ಗ್ರಾಮೀಣ ಭಾಗದ ಜನರಿಗೆ ಕೇಂದ್ರ ಸರ್ಕಾರದ ಅಂಚೆ ಸೇವೆ ಯಾವುದೇ ತೊಂದರೆಯಿಲ್ಲದೆ ಉತ್ತಮ ವಾತಾವರಣದಲ್ಲಿ ದೊರೆಯಬೇಕು
ಕೊಪ್ಪಳ: ಗ್ರಾಮೀಣ ಪ್ರದೇಶದ ಶಾಖಾ ಅಂಚೆ ಕಚೇರಿಗಳಿಗೆ ಸ್ವಂತ ಹಾಗೂ ಸುಸಜ್ಜಿತ ಕಟ್ಟಡ ಸಿಎಸ್ಆರ್ ನಿಧಿಯಡಿ ಹಿಟ್ನಾಳ,ಅಗಲಕೇರ ಹಾಗೂ ಗುಳದಳ್ಳಿ ಗ್ರಾಮಗಳಲ್ಲಿ ನಿರ್ಮಿಸಲಾದ ನೂತನ ಶಾಖಾ ಅಂಚೆ ಕಚೇರಿ ಕಟ್ಟಡಗಳನ್ನು ಸಂಸದ ರಾಜಶೇಖರ ಹಿಟ್ನಾಳ ಉದ್ಘಾಟಿಸಿದರು.
ಸಂಸದ ರಾಜಶೇಖರ ಹಿಟ್ನಾಳ ಮಾತನಾಡಿ, ಗ್ರಾಮೀಣ ಭಾಗದ ಜನರಿಗೆ ಕೇಂದ್ರ ಸರ್ಕಾರದ ಅಂಚೆ ಸೇವೆ ಯಾವುದೇ ತೊಂದರೆಯಿಲ್ಲದೆ ಉತ್ತಮ ವಾತಾವರಣದಲ್ಲಿ ದೊರೆಯಬೇಕು ಎಂಬ ಉದ್ದೇಶದಿಂದ ಸಿಎಸ್ಆರ್ ನಿಧಿ ಬಳಸಿಕೊಂಡು ಈ ಯೋಜನೆ ಜಾರಿಗೆ ತರಲಾಗಿದೆ ಎಂದು ಹೇಳಿದರು.ಗ್ರಾಮೀಣ ಪ್ರದೇಶದಲ್ಲಿ ಅಂಚೆ ಕಚೇರಿಗಳು ಕೇವಲ ಪತ್ರ ವ್ಯವಹಾರಕ್ಕೆ ಸೀಮಿತವಾಗದೆ ಬ್ಯಾಂಕಿಂಗ್ ಸೇವೆ, ಹಣ ವರ್ಗಾವಣೆ, ಉಳಿತಾಯ ಯೋಜನೆ ಹಾಗೂ ಕೇಂದ್ರ ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳ ಅನುಷ್ಠಾನದಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ.ಆದರೆ ಅನೇಕ ಕಡೆ ಸ್ವಂತ ಕಟ್ಟಡಗಳ ಕೊರತೆಯಿಂದ ಸಾರ್ವಜನಿಕರು ಮತ್ತು ಸಿಬ್ಬಂದಿ ತೊಂದರೆ ಅನುಭವಿಸುತ್ತಿದ್ದರು.ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸಿಎಸ್ಆರ್ ನಿಧಿಯ ಮೂಲಕ ಕಟ್ಟಡ ನಿರ್ಮಾಣದ ವಿನೂತನ ಪರಿಕಲ್ಪನೆ ರೂಪಿಸಲಾಗಿದೆ ಎಂದು ಹೇಳಿದ ಅವರು, ನೂತನ ಕಟ್ಟಡ ಸಾರ್ವಜನಿಕರು ಹಾಗೂ ಅಂಚೆ ಇಲಾಖೆ ಸಿಬ್ಬಂದಿ ಸಮರ್ಪಕವಾಗಿ ಬಳಸಿಕೊಂಡು ಗ್ರಾಮೀಣ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಈ ಕಾರ್ಯಕ್ರಮದಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ, ಮಾಜಿ ಶಾಸಕ ಕೆ. ಬಸವರಾಜ ಹಿಟ್ನಾಳ, ಕಿರ್ಲೋಸ್ಕರ್ ಹಾಗೂ ಮುಕ್ಕುಂದ ಸುಮಿ ಕಂಪನಿಗಳ ವ್ಯವಸ್ಥಾಪಕ ನಿರ್ದೇಶಕ ಗುಮಾಸ್ತೆ ಶಿವಸ್ವಾಮಿ, ಉದವ್ ಕುಲಕರ್ಣಿ, ಮಾರುತಿ, ರಾಜಶೇಖರ ಸೇರಿದಂತೆ ರಾಜಕೀಯ ಮುಖಂಡರು, ಅಂಚೆ ಇಲಾಖೆಯ ಅಧೀಕ್ಷಕ ನಾಗರಾಜ ಪಾಟೀಲ್ ಇತರೆ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಇದ್ದರು.