ಬ್ಯಾಡಗಿ: ಮಳೆ ಕೊರತೆಯಿಂದ ತಾಲೂಕಿನ ರೈತರು ಬೆಳೆಗಳನ್ನು ಉಳಿಸಿಕೊಳ್ಳಲಾಗದೆ ಟ್ರ‍್ಯಾಕ್ಟರ್ ಮೂಲಕ ನಾಶಪಡಿಸುವಂತಹ ದುಸ್ಥಿತಿ ಎದುರಿಸುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳದ ತಾಲೂಕಾಡಳಿತ ಸಂಪೂರ್ಣ ನಿಷ್ಕ್ರಿಯವಾಗಿದೆ. ತಹಸೀಲ್ದಾರ್ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಹೊಲಗಳಿಗೆ ಸೌಜನ್ಯಕ್ಕೂ ಭೇಟಿ ನೀಡದೆ ರೈತರ ಅಳಲನ್ನು ಕೇಳದಿರುವುದು ಅತ್ಯಂತ ಖಂಡನೀಯ ಎಂದು ಬಿಜೆಪಿ ತಾಲೂಕಾಧ್ಯಕ್ಷ ನಿಂಗಪ್ಪ ಬಟ್ಟಲಕಟ್ಟಿ ಆರೋಪಿಸಿದರು.
ರೈತರಿಗೆ ಅನ್ಯಾಯ: ರೈತರ ಸಂಕಷ್ಟದ ಸಮಯದಲ್ಲಿ ಹೊಲಗಳಿಗೆ ತೆರಳಿ ಧೈರ್ಯ ತುಂಬಬೇಕಾದ ತಹಸೀಲ್ದಾರ್ ಕಚೇರಿ ಬಿಟ್ಟು ಹೊರಬರುತ್ತಿಲ್ಲ, ಬೆಳೆ ನಾಶ ಮಾಡಿ 10 ದಿನ ಕಳೆದರೂ ಇದರ ಬಗ್ಗೆ ಒಂಚೂರು ಮಾಹಿತಿ ಪಡೆದಿಲ್ಲ, ಸ್ಥಳಕ್ಕೆ ಭೇಟಿ ನೀಡಿಲ್ಲ. ಕೇವಲ ಕಚೇರಿಯಲ್ಲಿ ಕುಳಿತುಕೊಂಡು ವರದಿಗಳಿಗಾಗಿ ಕಾಯುತ್ತಿರುವುದು ಅವರ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ. ರೈತರ ಸಮಸ್ಯೆಗಳನ್ನು ಆಲಿಸಿ ಸರ್ಕಾರಕ್ಕೆ ನೈಜ ವರದಿ ಸಲ್ಲಿಸುವ ಬದಲು ನಿರ್ಲಕ್ಷ್ಯ ವಹಿಸುತ್ತಿರುವುದು ರೈತರ ಮೇಲೆ ಅನ್ಯಾಯ ಎಸಗಿದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಾಸಕರ ಹೆಸರಿಗೆ ಧಕ್ಕೆ: ರೈತ ಮುಖಂಡ ಕಿರಣಕುಮಾರ ಗಡಿಗೋಳ ಮಾತನಾಡಿ, ತಾಲೂಕಿನಲ್ಲಿ ಬರದ ಛಾಯೆ ಆವರಿಸಿದ್ದರೂ ತಾಲೂಕು ಮಟ್ಟದಲ್ಲಿ ಯಾವುದೇ ತುರ್ತು ಸಭೆ, ಸ್ಥಳ ಪರಿಶೀಲನೆ ಅಥವಾ ರೈತರೊಂದಿಗೆ ಸಮಾಲೋಚನೆ ನಡೆಸದಿರುವುದು ತಾಲೂಕಾಡಳಿತದ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಇಂತಹ ಅಧಿಕಾರಿಗಳ ನಿರ್ಲಕ್ಷ್ಯದಿಂದ ರೈತರಲ್ಲಿ ಆತಂಕ ಹೆಚ್ಚಾಗಿದ್ದು, ಕೆಲವರು ಕೃಷಿಯನ್ನೇ ಕೈಬಿಡುವ ಸ್ಥಿತಿಗೆ ತಲುಪಿದ್ದಾರೆ. ಸ್ಥಳೀಯ ಶಾಸಕರು ಇಂತಹ ಅಧಿಕಾರಿಗಳಿಂದ ಅದ್ಯಾವ ರೀತಿಯ ಅಭಿವೃದ್ಧಿ ಹಾಗೂ ತಾಲೂಕಿನ ರೈತರ ಹಿತ ಕಾಯುತ್ತಾರೋ ತಿಳಿಸಲಿ ಎಂದರು.ರೈತರು ಆತ್ಮಹತ್ಯೆ ದಾರಿ ಹಿಡಿಯಬೇಕೆ?: ರೈತ ಶಿವನಗೌಡ ತೆವರಿ ಮಾತನಾಡಿ, ಸಾಲ ಮಾಡಿ ಬಿತ್ತನೆ ಮಾಡಿದ್ದೇವೆ. ಮಳೆ ಇಲ್ಲದೆ ಬೆಳೆ ಸಂಪೂರ್ಣ ಒಣಗಿದೆ. ಈಗ ಅದನ್ನೇ ಟ್ರ‍್ಯಾಕ್ಟರ್‌ನಿಂದ ನಾಶ ಮಾಡಿದ್ದೇವೆ. ನಮ್ಮ ಹೊಲಗಳಿಗೆ ಯಾವ ಅಧಿಕಾರಿಯೂ ಬಂ ದಿಲ್ಲ. ನಮ್ಮ ಕಷ್ಟ ಕೇಳುವವರೇ ಇಲ್ಲ, ಸಾಲ ಹೊರೆ ಜಾಸ್ತಿ ಆಗಿ ಆತ್ಮಹತ್ಯೆ ಮಾಡಿಕೊಳ್ಳುವುದು ಬಿಟ್ಟರೆ ನಮಗ್ಯಾವ ದಾರಿ ಕಾಣುತ್ತಿಲ್ಲ. ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ ರೈತರ ನೆರವಿಗೆ ಧಾವಿಸಬೇಕು ಎಂದು ಆಗ್ರಹಿಸಿದರು.
ಮಧ್ಯಂತರ ಪರಿಹಾರ ನೀಡಬೇಕು: ತಾಲೂಕಾಡಳಿತ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಕೂಡ ಬೆಳೆ ಹಾನಿ ಸಮೀಕ್ಷೆಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ತಾಲೂಕನ್ನು ಹಸಿ ಬರಗಾಲ ಪ್ರದೇಶವೆಂದು ಘೋಷಿಸಿ, ಪ್ರತಿ ಎಕರೆಗೆ ₹25 ಸಾವಿರ ಮಧ್ಯಂತರ ಪರಿಹಾರ ನೀಡಬೇಕು ಎಂದು ರೈತ ಮಹದೇವಪ್ಪ ಶಿಡೇನೂರ ಹೇಳಿದರು.