ಮುಖ್ಯ ಉದ್ದೇಶ ಮಕ್ಕಳಲ್ಲಿರುವ ಕಲಿಕೆ ಗುರುತಿಸಿ ಪ್ರೋತ್ಸಾಹಿಸುವುದು, ವಿಭಿನ್ನ ಕೌಶಲ್ಯ ಬೆಳೆಸುವುದಾಗಿದೆ

ಕುಷ್ಟಗಿ: ಖಾಸಗಿ ಶಾಲೆಗಿಂತ ಸರ್ಕಾರಿ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡುತ್ತಿದ್ದು, ಮಕ್ಕಳನ್ನು ಸರ್ಕಾರಿ ಅಂಗನವಾಡಿಗೆ ದಾಖಲು ಮಾಡಬೇಕು ಎಂದು ಸಿಡಿಪಿಒ ಯಲ್ಲಮ್ಮ ಹಂಡಿ ಹೇಳಿದರು.

ತಾಲೂಕಿನ ಬಳೂಟಗಿ ಗ್ರಾಮದಲ್ಲಿ ಶಿಶು ಅಭಿವೃದ್ಧಿ ಯೋಜನೆ ಹಾಗೂ ಅಜೀಂ ಪ್ರೇಮಜಿ ಫೌಂಡೇಶನ್ ಸಹಯೋಗದಲ್ಲಿ ನಡೆದ ಬಾಲಮೇಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬಾಲಮೇಳ ಕಾರ್ಯಕ್ರಮ ಅಂಗನವಾಡಿ ಮಕ್ಕಳ ಪ್ರತಿಭೆ ಪ್ರದರ್ಶನ, ಆಟೋಟ ಸ್ಪರ್ಧೆಗಳು, ಸಾಂಸ್ಕೃತಿಕ ಚಟುವಟಿಕೆ ಮತ್ತು ಜಾಗೃತಿ ಕಾರ್ಯಕ್ರಮ ಒಳಗೊಂಡ ಒಂದು ಉತ್ಸವವಾಗಿದೆ. ಇದರ ಮುಖ್ಯ ಉದ್ದೇಶ ಮಕ್ಕಳಲ್ಲಿರುವ ಕಲಿಕೆ ಗುರುತಿಸಿ ಪ್ರೋತ್ಸಾಹಿಸುವುದು, ವಿಭಿನ್ನ ಕೌಶಲ್ಯ ಬೆಳೆಸುವುದಾಗಿದೆ ಎಂದರು.

ಅಜೀಂ ಪ್ರೇಮ್ ಜೀ ಫೌಂಡೇಶನ್ ಸಂಯೋಜಕ ಹಾಲೇಶ ಡಿ.ಪಿ.ಮಾತನಾಡಿ, ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ಅಂಗನವಾಡಿ ಕೇಂದ್ರಗಳಲ್ಲಿ ಬಾಲಮೇಳ, ಶಾಲಾ ಪೂರ್ವ ಶಿಕ್ಷಣ ಸೇರಿದಂತೆ ಅನೇಕ ಕಾರ್ಯಕ್ರಮ ಹಾಕಿಕೊಂಡು ಉತ್ತಮ ಕಾರ್ಯ ಮಾಡುತ್ತಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಸವಿತಾ ಕಾಳೇಶ ಬಡಿಗೇರ, ಗ್ರಾಪಂ ಸದಸ್ಯ ಶ್ರೀಶೈಲಪ್ಪ ಮೇಟಿ, ಶೇಖರಗೌಡ ಪಾಟೀಲ್, ಮೌಲಾಬಿ ಮದ್ನಾಳ, ಶಿವಮ್ಮ ಎಲಿಗಾರ, ಅಮರೇಶ ಪಾಟೀಲ್, ಶಾಲಾ ಮುಖ್ಯಶಿಕ್ಷಕ ಪ್ರಭಾಕರ ವಿಜಾಪೂರು, ಬಸವರಾಜ ಮೇಟಿ, ಆರೋಗ್ಯ ಇಲಾಖೆ ಸಿಬ್ಬಂದಿ ವೆಂಕಟೇಶ ರೆಡ್ಡಿ, ಅಜೀಂ ಪ್ರೇಮಜೀ ಸಂಸ್ಥೆಯ ಜಯಶ್ರೀ ಪಾಟೀಲ್, ಶಿವಪ್ರಿಯಾ ಹಾಗೂ ಅಂಗನವಾಡಿ ಮತ್ತು ಕಾರ್ಯಕರ್ತೆಯರು, ಮಕ್ಕಳು ಹಾಗೂ ಪಾಲಕರು ಪೋಷಕರು ಭಾಗವಹಿಸಿದ್ದರು.

ದೋಟಿಹಾಳ ಬಿ ವಲಯ ಮೇಲ್ವಿಚಾರಕಿ ನಾಗಮ್ಮ ಗುಂಡೂರ ಕಾರ್ಯಕ್ರಮ ನಿರೂಪಿಸಿದರು.

ಮಕ್ಕಳಿಂದ ಬಾಲಮೇಳ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಕಾರ್ಯಚಟುವಟಿಕೆ ನಡೆಸಲಾಯಿತು.