ಕೊಪ್ಪಳ: ಜಿಲ್ಲೆಯಲ್ಲಿ ಪ್ರಸ್ತುತ ಬಿತ್ತನೆಯಾಗಿರುವ ಬೆಳೆಗಳಿಗೆ ಅವಶ್ಯವಿರುವ ರಸಗೊಬ್ಬರ ಮತ್ತು ಮುಂದೆ ಬಿತ್ತನೆಗೆ ಅಗತ್ಯವಿರುವ ಬೀಜ,ಗೊಬ್ಬರ ಸಮರ್ಪಕವಾಗಿ ಪೂರೈಸಿ ಮುಂಗಾರು ಹಂಗಾಮಿನ ನಿರ್ವಹಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಡಾ.ಸುರೇಶ ಬಿ. ಇಟ್ನಾಳ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಮುಂಗಾರು ಹಂಗಾಮಿನ ನಿರ್ವಹಣೆಯ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಜಿಲ್ಲೆಯಲ್ಲಿ ಒಟ್ಟಾರೆ 219 ಬಿತ್ತನೆ ಬೀಜ ಹಾಗೂ 99 ರಸಗೊಬ್ಬರ ಮಾದರಿ ಗುಣಮಟ್ಟ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅದರಲ್ಲಿ 8 ಬಿತ್ತನೆ ಬೀಜ ಮಾದರಿ ಕಳಪೆಯಾಗಿರುವ ಬಗ್ಗೆ ಕಂಡು ಬಂದಿದ್ದು, ಈ ಬಗ್ಗೆ ಸಂಬಂಧಪಟ್ಟವರ ವಿರುದ್ಧ ಬೀಜ ಅಧಿನಿಯಮದನ್ವಯ ಕಾನೂನು ಕ್ರಮ ಕೈಗೊಳ್ಳಬೇಕು. ಜಿಲ್ಲೆಗೆ ಪೂರೈಕೆಯಾಗುವ ರಸಗೊಬ್ಬರ ರೈತರಿಗೆ ಸಮರ್ಪಕವಾಗಿ ವಿತರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಮುಂಗಾರು ಮತ್ತು ಹಿಂಗಾರು ಹಂಗಾಮಿನ ಕಳಪೆ ಹಾಗೂ ನಕಲಿ ಬಿತ್ತನೆ ಬೀಜ ಮತ್ತು ಕೀಟನಾಶಕ ಮಾರಾಟ ತಡೆಗಟ್ಟಲು ಈಗಾಗಲೇ ಜಿಲ್ಲಾಮಟ್ಟದಲ್ಲಿ ಕಾರ್ಯಪಡೆ ರಚಿಸಲಾಗಿದ್ದು, ಜಿಲ್ಲೆಯಾದ್ಯಂತ ಇರುವ ಬಿತ್ತನೆ ಬೀಜ ಕಾರ್ಯಪಡೆಯು ನಿರಂತರವಾಗಿ ಆಕಸ್ಮಿಕ ದಾಳಿ ನಡೆಸಿ. ದಾಸ್ತಾನು ಮತ್ತು ಗುಣಮಟ್ಟ ಪರಿಶೀಲಿಸಬೇಕು ಎಂದರು.
ಜಿಲ್ಲೆಯಲ್ಲಿ ನಕಲಿ ಅಥವಾ ಕಳಪೆ ಕೃಷಿ ಪರಿಕರ ಮಾರಾಟ ಮಾಡುವುದು ಕಂಡುಬಂದಲ್ಲಿ ಅಂತಹ ಮಾರಾಟಗಾರರ ಪರವಾನಗಿ ತಕ್ಷಣವೇ ಅಮಾನತುಗೊಳಿಸಬೇಕು. ಅಲ್ಲದೆ, ಬೀಜ ಕಾಯ್ದೆ 1966, ಬೀಜ ನಿಯಮಗಳು 1968 ಮತ್ತು ಕೀಟನಾಶಕಗಳ ಕಾಯ್ದೆ 1968 ಮತ್ತು ಕೀಟನಾಶಕ ನಿಯಮ 1971 ಮತ್ತು ತದನಂತರ ರೂಪಿಸಲಾಗಿರುವ ನಿಯಮಾವಳಿಗಳನ್ವಯ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಕ್ರಮ ಕೈಗೊಳ್ಳಬೇಕು. ರೈತರು ಕೃಷಿ ಪರಿಕರ ಖರೀದಿಸುವಾಗ ಕಡ್ಡಾಯವಾಗಿ ಅಧಿಕೃತ ರಸೀದಿ ಪಡೆಯುವಂತೆ ಮತ್ತು ಲೇಬಲ್ ಆಧಾರಿತ ಮಾಹಿತಿ ಗಮನಿಸುವಂತೆ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಮುಖಾಂತರ ರೈತರಿಗೆ ವ್ಯಾಪಕ ಜಾಗೃತಿ ಮೂಡಿಸಬೇಕು ಎಂದು ಸೂಚನೆ ನೀಡಿದರು.ಫಸಲ್ ಭೀಮಾ ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಒತ್ತು ಕೊಡಬೇಕು. ಬೆಳೆ ನಷ್ಟ ಅನುಭವಿಸಿದಲ್ಲಿ ಬೆಳೆವಿಮೆ ಸೌಲಭ್ಯ ಪಡೆಯಲು ರೈತರಿಗೆ ಸಲಹೆ ಮಾಡಬೇಕು. ಬೆಳೆವಿಮೆ ಸೇರಿದಂತೆ ಇನ್ನೀತರ ಕೃಷಿ ಸಂಬಂಧಿ ಸೌಕರ್ಯಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಎಫ್‌ಐಡಿ ಹೊಂದುವ ಬಗ್ಗೆ ಸಹ ರೈತ ವರ್ಗಕ್ಕೆ ಸೂಕ್ತ ಮಾರ್ಗದರ್ಶನ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ಸಲಹೆ ನೀಡಿದರು.
ಸಭೆಯಲ್ಲಿ ಜಿಪಂ ಸಿಇಒ ವರ್ಣಿತ್ ನೇಗಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ನಿರ್ಮಲಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹೇಮಂತ ಕುಮಾರ್, ಜಂಟಿ ಕೃಷಿ ನಿರ್ದೇಶಕ ಜಿ.ಡಿ.ಕೃಷ್ಣಮೂರ್ತಿ, ತೋಟಗಾರಿಕೆ ಜಂಟಿ ನಿರ್ದೇಶಕ ಕೃಷ್ಣ ಸಿ.ಉಕ್ಕುಂದ, ಉಪ ಕೃಷಿ ನಿರ್ದೇಶಕ ಎಲ್.ಸಿದ್ದೇಶ್ವರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ, ಜಿಲ್ಲೆಯ ಎಲ್ಲ ತಾಲೂಕಿನ ಸಹಾಯಕ ಕೃಷಿ ಅಧಿಕಾರಿ, ರೈತ ಸಂಪರ್ಕ ಅಧಿಕಾರಿ, ಗೊಬ್ಬರ ಮಾರಾಟ ಕಂಪನಿಗಳ ಪ್ರತಿನಿಧಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.