ಹಾವೇರಿ: ಮತದಾನ ಪ್ರತಿಯೊಬ್ಬರ ಮೂಲಭೂತ ಹಕ್ಕು. ಮತದಾರರ ಚೀಟಿ ಅಸ್ತಿತ್ವದ ಗುರುತು. ಅದು ನಮ್ಮ ಜೀವಂತಿಕೆಯನ್ನು ತೋರಿಸುತ್ತದೆ. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಜಾರಿಗೊಳಿಸಿರುವ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ ಪಾಲ್ಗೊಳ್ಳುವ ಎಲ್ಲ ಅರ್ಹ ನಾಗರಿಕರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಸೇರ್ಪಡೆಗೊಳಿಸಬೇಕು ಎಂದು ವಿಧಾನಸಭೆ ಹಂಗಾಮಿ ಸಭಾಧ್ಯಕ್ಷ ಹಾಗೂ ಶಾಸಕ ರುದ್ರಪ್ಪ ಲಮಾಣಿ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಹಾವೇರಿ ವಿಧಾನಸಭಾ ಕ್ಷೇತ್ರದ ಬಿ.ಎಲ್.ಎ-2ಗಳ ಸಭೆಯಲ್ಲಿ ಮಾತನಾಡಿದ ಅವರು, ವಿಶೇಷ ಸಮಗ್ರ ಪರಿಷ್ಕರಣೆ ಈ ತಿಂಗಳಾಂತ್ಯದ ವರೆಗೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ನಮ್ಮ ಕಾಂಗ್ರೆಸ್ ಬಗ್ಗೆ ಅಭಿಮಾನ ಹೊಂದಿರುವ ದಲಿತರು, ಅಲೆಮಾರಿಗಳು ಹಾಗೂ ಶ್ರಮಿಕರ ಹೆಸರು ಮತದಾರರ ಪಟ್ಟಿಯಿಂದ ಹೊರ ಹೋಗದಂತೆ ನೋಡಿಕೊಳ್ಳಬೇಕಿದೆ. ತಮ್ಮ ದಾಖಲೆಗಳನ್ನು ಸಲ್ಲಿಸುವಾಗ ಯಾವುದೇ ಅಕ್ಷರ ಲೋಪವಾಗದಂತೆ ಎಚ್ಚರಿಕೆ ವಹಿಸಬೇಕಿದೆ. ನಮ್ಮ ಪಕ್ಷದ ಮತದಾರರನ್ನು ಹಿಡಿದಿಟ್ಟುಕೊಳ್ಳುವುದು ಕಾರ್ಯಕರ್ತರ ಜವಾಬ್ದಾರಿ ಎಂದರು.ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ ಮಾತನಾಡಿ, ನಮ್ಮ ದೇಶದಲ್ಲಿ ಮೊದಲ ಬಾರಿಗೆ ಮತದಾರರನ್ನು 18 ವಯಸ್ಸಿಗೆ ಅರ್ಹರನ್ನಾಗಿ ಮಾಡಿದ ಶ್ರೇಯಸ್ಸು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರಿಗೆ ಸಲ್ಲುತ್ತದೆ. ಸದ್ಯ ಕೇಂದ್ರ ಚುನಾವಣಾ ಆಯೋಗ ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ವರ್ತಿಸುತ್ತಿದೆ. ಕಾಂಗ್ರೆಸ್ ಪಕ್ಷದ ಮತದಾರರನ್ನು ಕಡೆಗಣಿಸಲು ಬಿಜೆಪಿಯೊಂದಿಗೆ ಕೈಜೋಡಿಸಿದೆ ಎಂದು ಆರೋಪಿಸಿದರು.
ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಂ. ಮೈದೂರ ಮಾತನಾಡಿ, ಹಾವೇರಿ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯನ್ನು ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸಿದೆ. ನಮ್ಮ ಪಕ್ಷದ ಏಜೆಂಟರು ಪ್ರತಿ ಮನೆ ಮನೆಗೆ ತೆರಳಿ ಅರ್ಹ ಮತದಾರರ ಹೆಸರುಗಳನ್ನು ಮತದಾರ ಪಟ್ಟಿಯಲ್ಲಿ ಸೇರ್ಪಡೆ ಮಾಡಬೇಕಿದೆ. ಅಧಿಕಾರಿಗಳ ಜತೆಗೆ ಸಂಪರ್ಕ ಸಾಧಿಸಿ ತಮ್ಮ ಜವಾಬ್ದಾರಿ ನಿಭಾಯಿಸಬೇಕಿದೆ ಎಂದರು.ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್. ಗಾಜಿಗೌಡ್ರ, ಮುಖಂಡರಾದ ಸಿ.ಬಿ. ಕುರವತ್ತಿಗೌಡ್ರ, ಎಂ.ಎಂ. ಹಿರೇಮಠ, ಬಸಪ್ಪ ಕಂಬಳಿ ಹಾಗೂ ವಿಧಾನಸಭಾ ಕ್ಷೇತ್ರದ ಏಜೆಂಟರು ಉಪಸ್ಥಿತರಿದ್ದರು.