ಯಲಬುರ್ಗಾ: ಪತ್ರಕರ್ತರು ವಾಸ್ತವ ಮತ್ತು ನೈಜ ವರದಿ ಮಾಡಿದಾಗ ಮಾತ್ರ ಸಮಾಜದಲ್ಲಿ ವ್ಯವಸ್ಥೆ ಬದಲಾವಣೆಗೆ ಸಹಕಾರಿಯಾಗಲಿದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಅಶೋಕ ಕೆಂಚರಡ್ಡಿ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ನಾಟಕ ಕಾರ್ತನಿರತ ಪತ್ರಕರ್ತರ ಸಂಘದ ತಾಲೂಕು ಘಟಕದಿಂದ ಪತ್ರಿಕಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮ ಹಾಗೂ ಪತ್ರಕರ್ತರ ಕಾರ್ಡ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಧ್ಯಮ ಕ್ಷೇತ್ರಕ್ಕೆ ತನ್ನದೆಯಾದ ಇತಿಹಾಸವಿದೆ. ನೊಂದವರಿಗೆ ನ್ಯಾಯ ಒದಗಿಸುವಂತಹ ಕೆಲಸ ಮಾಧ್ಯಮ ಕ್ಷೇತ್ರದಿಂದ ಆಗುತ್ತಿದೆ. ಇಂತಹ ಪವಿತ್ರ ಕ್ಷೇತ್ರದಲ್ಲಿ ಕೆಲಸ ಮಾಡುವವರು ಸತ್ಯ ಪ್ರಾಮಾಣಿಕತೆ ಮತ್ತು ನಿಷ್ಠೆಗೆ ಬದ್ಧರಾಗಬೇಕು. ಈ ವೃತ್ತಿಯಲ್ಲಿ ಎಂದಿಗೂ ಹೊಂದಾಣಿಕೆ ಮಾಡಿಕೊಳ್ಳಬಾರದು. ಸರ್ಕಾರ ಎಚ್ಚರಿಸುವ ಮೂಲಕ ಸಮಾಜಕ್ಕೆ ಆಗುಹೋಗುಗಳ ಕೆಲಸ ಮಾಧ್ಯಮದ ಮೂಲಕ ಮಾಡುವುದು ಪತ್ರಕರ್ತರ ಕರ್ತವ್ಯವಾಗಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರಿ ಸೌಲಭ್ಯ ದೊರೆಯಬೇಕಾದರೆ ಮಾಧ್ಯಮದ ಪರಿಣಾಮಕಾರಿ ಕೆಲಸದಿಂದ ಯೋಜನೆ ತಲುಪಲು ಸಾಧ್ಯ ಎಂದರು.

ನಿವೃತ್ತ ಪ್ರಾಚಾರ್ಯ ಕೆ.ಎಚ್. ಛತ್ರದ ಮಾತನಾಡಿ, ಇತ್ತೀಚಿನ ಮಾಧ್ಯಮ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಕಾರಣ ಸಾಮಾಜಿಕ ಜಾಲತಾಣವು ವೇಗವಾಗಿ ಹರಡುತ್ತಿದೆ. ಇದರಿಂದ ಸತ್ಯಕ್ಕಿಂತ ಸುಳ್ಳೇ ಬಿಂಬಿತವಾಗಿದೆ. ಅಕ್ಷರ ಉಳಿಯಲು ಮುದ್ರಣ ಮಾಧ್ಯಮದ ಕೊಡುಗೆ ಮರೆಯುವಂತಿಲ್ಲ. ಈ ನಾಡಿನ ಅನೇಕ ಮಹನೀಯರು ಪತ್ರಿಕೋದ್ಯಮದಲ್ಲಿ ಸಾಕಷ್ಟು ಸೇವೆ ಸಲ್ಲಿಸಿದ್ದಾರೆ ಎಂದರು.

ಕೆಯುಡಬ್ಲುಜೆ ತಾಲೂಕು ಅಧ್ಯಕ್ಷ ಮಲ್ಲು ಮಾಟರಂಗಿ ಮಾತನಾಡಿ, ಸಾಹಿತಿ ಡಿವಿಜಿ ಕಟ್ಟಿದ ಈ ಸಂಘ ಶತಮಾನದ ಅಂಚಿನಲ್ಲಿದೆ. ಪತ್ರಿಕೋದ್ಯಮ ಉಳಿಯಲು ಮಹನೀಯರ ಕೊಡುಗೆ ಸಾಕಷ್ಟಿದೆ ಎಂದರು.


ಇದೇ ವೇಳೆಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 2026–27ನೇ ಸಾಲಿನ ನವೀಕೃತ ಸದಸ್ಯತ್ವ ಗುರುತಿನ ಚೀಟಿಗಳನ್ನು ಸದಸ್ಯರಿಗೆ ವಿತರಿಸಲಾಯಿತು. ಈ ಸಂದರ್ಭ ವಸತಿ ನಿಲಯ ಮೇಲ್ವಿಚಾರಕ ಬಸವರಾಜ ಅಸೂಟಿ, ಸಂಘದ ಗೌರವಾಧ್ಯಕ್ಷ ಇಮಾಮ್ ಸಂಕನೂರು, ಪ್ರಧಾನ ಕಾರ್ಯದರ್ಶಿ ಸಂತೋಷ ಬಂಡ್ರಿ, ಪದಾಧಿಕಾರಿ ಶಿವಪುತ್ರಯ್ಯ ಹಿತ್ತಲಮನಿ, ಮಹಾಂತೇಶ ಚಲವಾದಿ, ಶರಣು ಗುಮಗೇರಿ, ಪಾಲಾಕ್ಷ ಬಿ.ತಿಪ್ಪಳ್ಳಿ, ದೊಡ್ಡಬಸಪ್ಪ ಹಕಾರಿ, ಮಂಜು ರಾಜೊಳ್ಳಿ, ಬಾಳನಗೌಡ, ಶ್ರೀಧರ, ಕಾಲೇಜು ಸಿಬ್ಬಂದಿ ಕಲ್ಲಪ್ಪ ಸೇರಿದಂತೆ ಇತರರು ಇದ್ದರು.