ಬ್ಯಾಡಗಿ: ಮುಖ್ಯರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಜ. 16ರಂದು ಬೆಳಗ್ಗೆ 10 ಗಂಟೆಗೆ ಪರಿಹಾರ ಮೊತ್ತ ವಿತರಣೆ ಕುರಿತು ದಾಖಲೆಗಳ ಪರಿಶೀಲನಾ ಸಭೆ ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬಳೆ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಮುಖ್ಯಾಧಿಕಾರಿ ವಿನಯಕುಮಾರ ತಿಳಿಸಿದರು.
ಸುಳ್ಳು ವದಂತಿಗಳಿಗೆ ಕಿವಿಗೊಡದಿರಿ: ಈ ವೇಳೆ ಮಾತನಾಡಿದ ರಾಮಣ್ಣ ಕೋಡಿಹಳ್ಳಿ, ಪಟ್ಟಣಕ್ಕೊಂದು ಸುಂದರ, ಸುಸಜ್ಜಿತವಾದ ಹಾಗೂ ಸರಾಗವಾಗಿ ಸಂಚರಿಸಲು ಅಗಲವಾದ ರಸ್ತೆ ಅವಶ್ಯವಿದೆ. ಇದಕ್ಕಾಗಿ ಸುಮಾರು 15 ವರ್ಷಗಳ ನಿರಂತರ ಹೋರಾಟ ನಡೆಯುತ್ತಾ ಬಂದಿದೆ. ಹೀಗಾಗಿ ಇನ್ನಾದರೂ ಮುಖ್ಯರಸ್ತೆಯ ಮಾಲೀಕರು ಸುಳ್ಳು ವದಂತಿಗಳಿಗೆ ಕಿವಿಗೊಡದೇ ಪರಿಹಾರ ಪಡೆದುಕೊಳ್ಳುವ ನಿಟ್ಟಿನಲ್ಲಿ ಚಿಂತನೆ ನಡೆಸುವ ಮೂಲಕ ಪಟ್ಟಣದ ಅಭಿವೃದ್ಧಿಗೆ ಸಹಕರಿಸುವಂತೆ ಮನವಿ ಮಾಡಿದರು.
ಆದಷ್ಟು ಬೇಗ ಹಣ ಕೊಡಿ: ಸಂತ್ರಸ್ತ ಮಾರುತಿ ಹಂಜಗಿ ಮಾತನಾಡಿ, ಭೂಸ್ವಾಧೀನ ಪ್ರಕ್ರಿಯೆಗೂ ಮುನ್ನ ಪರಿಹಾರದ ಹಣ ನೀಡುತ್ತಿರುವುದು ಅತ್ಯಂತ ಸ್ವಾಗತಾರ್ಹ. ಇದರಲ್ಲಿ ಸ್ಥಳೀಯ ಶಾಸಕರು ಸೇರಿದಂತೆ ಜಿಲ್ಲಾಧಿಕಾರಿ ಹಾಗೂ ಉಪವಿಭಾಗಾಧಿಕಾರಿಗಳ ಕ್ರಮ ಸ್ವಾಗತಾರ್ಹ. ಆದಷ್ಟು ಬೇಗನೆ ಹಣ ನೀಡುವ ಮೂಲಕ ಮುಖ್ಯರಸ್ತೆ ಅಗಲೀಕರಣಗೊಳಿಸಿ ರಸ್ತೆ ಸಂಚಾರಕ್ಕೆ ಅನುಕೂಲ ಕಲ್ಪಿಸುವಂತೆ ಆಗ್ರಹಿಸಿದರು.ಇಡಿಗಂಟು ಸಮಸ್ಯೆ ಬಗೆಹರಿಸಿ: ಹೊನ್ನೂರಪ್ಪ ಕಾಡಸಾಲಿ ಮಾತನಾಡಿ, ಒಂದೇ ಕುಟುಂಬ ಎಂಬ ಕಾರಣಕ್ಕೆ ಇಡಿಗಂಟು ಮೊತ್ತವನ್ನು ಒಬ್ಬರ ಖಾತೆಗಷ್ಟೇ ಹಾಕಲಾಗಿದೆ. ಹೀಗಾಗಿ ಹಣವನ್ನು ಹಂಚಿಕೊಳ್ಳಲು ಇಬ್ಬರಿಂದಲೇ ಸಾಧ್ಯವಿಲ್ಲ. ಹೀಗಾಗಿ ನಮಗೆ ಸಂಬಂಧಸಿದ ಇಡಿಗಂಟು ಹಣವನ್ನು ನೀವೇ ಖುದ್ದಾಗಿ ನಮ್ಮ ನಮ್ಮ ಖಾತೆಗೆ ಹಾಕುವುದು ಸೂಕ್ತವಾಗಿದೆ. ಈ ಕುರಿತು ಅಧಿಕಾರಿಗಳು ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಮನವಿ ಮಾಡಿದರು.
ಮುಖಂಡರಾದ ಚಿಕ್ಕಪ್ಪ ಹಾದಿಮನಿ, ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಹನುಮಂತಪ್ಪ, ಸಹಾಯಕ ಎಂಜಿನಿಯರ್ ಅಜ್ಜನಗೌಡ ಪಾಟೀಲ, ಉಪ ವಿಭಾಗಾಧಿಕಾರಿಗಳ ಕಾರ್ಯಾಲಯದ ಮನೋಜ್, ಪುರಸಭೆ ಎಂಜಿನಿಯರ್ ಸಂಗಮೇಶ ಹಾದಿಮನಿ, ಚನ್ನಪ್ಪ ಅಂಗಡಿ, ಮಾಲತೇಶ ಬೋವಿ, ಮಹಾಂತೇಶ ಹಳ್ಳಿ ಇದ್ದರು.