ಉಪ ಚುನಾವಣೆ: ಬಿರು ಬಿಸಿಲಿನಲ್ಲಿ ಅಭ್ಯರ್ಥಿಗಳ ಭರ್ಜರಿ ಪ್ರಚಾರ

KannadaprabhaNewsNetwork |  
Published : Apr 08, 2024, 01:02 AM IST
ಸುರಪುರ ತಾಲೂಕು ವ್ಯಾಪ್ತಿಯಲ್ಲಿ ಬಿರುಬಿಸಿಲಿನಲ್ಲಿ ಬಿಜೆಪಿ ಪ್ರಚಾರ. | Kannada Prabha

ಸಾರಾಂಶ

ಚುನಾವಣಾ ಇಲಾಖೆಗೆ ರಾಜಕೀಯ ಪಕ್ಷಗಳು ಮಾಡುವ ಖರ್ಚುಗಳನ್ನು ನಿತ್ಯ ಲೆಕ್ಕ ಕೊಡಬೇಕಿರುವುದರಿಂದ ನಾಯಕರು ಪೆಂಡಾಲ್, ಶ್ಯಾಮಿಯಾನ, ಖುರ್ಚಿಗಳನ್ನು ಹಾಕಿಸಿದೇ ಗ್ರಾಮಗಳಲ್ಲಿರುವ ಗುಡಿಗುಂಡಾರ, ಕಟ್ಟೆಗಳೇ ಚುನಾವಣಾ ಪ್ರಚಾರದ ತಾಣಗಳಾಗಿ ಮಾರ್ಪಟ್ಟಿವೆ.

ನಾಗರಾಜ್ ನ್ಯಾಮತಿ

ಕನ್ನಡಪ್ರಭ ವಾರ್ತೆ ಸುರಪುರ

ಚುನಾವಣಾ ಇಲಾಖೆಗೆ ರಾಜಕೀಯ ಪಕ್ಷಗಳು ಮಾಡುವ ಖರ್ಚುಗಳನ್ನು ನಿತ್ಯ ಲೆಕ್ಕ ಕೊಡಬೇಕಿರುವುದರಿಂದ ನಾಯಕರು ಪೆಂಡಾಲ್, ಶ್ಯಾಮಿಯಾನ, ಖುರ್ಚಿಗಳನ್ನು ಹಾಕಿಸಿದೇ ಗ್ರಾಮಗಳಲ್ಲಿರುವ ಗುಡಿಗುಂಡಾರ, ಕಟ್ಟೆಗಳೇ ಚುನಾವಣಾ ಪ್ರಚಾರದ ತಾಣಗಳಾಗಿ ಮಾರ್ಪಟ್ಟಿವೆ.

ಮಾರ್ಚ್ 16ರಿಂದಲೇ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಾಗಿದ್ದು, ಚುನಾವಣಾ ಪ್ರಚಾರ ಸಭೆ, ಸಮಾರಂಭ, ಇತರೆ ಯಾವುದೇ ಕಾರ್ಯಕ್ರಮಗಳನ್ನು ನಡೆಸಲು ಹಾಗೂ ರ‍್ಯಾಲಿ, ಫ್ಲೆಕ್ಸ್, ಬಂಟಿಂಗ್ಸ್, ಬ್ಯಾನರ್ ಅಳವಡಿಸಿಲು 24 ಗಂಟೆ ಮುಂಚೆಯೇ ಸಹಾಯಕ ಚುನಾವಣಾಧಿಕಾರಿಗಳ ಕಚೇರಿ ವತಿಯಿಂದ ಅನುಮತಿ ಪಡೆಯಬೇಕು. ಅನುಮತಿ, ಮೈಕ್, ಸ್ಪೀಕರ್, ಡಿಜೆ ಬಳಸಲು ಪೊಲೀಸ್ ಇಲಾಖೆಯಿಂದ ಪೂರ್ವಾನುಮತಿ ಪಡೆದಿರಬೇಕು. ಪ್ರತಿಯೊಂದು ಲೆಕ್ಕವಿರುತ್ತದೆ.

ಗುಡಿಗುಂಡಾರ: ಚುನಾವಣಾ ಪ್ರಚಾರಕ್ಕೆ ಹೋಗುವ ಗ್ರಾಮಗಳಲ್ಲಿ ಸಭೆ, ಸಮಾರಂಭ ಮಾಡದೇ ಅಲ್ಲಿರುವ ದೇಗುಲ, ಅಥವಾ ಹಳ್ಳಿಗರು ಕೂರುವ ಕಟ್ಟೆಗಳಲ್ಲಿ ರಾಜಕೀಯ ನಾಯಕರು ಗ್ರಾಮಸ್ಥರನ್ನು ಒಟ್ಟುಗೂಡಿಸಿ ಪ್ರಚಾರ ಮಾಡುತ್ತಿದ್ದಾರೆ. ಮೈಕ್‌ಗಳನ್ನು ಕೂಡ ಬಳಸುವುದು ತುಂಬ ಕಡಿಮೆಯಾಗಿದೆ.

ಏಪ್ರಿಲ್ ಮೊದಲ ವಾರದಿಂದ ಬಿಸಿಲಿನ ಉಷ್ಣಾಂಶ ೪2 ಡಿಗ್ರಿ ಸೆಲ್ಸಿಸ್‌ಗಿಂತ ಹೆಚ್ಚಾಗಿದ್ದರೂ ಇದ್ಯಾವುದನ್ನು ಲೆಕ್ಕಿಸಿದೆ ಲೋಕಸಭಾ ಮತ್ತು ಉಪಚುನಾವಣೆಗೆ ಸ್ಪರ್ಧಿಸಿರುವ ಪಕ್ಷದ ಅಭ್ಯರ್ಥಿಗಳು ಭರ್ಜರಿಯಾಗಿ ಪ್ರಚಾರ ಆರಂಭಿಸಿದ್ದಾರೆ. ಸುಡುಬಿಸಿಲು ಒಂದೆಡೆ ಮತ್ತೊಂದೆಡೆ ರಾಜಕೀಯ ನಾಯಕರು ಅಗ್ನಿಯಂತ ಆಶ್ವಾಸನೆಗಳಿಗೆ ಜನರು ಮಾತ್ರ ನಿತ್ರಾಣರಾಗುತ್ತಿದ್ದಾರೆ.

ಪಕ್ಷಾಂತರ: ಸುರಪುರ ಮತಕ್ಷೇತ್ರದಲ್ಲಿ ಪ್ರಸಕ್ತ ಸಾಲಿನ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಲ್ಲಿನ ನಾಯಕರ ಹೊಂದಾಣಿಕೆ ಕೊರತೆಯಿಂದ ಪಕ್ಷದಿಂದ ಪಕ್ಷಕ್ಕೆ ಜಿಗಿಯುತ್ತಿದ್ದಾರೆ. ಕಳೆದ ಸಾರ್ವತ್ರಿಕ ಚುನಾವಣೆಯ ಬೂತ್‌ಗಳಲ್ಲಿ ಲೀಡ್ ಕೊಟ್ಟಂತಹ ಮುಖಂಡರಿಗೆ ಭಾರೀ ಬೇಡಿಕೆಯಿದ್ದು, ಅವರನ್ನು ಪಕ್ಷಕ್ಕೆ ಕರೆತರುವ ಕೆಲಸವಾಗುತ್ತಿದೆ. ನಿತ್ಯ ಪಕ್ಷ ತೊರೆದು ಬೇರೆ ಪಕ್ಷಕ್ಕೆ ಹೋಗುವ ಪರ್ವ ಹೆಚ್ಚಾಗುತ್ತಿದೆ.

ಹೇಳಿಕೆಗಳ ವೈರಲ್: ಪ್ರಸ್ತುತ ರಾಜಕೀಯ ನಾಯಕರು ಮಾತನಾಡುವ ಒಂದೊಂದು ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಬಹದೊಡ್ಡ ಮಟ್ಟದಲ್ಲಿ ವೈರಲ್ ಆಗುತ್ತಿವೆ. ಬಿಜೆಪಿ ಮತ್ತು ಕಾಂಗ್ರೆಸ್ ಮುಖಂಡರು ಚುನಾವಣೆ ಪ್ರಚಾರ ಆರಂಭವಾದ ಬಳಿಕ ಕೊಡುವ ಹೇಳಿಕೆಗಳು ಚರ್ಚಿತವಾಗುತ್ತಿವೆ. ಒಬ್ಬರು ಮತ್ತೊಬ್ಬರನ್ನು ಕಾಲೆಳೆಯುವ ಕೆಲಸ ನಡೆಯುತ್ತಿದೆ.

ಕಟ್ಟುನಿಟ್ಟು: ನಾಮಪತ್ರ ಸಲ್ಲಿಕೆಯ ಬಳಿಕ ಚುನಾವಣೆಯ ವೆಚ್ಚ ಆರಂಭವಾಗುವುದು. ಚುನಾವಣೆ ಇಲಾಖೆಯಿಂದ ತಾಲೂಕಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಸಭೆ, ಸಮಾರಂಭಗಳು ನಡೆಯುವ ಬಗ್ಗೆ ಗಮನಿಸಲು ತಂಡ ರಚಿಸಲಾಗಿದೆ. ಚುನಾವಣೆ ಇಲಾಖೆಯ ಕಾನೂನುಗಳನ್ನು ಮೀರುವಂತಿಲ್ಲ. ಉಲ್ಲಂಘಿಸಿದರೆ ಕ್ರಮ ಅನಿವಾರ್ಯವಾಗುತ್ತದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

ಉದ್ಯೋಗ ಖಾತ್ರಿಯಡಿ ಕೆಲಸ ಮಾಡುವ ಸ್ಥಳಕ್ಕೆ ಹೋಗಿ ರಾಜಕೀಯ ಪಕ್ಷಗಳ ಮುಖಂಡರು ತಮ್ಮ ತಮ್ಮ ಪಕ್ಷಗಳ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ, ಕಾರ್ಮಿಕರಿಗೆ ತುಂಬ ಬೇಡಿಕೆ ಬಂದಂತಿದೆ. ಕೆಲಸ ನಿಮಿತ್ತ ನಗರಗಳಿಗೆ ಹೋಗಿರುವವರಿಗೆ ಮೊಬೈಲ್ ಕರೆ ಮಾಡಿ ಮನವೊಲಿಸುತ್ತಿದ್ದಾರೆ. ಇದು ಮತಕ್ಷೇತ್ರ ವ್ಯಾಪ್ತಿಯಲ್ಲಿ ತುಸು ಜೋರಾಗಿಯೇ ನಡೆಯುತ್ತಿದೆ. ಚುನಾವಣಾ ಮಾದರಿ ನೀತಿ ಸಂಹಿತೆ ಮಾರ್ಚ್ 16ರಿಂದ ಆರಂಭವಾಗಿದೆ. ನಾಮಪತ್ರ ಸಲ್ಲಿಸುವ ಮುನ್ನ ಮಾಡುವ ವೆಚ್ಚಗಳು ರಾಜಕೀಯ ಪಕ್ಷಗಳಿಗೆ ಸೇರುತ್ತದೆ. ನಾಮಪತ್ರ ಸಲ್ಲಿಕೆ ಬಳಕ ಅಭ್ಯರ್ಥಿಗಳ ಖರ್ಚುಗೆ ಸೇರ್ಪಡುತ್ತದೆ. ನ್ಯಾಯಸಮ್ಮತ ಚುನಾವಣೆಗೆ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ.

- ಕಾವ್ಯಾರಾಣಿ ಕೆ.ವಿ., ಸಹಾಯಕ ಚುನಾವಣಾಧಿಕಾರಿ.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ