ಹಿರಿಯ ನಾಗರಿಕರ ಸಂರಕ್ಷಣೆ ಅತ್ಯಗತ್ಯ

KannadaprabhaNewsNetwork |  
Published : Oct 13, 2025, 02:00 AM IST
50 | Kannada Prabha

ಸಾರಾಂಶ

ಹಿರಿಯ ನಾಗರಿಕರಿಗೆ ಸಾಮಾಜಿಕ ಭದ್ರತೆ, ಆರ್ಥಿಕ ಭದ್ರತೆ ಹಾಗೂ ಉತ್ತಮ ವಾತಾವರಣ ಕಲ್ಪಿಸುವ ಅರಿವು ಮೂಡಿಸುವ ನಿಟ್ಟಿನಲ್ಲಿ ಸರ್ಕಾರ ಪ್ರತೀ ವರ್ಷ ಅಕ್ಟೋಬರ್ ತಿಂಗಳಲ್ಲಿ ವಿಶ್ವ ಹಿರಿಯ ನಾಗರಿಕರ ದಿನವನ್ನು ಆಚರಿಸುತಿದೆ.

ಕನ್ನಡಪ್ರಭ ವಾರ್ತೆ ಪಿರಿಯಾಪಟ್ಟಣ

ಹಿರಿಯ ನಾಗರಿಕರ ಸಂರಕ್ಷಣೆಗಾಗಿ ಅನೇಕ ಕಾನೂನು ಜಾರಿಯಲ್ಲಿದ್ದು, ಅವುಗಳ ಉಪಯೋಗ ಪಡೆದುಕೊಳ್ಳಬೇಕು ಎಂದು ಪಟ್ಟಣದ ಪ್ರಥಮ ನ್ಯಾಯಾಲಯದ ಹಿರಿಯ ಶ್ರೇಣಿ ನ್ಯಾಯಾಧೀಶ ಎಂ. ರಾಜು ತಿಳಿಸಿದರು.

ತಾಲೂಕಿನ ಬೈಲುಕುಪ್ಪೆಯ ಲುಂಗ್ ಸಮ್ ನ್ಯಾಮ್ರಾಡೇಲ್ ಸಮುದಾಯ ಭವನದಲ್ಲಿ ತಾಲೂಕು ಕಾನೂನು ಸೇವಾ ಪ್ರಾಧಿಕಾರ, ಟಿಬೇಟಿಯನ್ ಲೋಕಲ್ ಜಸ್ಟೀಸ್ ಕಮಿಷನ್, ಪೊಲೀಸ್ ಇಲಾಖೆ ಸಹಯೋಗದಲ್ಲಿ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಹಿರಿಯ ನಾಗರಿಕರ ಹಕ್ಕುಗಳ ಕುರಿತು ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.

ಹಿರಿಯ ನಾಗರಿಕರಿಗೆ ಸಾಮಾಜಿಕ ಭದ್ರತೆ, ಆರ್ಥಿಕ ಭದ್ರತೆ ಹಾಗೂ ಉತ್ತಮ ವಾತಾವರಣ ಕಲ್ಪಿಸುವ ಅರಿವು ಮೂಡಿಸುವ ನಿಟ್ಟಿನಲ್ಲಿ ಸರ್ಕಾರ ಪ್ರತೀ ವರ್ಷ ಅಕ್ಟೋಬರ್ ತಿಂಗಳಲ್ಲಿ ವಿಶ್ವ ಹಿರಿಯ ನಾಗರಿಕರ ದಿನವನ್ನು ಆಚರಿಸುತಿದೆ. ಹಾಗಾಗಿ ಹಿರಿಯ ನಾಗರಿಕರು ಯಾವುದೇ ಹಿಂಜರಿಕೆ ಇಲ್ಲದೆ ಸಕ್ರಿಯವಾಗಿ ಕಾನೂನು ಅರಿವು ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಇದರಲ್ಲಿ ಪಾಲ್ಗೊಂಡು ತಮಗೆ ಅಗತ್ಯವಿರುವ ಮಾಹಿತಿ ಪಡೆಯಬಹುದು. ಹಿರಿಯ ನಾಗರಿಕರು ತಮ್ಮದೇ ವಯೋಮಾನದವರೊಂದಿಗೆ ಒಡನಾಡುವುದರಿಂದ ಮನಸ್ಸಿಗೆ ಹೊಸ ಹುರುಪು, ಲವಲವಿಕೆ ಉಂಟಾಗುವುದರೊಂದಿಗೆ ಜೀವನೋತ್ಸಾಹ ಹೆಚ್ಚುತ್ತದೆ. ಆದ್ದರಿಂದ ವಯಸ್ಸು ಕೇವಲ ದೇಹಕ್ಕೆ ಮಾತ್ರ ಮನಸ್ಸಿಗಲ್ಲ ಎಂಬ ಚಿಂತನೆಯೊಂದಿಗೆ ಪ್ರತಿಯೊಬ್ಬ ಹಿರಿಯ ನಾಗರಿಕರು ಎಲ್ಲಾ ಸ್ಪರ್ಧೆಗಳಲ್ಲಿ ಕ್ರಿಯಾಶೀಲರಾಗಿ, ಸಕ್ರಿಯವಾಗಿ ಪಾಲ್ಗೊಳ್ಳುವಂತೆ ತಿಳಿಸಿದರು.

ಸಿವಿಲ್ ಶ್ರೇಣಿ ನ್ಯಾಯಾಧೀಶ ಎಂ.ಆರ್. ಯೋಗೇಶ್ ಮಾತನಾಡಿ, ಹಿರಿಯ ನಾಗರಿಕರನ್ನು ಗೌರವದಿಂದ ಕಾಣುವುದು ಪ್ರತಿಯೊಬ್ಬರ ಸಾಮಾಜಿಕ ಜವಾಬ್ದಾರಿ. ಹಿರಿಯ ನಾಗರಿಕರೆಂದು ಅವರನ್ನು ನಿರ್ಲಕ್ಷ್ಯ ಮಾಡದೇ ಅವರು ತಮ್ಮ ವೃದ್ಧಾಪ್ಯ ಜೀವನವನ್ನು ನೆಮ್ಮದಿಯಿಂದ ಸಾಗಿಸಲು ಅನುವು ಮಾಡಿಕೊಡಬೇಕು. ಹಿರಿಯ ನಾಗರಿಕರಿಗೆ ಯಾವುದೇ ಕಚೇರಿಗಳಲ್ಲಿ, ಆಸ್ಪತ್ರೆಗಳಲ್ಲಿ ಅನ್ಯಾಯವಾಗುತ್ತಿದೆ ಎನಿಸಿದರೆ ತಾಲೂಕು ಕಾನೂನು ಸೇವಾ ಪ್ರಾಧಿಕಾರಕ್ಕೆ ಲಿಖಿತವಾಗಿ ತಿಳಿಸಿದರೆ ಸೂಕ್ತ ಕ್ರಮ ಕೈಗೊಂಡು ರಕ್ಷಣೆ ಒದಗಿಸಲಾಗುವುದು. ಮಕ್ಕಳಿಗೆ ತಮ್ಮ ವಯಸ್ಸಾದ ತಂದೆ ತಾಯಿಗಳನ್ನು ನೋಡಿಕೊಳ್ಳುವ ಜವಾಬ್ದಾರಿ ಇದೆ. ಹಿರಿಯ ನಾಗರಿಕರನ್ನು ನಿರ್ಲಕ್ಷಿಸಿದರೆ ಕಾನೂನು ರೀತಿ ಕ್ರಮಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.

ಗುರುಕುಲ ಸ್ಥಾಪಿಸಿ ವಿಶ್ವಕ್ಕೆ ಮಾದರಿಯಾಗಿದ್ದ ದೇಶದಲ್ಲಿ ಇಂದು ಅನಾಥಾಶ್ರಮಗಳು ಹೆಚ್ಚಾಗುತ್ತಿರುವುದು ವಿಷಾದಕರ. ಯುವಪೀಳಿಗೆ ಹಿರಿಯರನ್ನು ನಿರ್ಲಕ್ಷಿಸುತ್ತಿರುವುದು ಹೆಚ್ಚಾಗುತ್ತಿದ್ದು, ಅದನ್ನು ತಡೆಯಲು ಕಾನೂನು ನೆರವು ಪಡೆಯುವ ಅಗತ್ಯವಿದೆ. ಸಮಾಜದಲ್ಲಿ ಬಾಳುವ ಪ್ರತಿಯೊಬ್ಬರು ಜನನ ಪ್ರಮಾಣ ಪತ್ರ, ಮರಣ ಪ್ರಮಾಣ ಪತ್ರ, ಮದುವೆ ನೊಂದಣಿ ಹಾಗೂ ವಿಚ್ಚೇದನಕ್ಕೆ ಸಂಬಂಧಿಸಿದಂತೆ ದಾಖಲಾತಿಗಳನ್ನು ಹೊಂದಿರಬೇಕು. ವ್ಯಕ್ತಿಯೂ ಸಂವಿಧಾನದ ಚೌಕಟ್ಟಿನಲ್ಲಿ ಬದುಕಬೇಕು. ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರದ ಬಗ್ಗೆಯೂ ಅರಿವು ಮೂಡಿಸಬೇಕಾದ ಅಗತ್ಯವಿದೆ ಎಂದರು.

ಈ ವೇಳೆ ತಾಲೂಕು ವಕೀಲರ ಸಂಘದ ಅಧ್ಯಕ್ಷ ಧನಪಾಲ್, ಕಾರ್ಯದರ್ಶಿ ಆಯಿತನಹಳ್ಳಿ ಕೆ. ಶಂಕರ ಮೊದಲಾದವರು ಇದ್ದರು.

PREV

Recommended Stories

ಬಂಡಿಗಣಿಯಲ್ಲಿಂದು ಸರ್ವಧರ್ಮ ಮಹಾಸಂಗಮ: ಸಿಎಂ ಭಾಗಿ
ಆರೆಸ್ಸೆಸ್‌ ಬೆಳವಣಿಗೆ ಕೆಲ ಶಕ್ತಿ, ಸಂಘಟನೆಗಳಿಗೆ ಸಹಿಸಲಾಗ್ತಿಲ್ಲ: ಅರುಣಕುಮಾರ