ಬ್ಯಾಡಗಿ ತಾಲೂಕಾಡಳಿತ ನಿಷ್ಕ್ರಿಯ: ಅಧಿಕಾರಿಗಳ ವಿರುದ್ಧ ಬಿಜೆಪಿ ಆಕ್ರೋಶ

KannadaprabhaNewsNetwork |  
Published : Apr 15, 2026, 02:30 AM IST
ಬಿಜೆಪಿ ತಾಲೂಕಾಧ್ಯಕ್ಷ ನಿಂಗಪ್ಪ ಬಟ್ಟಲಕಟ್ಟಿ.. | Kannada Prabha

ಸಾರಾಂಶ

ಬ್ಯಾಡಗಿ ತಾಲೂಕಾಡಳಿತ ಸಂಪೂರ್ಣ ನಿಷ್ಕ್ರಿಯಗೊಂಡಿದ್ದು, ಜನ ಸಂಪರ್ಕಕ್ಕೆ ಸಿಗದ ತಹಸೀಲ್ದಾರ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಬಿಜೆಪಿ ತಾಲೂಕಾಧ್ಯಕ್ಷ ನಿಂಗಪ್ಪ ಬಟ್ಟಲಕಟ್ಟಿ ಗಂಭೀರ ಆರೋಪ ಮಾಡಿದರು.

ಬ್ಯಾಡಗಿ: ತಾಲೂಕಾಡಳಿತ ಸಂಪೂರ್ಣ ನಿಷ್ಕ್ರಿಯಗೊಂಡಿದ್ದು, ಜನ ಸಂಪರ್ಕಕ್ಕೆ ಸಿಗದ ತಹಸೀಲ್ದಾರ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಬಿಜೆಪಿ ತಾಲೂಕಾಧ್ಯಕ್ಷ ನಿಂಗಪ್ಪ ಬಟ್ಟಲಕಟ್ಟಿ ಗಂಭೀರ ಆರೋಪ ಮಾಡಿದರು.

ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ವರ್ಷದ ಹಿಂದೆ ಬ್ಯಾಡಗಿಗೆ ತಹಸೀಲ್ದಾರ್ ಆಗಿ ಬಂದಿರುವ ಚಂದ್ರಶೇಖರ ನಾಯಕ ಅವರು ಜನಪರವಾಗಿ ಕಾರ್ಯ ನಿರ್ವಹಿಸದೇ ಸಾರ್ವಜನಿಕರಿಂದ ದೂರವಾಗಿದ್ದಾರೆ. ಇಂತಹ ಆಡಳಿತದಿಂದ ತಾಲೂಕಿನ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾಲೂಕಿನಲ್ಲಿ ವಿರೋಧ ಪಕ್ಷದ ನಾಯಕರು ಇದ್ದಾರೆ ಎಂಬುದೇ ಕೆಲ ಅಧಿಕಾರಿಗಳಿಗೆ ಗೊತ್ತಿಲ್ಲದಂತಾಗಿದೆ, ಯಾವುದೇ ಮಹನೀಯರ ಜಯಂತಿ ಅಥವಾ ರಾಷ್ಟ್ರೀಯ ಹಬ್ಬಗಳ ಆಚರಣೆಗೆ ತಾಲೂಕಿನ 60ಕ್ಕೂ ಹೆಚ್ಚು ಸಂಘಟನೆಗಳಿಗೆ ಆಹ್ವಾನ ನೀಡದೇ ನಿರ್ಲಕ್ಷ್ಯ ತೋರಲಾಗುತ್ತಿದೆ, ಆಹ್ವಾನ ಕೇವಲ ವಾಟ್ಸಪ್‌ಗೆ ಸೀಮಿತವಾಗಿರುವುದು ಅವರ ಕರ್ತವ್ಯ ಬದ್ಧತೆಯ ಕೊರತೆ ಎತ್ತಿ ತೋರಿಸುತ್ತದೆ ಎಂದು ಆರೋಪಿಸಿದರು.

ಸಮಿತಿ ಬೇಜವಾಬ್ದಾರಿ: ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಕೇವಲ ಹೆಸರಿಗೆ ಮಾತ್ರ ಉಳಿದಿದ್ದು, ಜಯಂತಿ ಕಾರ್ಯಕ್ರಮಗಳನ್ನು ಕಾಟಾಚಾರಕ್ಕೆ ನಡೆಸುತ್ತಿದೆ, ಜ.1ರಂದು ವಿಶ್ವಕರ್ಮ ಸಂಸ್ಕರಣಾ ದಿನಾಚರಣೆ ಆಚರಿಸದೇ ಸಮಿತಿ ವಿಶ್ವಕರ್ಮ ಸಮಾಜದ ಆಕ್ರೋಶಕ್ಕೆ ಗುರಿಯಾಗಿದ್ದಾರೆ, ಈ ಬಗ್ಗೆ ಪ್ರಶ್ನಿಸಿದ ಸಮಾಜದ ಮುಖಂಡರೊಂದಿಗೆ ಸಿಬ್ಬಂದಿ ವಾಗ್ವಾದ ನಡೆಸಿರುವುದು ಖಂಡನೀಯ, ಇದೇ ರೀತಿ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ಯಾವುದೇ ಆಹ್ವಾನ ನೀಡಿಲ್ಲ ಎಂದು ದೂರಿದರು.ಭ್ರಷ್ಟಾಚಾರಕ್ಕೆ ಹೆಚ್ಚಳ: ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಸಿಬ್ಬಂದಿಯ ಸಮನ್ವಯತೆ ಕೊರತೆಯಿಂದ ಎಲ್ಲವೂ ಸರಿಯಿಲ್ಲ ಎನ್ನುವಂತಾಗಿದೆ. ಕಚೇರಿಯಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದ್ದು, ಸಾರ್ವಜನಿಕರು, ವೃದ್ಧರು ಮಹಿಳೆಯರು, ವಿಶೇಷ ಚೇತನರು ಯಾರೇ ತಮ್ಮ ಕೆಲಸ ಮಾಡಿಸಲು ಹೋದರೂ ಹಣ ನೀಡಬೇಕಾಗಿದೆ. ಇದಕ್ಕೆ ಸಾಕಷ್ಟು ಸಾಕ್ಷಿಗಳಿಗೆ ಎಂದರು.ಪತ್ರಕರ್ತರ ಕಡೆಗಣನೆಗೂ ವಿರೋಧ: ಸಾರ್ವಜನಿಕರು ಹಾಗೂ ತಾಲೂಕಾಡಳಿತದ ನಡುವೆ ಕೊಂಡಿಯಾಗಿರುವ ತಾಲೂಕಿನ ಪತ್ರಕರ್ತರನ್ನು ಸಹ ಯಾವುದೇ ಸಭೆ, ಸಮಾರಂಭ ಅಥವಾ ಜಯಂತಿ ಕಾರ್ಯಕ್ರಮಗಳಿಗೆ ಆಹ್ವಾನಿಸದೇ ಶಿಷ್ಟಾಚಾರ ಉಲ್ಲಂಘಿಸಿ ತಾಲೂಕಾಡಳಿತ ತಮ್ಮದೇ ದಾರಿಯಲ್ಲಿ ಸಾಗುತ್ತಿದೆ ಎಂದು ಟೀಕಿಸಿದರು. ಈ ಸಂದರ್ಭದಲ್ಲಿ ವಿಷ್ಣುಕಾಂತ ಬೆನ್ನೂರ, ಸುರೇಶ ಉದ್ಯೋಗಣ್ಣನವರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂಬೇಡ್ಕರ್‌ ವ್ಯಕ್ತಿಯಲ್ಲ ಜಗತ್ತಿನ ಶಕ್ತಿ
ನಾಯಿ, ಬೆಕ್ಕುಗಳಿಗಿಲ್ಲದ ಮೈಲಿಗೆ ಮನುಷ್ಯರಿಗೆ ಏಕೆ?