ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಡಿಯಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನಿಂದಲೇ ಜಿಲ್ಲೆಗೆ ಒಂದರಂತೆ ಅಲ್ಪಸಂಖ್ಯಾತ ಮಹಿಳಾ ಪಿಯು ಕಾಲೇಜು ಆರಂಭಿಸಿದೆ. ಆದರೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿಲ್ಲ.

ನಾರಾಯಣ ಹೆಗಡೆ

ಹಾವೇರಿ: ಅಲ್ಪಸಂಖ್ಯಾತ ಸಮುದಾಯದ ಹೆಣ್ಣುಮಕ್ಕಳಿಗೆ ಉನ್ನತ ಶಿಕ್ಷಣ ನೀಡಬೇಕೆಂಬ ಉದಾತ್ತ ಉದ್ದೇಶದಿಂದ ಸರ್ಕಾರ ಈ ವರ್ಷದಿಂದ ಹಾವೇರಿ ಸೇರಿದಂತೆ ವಿವಿಧೆಡೆ 31 ಅಲ್ಪಸಂಖ್ಯಾತರ ಮಹಿಳಾ ಪದವಿಪೂರ್ವ ಕಾಲೇಜು ಆರಂಭಿಸಿದೆ. ಆದರೆ, ಕನಿಷ್ಠ ಮೂಲಸೌಕರ್ಯಗಳೂ ಇಲ್ಲದೇ ಕಾಲೇಜು ಆರಂಭವಾಗಿರುವುದರಿಂದ ವಿದ್ಯಾರ್ಥಿನಿಯರು ಸಮಸ್ಯೆ ಎದುರಿಸುತ್ತಿದ್ದಾರೆ.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಡಿಯಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನಿಂದಲೇ ಜಿಲ್ಲೆಗೆ ಒಂದರಂತೆ ಅಲ್ಪಸಂಖ್ಯಾತ ಮಹಿಳಾ ಪಿಯು ಕಾಲೇಜು ಆರಂಭಿಸಿದೆ. ಹಾವೇರಿ ನಗರದ ಮುನ್ಸಿಪಲ್‌ ಮೈದಾನದ ಬಳಿ ಇರುವ ಹಳೆಯ ಕಟ್ಟಡದಲ್ಲಿ ಈಗಾಗಲೇ ತರಗತಿಗಳು ಶುರುವಾಗಿವೆ.

ಹಳೇ ಕಟ್ಟಡದಲ್ಲೇ ಪಾಠ: ಪ್ರಸ್ತುತ ಈ ಕಾಲೇಜನ್ನು ಹಾವೇರಿ ಮುನ್ಸಿಪಲ್ ಹೈಸ್ಕೂಲ್ ಪಕ್ಕದಲ್ಲಿರುವ ಹಳೆಯ ಕಟ್ಟಡವೊಂದರಲ್ಲಿ ತಾತ್ಕಾಲಿಕವಾಗಿ ಆರಂಭಿಸಲಾಗಿದೆ. ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮೂರೂ ವಿಭಾಗಗಳ ತರಗತಿಗಳು ಇಲ್ಲಿಯೇ ನಡೆಯುತ್ತಿವೆ. ಪ್ರಸಕ್ತ ಸಾಲಿನಲ್ಲಿ ಪ್ರಥಮ ಪಿಯುಸಿಗೆ ಮೂರು ವಿಭಾಗ ಸೇರಿ ಒಟ್ಟು 75 ವಿದ್ಯಾರ್ಥಿನಿಯರು ಇಲ್ಲಿ ಪ್ರವೇಶ ಪಡೆದಿದ್ದಾರೆ. ಕಲಾ ವಿಭಾಗದಲ್ಲಿ 11 ಹಾಗೂ ವಾಣಿಜ್ಯ ವಿಭಾಗದಲ್ಲಿ 24 ವಿದ್ಯಾರ್ಥಿನಿಯರು ದಾಖಲಾಗಿದ್ದಾರೆ. ವಿಜ್ಞಾನ ವಿಭಾಗಕ್ಕೆ 40 ಬಾಲಕಿಯರು ಪ್ರವೇಶ ಪಡೆದಿದ್ದಾರೆ. ಪ್ರಚಾರದ ಕೊರತೆಯಿಂದ ಈ ಕಾಲೇಜು ಆರಂಭವಾಗಿರುವುದೇ ಅನೇಕರಿಗೆ ಗೊತ್ತಿಲ್ಲ. ಇಲ್ಲದಿದ್ದರೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿನಿಯರು ಪ್ರವೇಶ ಪಡೆಯುತ್ತಿದ್ದರು ಎಂಬ ಮಾತು ಕೇಳಿಬರುತ್ತಿದೆ.

ಪ್ರಯೋಗಾಲಯವಿಲ್ಲ: ಹೊಸ ಕಾಲೇಜು ಎಂದ ಮೇಲೆ ಕೊರತೆ ಸಾಮಾನ್ಯ. ಆದರೆ, ತಾತ್ಕಾಲಿಕ ವ್ಯವಸ್ಥೆ, ಸೌಲಭ್ಯವನ್ನೂ ಕಲ್ಪಿಸದೇ ತರಾತುರಿಯಲ್ಲೇ ಹಲವು ವರ್ಷಗಳಿಂದ ಖಾಲಿ ಬಿದ್ದಿದ್ದ ಹಳೆ ಕಟ್ಟಡವನ್ನೇ ಬಾಡಿಗೆ ಪಡೆದು ತರಗತಿ ಆರಂಭಿಸಲಾಗಿದೆ.

ಎಲ್ಲಕ್ಕಿಂತ ಮುಖ್ಯವಾಗಿ ಕಾಲೇಜಿನಲ್ಲಿ ವಿಜ್ಞಾನ ವಿಭಾಗಕ್ಕೆ ಅತಿ ಹೆಚ್ಚು ಅಂದರೆ 40 ವಿದ್ಯಾರ್ಥಿನಿಯರು ದಾಖಲಾಗಿದ್ದಾರೆ. ಆದರೆ, ಇವರಿಗೆ ಪ್ರಾಕ್ಟಿಕಲ್ಸ್ ಮಾಡಲು ಯಾವುದೇ ಪ್ರಯೋಗಾಲಯ ಸೌಲಭ್ಯವಿಲ್ಲ. ಪ್ರಯೋಗಾಲಯವೇ ಇಲ್ಲದೆ ವಿಜ್ಞಾನ ಪಾಠಗಳನ್ನು ಕೇವಲ ಬೋರ್ಡ್ ಮೇಲೆ ಕೇಳುವಂತಾಗಿದ್ದು, ಬಾಲಕಿಯರು ಪ್ರಾಯೋಗಿಕ ಜ್ಞಾನದಿಂದ ವಂಚಿತರಾಗುತ್ತಿದ್ದಾರೆ. ಪರೀಕ್ಷೆಯ ಸಮಯದಲ್ಲಿ ಇವರ ಗತಿಯೇನು ಎಂಬ ಆತಂಕ ಪೋಷಕರನ್ನು ಕಾಡುತ್ತಿದೆ.

15 ಅತಿಥಿ ಉಪನ್ಯಾಸಕರು: ಕಾಲೇಜಿನ ಶೈಕ್ಷಣಿಕ ಚಟುವಟಿಕೆಗಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಸದ್ಯಕ್ಕೆ 15 ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿದೆ. ಕರ್ಜಗಿ ವಸತಿ ಕಾಲೇಜಿನ ಉಪನ್ಯಾಸಕರು ಇಲ್ಲಿ ಪ್ರಭಾರ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಉಳಿದಂತೆ ಎಲ್ಲರೂ ಅತಿಥಿ ಉಪನ್ಯಾಸಕರಿಂದಲೇ ತರಗತಿ ನಡೆಯಬೇಕಿದೆ. ಸೋರುವ ಕಟ್ಟಡದಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಪಾಠ ಕೇಳುತ್ತಿದ್ದಾರೆ. ವಿಜ್ಞಾನ ವಿಭಾಗಕ್ಕೆ ಪ್ರಯೋಗಾಲಯದ ಕೊರತೆ ಇರುವುದರಿಂದ ಉಪನ್ಯಾಸಕರಿಗೂ ಬೋಧನೆ ಮಾಡುವುದು ಸವಾಲಾಗಿ ಪರಿಣಮಿಸಿದೆ.

ವಿದ್ಯಾರ್ಥಿನಿಯರ ಅಳಲು: ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಪ್ರತ್ಯೇಕವಾಗಿ ಕಾಲೇಜು ಆರಂಭಿಸಿರುವುದು ಸಂತೋಷ. ಆದರೆ, ವಿಜ್ಞಾನ ವಿಭಾಗಕ್ಕೆ ಲ್ಯಾಬ್ ಇಲ್ಲದಿದ್ದರೆ ಹೇಗೆ ಓದಬೇಕು? ಕಾಲೇಜು ಶುರುವಾಗಿ 15 ದಿನಗಳೇ ಕಳೆದರೂ ನಾವು ಥಿಯರಿಯನ್ನಷ್ಟೇ ಕೇಳಿ ಹೋಗುವಂತಾಗಿದೆ ಎಂದು ಅಳಲು ತೋಡಿಕೊಂಡಿರುವ ವಿದ್ಯಾರ್ಥಿನಿಯರು, ಆದಷ್ಟು ಬೇಗ ಸುಸಜ್ಜಿತ ಲ್ಯಾಬ್ ಹಾಗೂ ಸ್ವಂತ ಕಟ್ಟಡದ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿದರು.

ಆತಂಕ ಬೇಡ: ಕಾಲೇಜು ಮಂಜೂರಿ ತಡವಾದ್ದರಿಂದ ಸ್ವಲ್ಪ ಸಮಸ್ಯೆಯಾಗಿದೆ. ಪ್ರವೇಶ ಪಡೆಯಲು ಇನ್ನೂ ಕಾಲವಕಾಶವಿದೆ. ಈಗಾಗಲೇ ಡೆಸ್ಕ್‌ಗಳನ್ನು ಪೂರೈಸಿದ್ದು, ಇನ್ನು 15 ದಿನಗಳಲ್ಲಿ ಎಲ್ಲ ವ್ಯವಸ್ಥೆ ಮಾಡಲಾಗುವುದು. ಅಲ್ಪಸಂಖ್ಯಾತ ಮಹಿಳಾ ಪದವಿ ಕಾಲೇಜು ತರಲು ಕೂಡ ಪ್ರಯತ್ನ ನಡೆಸಿದ್ದೇವೆ. ವಕ್ಫ್‌ ಬೋರ್ಡ್‌ನಿಂದ ಜಾಗ ಪಡೆದು ಸ್ವಂತ ಕಟ್ಟಡ ನಿರ್ಮಿಸಲಾಗುವುದು. ಹಣಕಾಸಿನ ಯಾವುದೇ ಕೊರತೆಯಿಲ್ಲ. ವಿದ್ಯಾರ್ಥಿಗಳು ಮತ್ತು ಪಾಲಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿ ಅಬ್ದುಲ್‌ ರಶೀದ್ ಮಿರ್ಜಣ್ಣನವರ ಹೇಳಿದರು.