ಹೈಕೋರ್ಟ್ ವಿಭಾಗೀಯ ಪೀಠದ ಆದೇಶದ ಮಾಹಿತಿ ನೀಡಿದ ಟಿಎಂಎಸ್ ಮಾಜಿ ಅಧ್ಯಕ್ಷ

ಕನ್ನಡಪ್ರಭ ವಾರ್ತೆ ಯಲ್ಲಾಪುರತಾಲೂಕಿನ ಟಿಎಂಎಸ್ ಸಂಸ್ಥೆಯ ಚುನಾವಣೆ ಪ್ರಕ್ರಿಯೆ ವಿರುದ್ಧ ಎರಡು ಬಣಗಳು ಕಳೆದ ೯ ತಿಂಗಳಿನಿಂದ ಹೋರಾಟ ನಡೆಸಿ, ಬುಧವಾರ ಧಾರವಾಡ ವಿಭಾಗೀಯ ಉಚ್ಛ ನ್ಯಾಯಾಲಯ ಅಂತಿಮ ತೀರ್ಪು ನೀಡಿ ಅ ಮತ್ತು ಬ ವರ್ಗದ ಸದಸ್ಯರನ್ನು ಒಗ್ಗೂಡಿಸಿ, ಸಂಘದ ಬೈಲಾ ಪ್ರಕಾರವೇ ಮತ ಎಣಿಸಿ, ಒಂದು ವಾರದೊಳಗೆ ಚುನಾವಣೆ ಪ್ರಕ್ರಿಯೆಯನ್ನು ಮುಗಿಸಿ, ವಿಭಾಗೀಯ ಪೀಠಕ್ಕೆ ವರದಿ ಸಲ್ಲಿಸಲು ಚುನಾವಣಾಧಿಕಾರಿಗಳಿಗೆ ಆದೇಶಿಸಿದೆ ಎಂದು ಟಿಎಂಎಸ್ ಮಾಜಿ ಅಧ್ಯಕ್ಷ, ಆನಗೋಡು ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ ಹೇಳಿದರು.ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೈಕೋರ್ಟ್ ವಿಭಾಗೀಯ ಪೀಠದ ಆದೇಶದ ಮಾಹಿತಿ ನೀಡಿದರು. ತಾಲೂಕಿನ ಟಿಎಂಎಸ್‌ನಲ್ಲಿ ೨೫೦೦ಕ್ಕಿಂತಲೂ ಹೆಚ್ಚಿನ ಸದಸ್ಯರಿದ್ದು, ನಾನು ಕಳೆದ ೧೦ ವರ್ಷ ಅಧ್ಯಕ್ಷನಾಗಿ ಸಾಕಷ್ಟು ಜನಪರವಾಗಿ ಕೆಲಸ ಮಾಡಿದ್ದೇನೆ. ಇನ್ನೊಂದು ಅವಧಿಗೆ ಅಧ್ಯಕ್ಷನಾಗಿ ಹಿಂದೆ ಮಾಡಿದ ಅರ್ಧ ಯೋಜನೆಗಳನ್ನು ಪೂರ್ತಿಗೊಳಿಸುವ ಉದ್ದೇಶದಿಂದ ಚುನಾವಣೆಗೆ ನಿಂತೆ. ಸಹಕಾರ ಸಂಘಗಳಲ್ಲಿ ಇಷ್ಟೊಂದು ರಾಜಕೀಯ ಇರುತ್ತದೆಂದು ಭಾವಿಸಿರಲಿಲ್ಲ. ಜನರಿಗೆ ಅನ್ಯಾಯ ಆಗಬಾರದೆಂಬ ಒಂದೇ ಉದ್ದೇಶದಿಂದ ನನ್ನ ಬಳಿ ಹಣ ಇಲ್ಲದಿದ್ದರೂ, ಹಣ ಇದ್ದವರ ಜೊತೆ ಹೋರಾಟ ಅನಿವಾರ್ಯವಾಯಿತು. ನಮ್ಮನ್ನೇ ಹೋರಾಟಕ್ಕೆ, ನ್ಯಾಯಾಲಯಕ್ಕೆ ಎಳೆದಿದ್ದಾರೆ. ಜನರಿಗೆ ಎನ್.ಕೆ. ಭಟ್ಟರೇ ನ್ಯಾಯಾಲಯಕ್ಕೆ ಹೋಗಿದ್ದಾರೆಂದು ಪ್ರಚಾರ ಮಾಡಲಾಗಿತ್ತು. ಸತ್ಯದ ಅರಿವಾಗಲಿ ಎಂದು ಈ ಮಾಹಿತಿಯನ್ನು ನೀಡುತ್ತಿದ್ದೇನೆ ಎಂದರು.ಇಡಗುಂದಿ, ದೇಹಳ್ಳಿ, ಕಿರವತ್ತಿ ಸೇ.ಸ.ಸಂಘ ಮತ್ತು ಗಜಾನನ ಜಿ.ಭಟ್ಟ ಕಳಚೆ, ಆರ್.ಎಲ್.ಭಟ್ಟ ಕುಂಬಾರಕುಳಿ ಚುನಾವಣೆ ಪ್ರಕ್ರಿಯೆಗೆ ತಡೆ ತಂದಿದ್ದರು. ನಂತರ ಅದು ಹೈಕೋರ್ಟ್‌ವರೆಗೂ ಹೋರಾಟ ನಡೆಯಿತು ಎಂದು ವಿವರಿಸಿದರು. ಕಳೆದ ವರ್ಷ ೧೦ ಕೋಟಿಗೂ ಹೆಚ್ಚು ಲಾಭವನ್ನು ಸಂಸ್ಥೆ ಮಾಡಿತ್ತು. ಆದರೆ ಈ ಹೋರಾಟ, ಗೊಂದಲ ನಿರ್ಮಾಣದ ಪರಿಣಾಮ ಸಾವಿರಾರು ಕ್ವಿಂಟಲ್ ಅಡಕೆ ಬೇರೆ ಕಡೆ ಹೋಯಿತು. ಠೇವು ಕೂಡ ಬರಲಿಲ್ಲ. ನಮ್ಮ ರೈತರೆಲ್ಲ ವಯಸ್ಸಾದವರು, ಅಡಕೆಯನ್ನೇ ನಂಬಿ ಬದುಕುತ್ತಿದ್ದಾರೆ. ಹಾಗಾಗಿ ಅವರಿಗೆ ಸಹಾಯ ಮಾಡುವ ಉದ್ದೇಶದಿಂದ ಬೇರೆ ಜಾಗ ಖರೀದಿ ಮಾಡಿ ಅಡಕೆ ಪ್ರೊಸೆಸ್ ಯುನಿಟ್ ಹಾಕುವ ಉದ್ದೇಶ ಹೊಂದಿದ್ದೆವು. ತಾಲೂಕಿನ ರೈತರ ಹಿತದೃಷ್ಟಿಯಿಂದ ಈ ಹೋರಾಟವನ್ನು ಇಲ್ಲಿಗೆ ಮುಗಿಸಿ, ಮುಂದೆ ಸರ್ವೋಚ್ಚ ನ್ಯಾಯಾಲಯಕ್ಕೆ ಹೋಗದಂತೆ ನಮ್ಮ ವಿರುದ್ಧ ಹೋದವರಿಗೆ ದೇವರು ಬುದ್ಧಿ ನೀಡಲೆಂದು ಪ್ರಾರ್ಥಿಸುತ್ತೇನೆ ಎಂದರು.ಈ ಸಂದರ್ಭ ಪ್ರಮುಖರಾದ ಹರಿಪ್ರಕಾಶ ಕೋಣೆಮನೆ, ವೆಂಕಟ್ರಮಣ ಕಿರುಕುಂಭತ್ತಿ, ರಾಘವೇಂದ್ರ ಭಟ್ಟ ಹಾಸಣಗಿ, ಸುಬ್ಬಣ್ಣ ಬೋಳ್ಮನೆ, ವಿಘ್ನೇಶ್ವರ ಮೆಣಸುಮನೆ, ಕೆ.ಟಿ.ಹೆಗಡೆ ಇದ್ದರು.