಳನ್ನು ನಡೆಸುತ್ತಿದ್ದರೆ ಕ್ರಮ ಕೈಗೊಳ್ಳಬೇಕು ಅಥವಾ ಯಾವುದೇ ವಾಣಿಜ್ಯ ಚಟುವಟಿಕೆ ನಡೆಸಲು ಲೈಸೆನ್ಸ್ ನೀಡಬಾರದು ಎಂಬ ಆದೇಶಿಸಿದೆ, ಆದರೆ ಮುಖ್ಯರಸ್ತೆಯಲ್ಲಿ ಅನೇಕ ಕಟ್ಟಡಗಳು ಪೂರ್ಣಗೊಂಡಿದ್ದರೂ, ನಿಯಮ ಬಾಹಿರವಾಗಿ ವಾಣಿಜ್ಯ ಚಟುವಟಿಕೆ ನಡೆಸುತ್ತಿದ್ದು ಸುಪ್ರೀಂಕೋರ್ಟ್ ಆದೇಶದ ನೇರ ಉಲ್ಲಂಘನೆಯಾಗಿದೆ. ಮುಖ್ಯರಸ್ತೆ ಯಲ್ಲಿ ಈ ರೀತಿ ಕಾನೂನು ಉಲ್ಲಂಘಿಸಿ ವಾಣಿಜ್ಯ ಚಟುವಟಿಕೆ ನಡೆಸುತ್ತಿರುವವರ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗುವುದು ಎಂದರು. ಈ ವೇಳೆ ಪಾಂಡುರಂಗ ಸುತಾರ, ಹರೀಶ ರಿತ್ತಿ, ಫರೀದಾಬಾನು ನದೀಮುಲ್ಲಾ, ಬೀರಪ್ಪ ಹಾವನೂರ, ಜೈಭಿಮ್ ರಾರಾವಿ, ಚಂದ್ರಶೇಖರ ಗದಗಕರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

PREV

Recommended Stories

ಮಲೆನಾಡು, ಕರಾವಳಿಯಲ್ಲಿ ಮಳೆ : ಜನಜೀವನ ಅಸ್ತವ್ಯಸ್ತ
ಚಿತ್ತಾಪುರದಲ್ಲಿ ನ.2ರಂದು ಪಥ ಸಂಚಲನ: ಅನುಮತಿ ಕೋರಿ ಹೊಸದಾಗಿ ಅರ್ಜಿ