ಬ್ಯಾಡಗಿ ಮುಖ್ಯರಸ್ತೆ ಅಗಲೀಕರಣ: 7ನೇ ದಿನವೂ ಚುರುಕಾಗಿ ನಡೆದ ಕಟ್ಟಡ ತೆರವು

KannadaprabhaNewsNetwork |  
Published : May 16, 2026, 01:15 AM IST
ಬ್ಯಾಡಗಿ ಮುಖ್ಯರಸ್ತೆ ಅಗಲೀಕರಣ ಶುಕ್ರವಾರ ಸುಗಮವಾಗಿ ನಡೆಯಿತು. | Kannada Prabha

ಸಾರಾಂಶ

ಬ್ಯಾಡಗಿ ಪಟ್ಟಣದ ಬಹುನಿರೀಕ್ಷಿತ ಮುಖ್ಯರಸ್ತೆ ಅಗಲೀಕರಣ ಕಾಮಗಾರಿಯ ಅಂಗವಾಗಿ ನಡೆಯುತ್ತಿರುವ ಕಟ್ಟಡ ತೆರವು ಕಾರ್ಯಾಚರಣೆ 7ನೇ ದಿನ ಶುಕ್ರವಾರವೂ ಯಾವುದೇ ಅಡಚಣೆಗಳಿಲ್ಲದೆ ಸರಾಗವಾಗಿ ಮುಂದುವರಿಯಿತು.

ಬ್ಯಾಡಗಿ: ಪಟ್ಟಣದ ಬಹುನಿರೀಕ್ಷಿತ ಮುಖ್ಯರಸ್ತೆ ಅಗಲೀಕರಣ ಕಾಮಗಾರಿಯ ಅಂಗವಾಗಿ ನಡೆಯುತ್ತಿರುವ ಕಟ್ಟಡ ತೆರವು ಕಾರ್ಯಾಚರಣೆ 7ನೇ ದಿನ ಶುಕ್ರವಾರವೂ ಯಾವುದೇ ಅಡಚಣೆಗಳಿಲ್ಲದೆ ಸರಾಗವಾಗಿ ಮುಂದುವರಿಯಿತು.

ಕಳೆದೊಂದು ವಾರದಿಂದಲೇ ಬ್ಯಾಡಗಿಯಲ್ಲೇ ಮೊಕ್ಕಾಂ ಹೂಡಿರುವ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಹಾಗೂ ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ಹೊಳೆಪ್ಪಗೋಳ ನೇತೃತ್ವದಲ್ಲಿ ಶುಕ್ರವಾರವೂ ಜೆಸಿಬಿಗಳ ಸಹಾಯದಿಂದ ಕಟ್ಟಡ ತೆರವು ಕಾರ್ಯಾಚರಣೆ ನಡೆಯಿತು.

ಮುಖ್ಯರಸ್ತೆಯ ಎರಡೂ ಬದಿಯಲ್ಲಿದ್ದ ಬಹುತೇಕ ಹಳೆಯ ಹಾಗೂ ಅಗಲೀಕರಣಕ್ಕೆ ಅಡ್ಡಿಯಾಗಿದ್ದ ಕಟ್ಟಡಗಳನ್ನು ನೆಲಸಮಗೊಳಿಸಲಾಗಿದ್ದು, ಮುಖ್ಯರಸ್ತೆಯಲ್ಲಿ ಕೆಲವೇ ಕೆಲವು ಕಟ್ಟಡ ತೆರವು ಮಾಡುವುದು ಮಾತ್ರ ಬಾಕಿ ಉಳಿದಂತಾಗಿದೆ. ಇನ್ನೇನು ಸೋಮವಾರ ಒಳಗೇ ಬಹುತೇಕ ಕಟ್ಟಡಗಳು ತೆರವು ಕಾರ್ಯ ಮುಕ್ತಾಯವಾಗಲಿದೆ ಎಂಬ ನಿರೀಕ್ಷೆ ಹೆಚ್ಚಾಗಿದೆ.

ಅವಕಾಶ ನೀಡಿದರೂ ತಾತ್ಸಾರ: ಇನ್ನೂ ಪಟ್ಟಣದ ಅಭಿವೃದ್ಧಿಯತ್ತ ಜಿಲ್ಲಾಡಳಿತ ದಿಟ್ಟ ಹೆಜ್ಜೆ ಇಟ್ಟಿದ್ದು, ಎಲ್ಲರಿಂದ ಮೆಚ್ಚುಗೆ ಮಾತುಗಳು ಕೇಳಿಬರುತ್ತಿವೆ. ಕೆಲವು ಕಟ್ಟಡ ಮಾಲೀಕರಿಗೆ ತಾವೇ ಸ್ವಯಂಪ್ರೇರಿತವಾಗಿ ಕಟ್ಟಡ ತೆರವುಗೊಳಿಸಿಕೊಳ್ಳಲು ಜಿಲ್ಲಾಡಳಿತದಿಂದ ಕಾಲವಕಾಶ ನೀಡಲಾಗಿತ್ತು. ಆದರೆ ಹಲವು ದಿನಗಳ ಅವಕಾಶ ನೀಡಿದರೂ ತೆರವು ಕಾರ್ಯ ಕೈಗೊಳ್ಳದ ಕೆಲವರ ಕಟ್ಟಡಗಳನ್ನು ಜಿಲ್ಲಾಧಿಕಾರಿಯೇ ಖುದ್ದು ನಿಂತು ನೇರವಾಗಿ ಯಂತ್ರೋಪಕರಣಗಳ ಮೂಲಕ ತೆರವುಗೊಳಿಸಿದ್ದು ವಿಶೇಷವಾಗಿತ್ತು.

ಬಿಗಿ ಬಂದೋಬಸ್ತ್‌: ಕಾರ್ಯಾಚರಣೆಯ ವೇಳೆ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಯಿತು. ಸಿಪಿಐ ಪಿಎಸ್‌ಐ ಹಾಗೂ ಇತರ ಅಧಿಕಾರಿಗಳು ಸ್ಥಳದಲ್ಲೇ ಇದ್ದು ಪರಿಸ್ಥಿತಿ ನಿಭಾಯಿಸಿದರು.ಸಹಕಾರ ನೀಡಿದಲ್ಲಿ ಬೇಗ ಕೆಲಸ: ಹಲವರಿಗೆ ತಮ್ಮ ಕಟ್ಟಡ ತಾವೇ ತೆರವುಗೊಳಿಸಲು ಅವಕಾಶ ನೀಡಿದರೂ ಅವರು ತೆರವು ಮಾಡಿಕೊಂಡಿಲ್ಲ. ಇನ್ನು ಮುಂದೆ ಕಾಯುವ ಸ್ಥಿತಿ ಇಲ್ಲ. ನಾಳೆಯಿಂದ ನಾವೇ ಎಲ್ಲವನ್ನೂ ತೆರವುಗೊಳಿಸುತ್ತೇವೆ. ಮುಂದಿನ ದಿನಗಳಲ್ಲಿ ರಸ್ತೆ ನಿರ್ಮಾಣದ ವಿವಿಧ ಕಾಮಗಾರಿಗಳಿಗೆ ಕೈ ಹಾಕಬೇಕಿದೆ. ಎಲ್ಲರೂ ಸಹಕಾರ ನೀಡಿದಲ್ಲಿ ಆದಷ್ಟು ಬೇಗ ರಸ್ತೆ ನಿರ್ಮಾಣ ಕಾಮಗಾರಿ ಆರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಹೇಳಿದರು.ಕಟ್ಟಡ ಅವಶೇಷ ತೆರವು ಕಾರ್ಯ ಸಹ ತ್ವರಿತಗತಿಯಲ್ಲಿ ಮಾಡಲಾಗುತ್ತಿದೆ. ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಜಾಗ್ರತೆಯಿಂದ ಪೌರಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಅವರಿಗೆ ಕಟ್ಟಡ ಮಾಲೀಕರು ಸಹಕಾರ ನೀಡಬೇಕು. ಇನ್ನೂ ಕಟ್ಟಡ ತೆರವುಗೊಳಿಸಿದವರು ಬೇಗನೆ ತೆರವು ಮಾಡಿಕೊಳ್ಳಿ. ಇದು ಕೊನೆಯ ಅವಕಾಶ ಎಂದು ಮುಖ್ಯಾಧಿಕಾರಿ ವಿನಯಕುಮಾರ ಹೊಳೆಪ್ಪಗೋಳ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆರ್ಥಿಕ ಸ್ವಾವಲಂಬನೆಗಾಗಿ ದುಡಿಮೆ ಅನಿವಾರ್ಯ
ಕನಕಗಿರಿ ಉತ್ಸವ ಮುಂದೂಡಿಕೆ, ಜನರಿಗೆ ನಿರಾಸೆ