ಬೈಂದೂರು: ಸ್ಕೂಬಾ ಡೈವಿಂಗ್ ಮೂಲಕ ಮತದಾನ ಜಾಗೃತಿ

KannadaprabhaNewsNetwork |  
Published : Mar 30, 2024, 12:59 AM IST
ಸ್ಕೂಬಾ29 | Kannada Prabha

ಸಾರಾಂಶ

ಮತದಾನ ಜಾಗೃತಿಗೆ ಸಂಬಂಧಿಸಿದಂತೆ ಶಿರೂರಿನ ಮಹಿಳೆಯರು ಲಂಗರು ಪ್ರದೇಶದಲ್ಲಿ ವಿವಿಧ ರಂಗೋಲಿಗಳನ್ನು ಬಿಡಿಸಿದ್ದು ಗಮನ ಸೆಳೆಯಿತು. ಬಳಿಕ ಜಿಲ್ಲಾಧಿಕಾರಿಗಳು ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು ಹಾಗೂ ಸಿಬ್ಬಂದಿ ಶಿರೂರಿನಿಂದ ನಾಯ್ಕನಕಲ್ಲು ಸ್ಕೂಬಾ ಡೈವಿಂಗ್ ಪ್ರದೇಶಕ್ಕೆ ತೆರಳಿ ವಿನೂತನವಾಗಿ ಮತದಾನ ಜಾಗೃತಿ ಅಭಿಯಾನದಲ್ಲಿ ಪಾಲ್ಗೊಂಡರು.

ಕನ್ನಡಪ್ರಭ ವಾರ್ತೆ ಬೈಂದೂರು

ಪ್ರಜಾಪ್ರಭುತ್ವಕ್ಕೆ ಚುನಾವಣೆಯೇ ತಳಪಾಯ. ಈ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯಬೇಕು ಮತ್ತು ಎಲ್ಲರೂ ಭಾಗವಹಿಸುವಂತಾಗಬೇಕು. ಜನರು ಊರ ಹಬ್ಬವನ್ನು ಉತ್ಸಾಹದಿಂದ ಆಚರಿಸುವಂತೆ ಮತದಾನವೂ ಆಗಬೇಕು ಎಂದು ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಕೆ. ಹೇಳಿದರು.

ಅವರು ಶುಕ್ರವಾರ ಉಡುಪಿ ಜಿಲ್ಲಾಡಳಿತ ಹಾಗೂ ಸ್ವೀಪ್ ಸಮಿತಿ ನೇತೃತ್ವದಲ್ಲಿ ಬೈಂದೂರು ತಾಲೂಕಿನ ಶಿರೂರು ಅಳ್ವೆಗದ್ದೆ ಮೀನುಗಾರಿಕಾ ಲಂಗರು ಪ್ರದೇಶದಲ್ಲಿ ಆಯೋಜಿಸಲಾಗಿದ್ದ ಮತದಾನ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇತ್ತೀಚಿಗೆ ಯುವಜನತೆ ಚುನಾವಣೆಯಿಂದ ವಿಮುಖರಾಗುತ್ತಿರುವುದು ಕಂಡುಬರುತ್ತಿದೆ. ಚುನಾವಣಾ ದಿನವೆಂದರೆ ರಜಾ ದಿನವಲ್ಲ. ಸಂವಿಧಾನ ನಮಗೆ ನೀಡುವ ಹಕ್ಕು ಹಾಗೂ ಜವಾಬ್ದಾರಿಯನ್ನು ನಿಭಾಯಿಸಲು ಇರುವ ದಿನ ಅದು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಶೇ.100 ಮತದಾನ ಆಗಬೇಕು ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷ ಪ್ರತೀಕ್ ಬಾಯಲ್, ಅಪರ ಜಿಲ್ಲಾಧಿಕಾರಿ ಮಮತಾ ಕುಮಾರಿ, ಸಹಾಯಕ ಆಯುಕ್ತೆ ರಶ್ಮಿ ಎಸ್.ಆರ್., ಕರಾವಳಿ ಕಾವಲು ಪಡೆಯ ಎಸ್ಪಿ ಮಿಥುನ್, ಸಹಾಯಕ ಚುನಾವಣಾಧಿಕಾರಿ ಮಂಜುನಾಥ್, ಬೈಂದೂರು ತಹಸೀಲ್ದಾರ್ ಪ್ರದೀಪ್, ಡಯಟ್ ಪ್ರಾಂಶುಪಾಲರಾದ ಗೋವಿಂದ ಮಡಿವಾಳ ಉಪಸ್ಥಿತರಿದ್ದರು.

ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಆನಂದ ಎಸ್. ಬಡಕುಂದಿ ಸ್ವಾಗತಿಸಿದರು. ಶಿರೂರು ಪಂಚಾಯಿತಿ ಪಿಡಿಒ ರಾಜೇಶ್ ವಂದಿಸಿದರು. ತಾಲೂಕು ಪಂಚಾಯಿತಿ ಸಿಬ್ಬಂದಿ ರೂಪಾ ಕಾರ್ಯಕ್ರಮ ನಿರೂಪಿಸಿದರು.

ಮತದಾನ ಜಾಗೃತಿಗೆ ಸಂಬಂಧಿಸಿದಂತೆ ಶಿರೂರಿನ ಮಹಿಳೆಯರು ಲಂಗರು ಪ್ರದೇಶದಲ್ಲಿ ವಿವಿಧ ರಂಗೋಲಿಗಳನ್ನು ಬಿಡಿಸಿದ್ದು ಗಮನ ಸೆಳೆಯಿತು. ಬಳಿಕ ಜಿಲ್ಲಾಧಿಕಾರಿಗಳು ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು ಹಾಗೂ ಸಿಬ್ಬಂದಿ ಶಿರೂರಿನಿಂದ ನಾಯ್ಕನಕಲ್ಲು ಸ್ಕೂಬಾ ಡೈವಿಂಗ್ ಪ್ರದೇಶಕ್ಕೆ ತೆರಳಿ ವಿನೂತನವಾಗಿ ಮತದಾನ ಜಾಗೃತಿ ಅಭಿಯಾನದಲ್ಲಿ ಪಾಲ್ಗೊಂಡರು. ಸಮುದ್ರದ ಮಧ್ಯೆಯೇ ಜಿಲ್ಲಾಧಿಕಾರಿಗಳು ಪ್ರತಿಜ್ಞಾ ವಿಧಿ ಬೋಧಿಸಿದರು. ಜಿಲ್ಲಾ ಪಂಚಾಯಿತಿ ಸಿಇಒ, ಅಪರ ಜಿಲ್ಲಾಧಿಕಾರಿ ಹಾಗೂ ಸಹಾಯಕ ಆಯುಕ್ತೆ ಸ್ಕೂಬಾ ಡೈವಿಂಗ್ ಮೂಲಕ ತೆರಳಿ ಮತದಾನ ಜಾಗೃತಿಯ ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು. ಮತದಾನ ಜಾಗೃತಿ ಬೋರ್ಡುಗಳನ್ನು ಪ್ರದರ್ಶಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ