ಕೇಶವ ಕುಲಕರ್ಣಿ
ಕನ್ನಡಪ್ರಭ ವಾರ್ತೆ ಜಮಖಂಡಿನಗರದಲ್ಲಿ ಸ್ವಲ್ಪ ಪ್ರಮಾಣದ ಮಳೆಯಾದರೆ ಸಾಕು ಜಲಾವೃತಗೊಳ್ಳುವ ದಿ.ಸಿದ್ದು ನ್ಯಾಮಗೌಡ ಬೈಪಾಸ್ ರಸ್ತೆ ಅಥವಾ ಮುಧೋಳ ಬೈಪಾಸ್ ರಸ್ತೆ, ಸರ್ಕಾರಿ ನೂತನ ವಿದ್ಯಾಲಯ ಶಾಲೆಯ ಎದುರಿಗೆ ಎಡ-ಬಲ ರಸ್ತೆಗಳು ಹಾಗೂ ಸಿಂಗಾಪುರ ಮಾದರಿಯಲ್ಲಿ ನಿರ್ಮಾಣಗೊಂಡಿರುವ ಕೇಂದ್ರ ಬಸ್ ನಿಲ್ದಾಣ ಆವರಣ ಎರಡೂ ಕಡೆಗಳಲ್ಲಿ ಜಲಾವೃತಗೊಂಡು ಕೆರೆಯಂತಾಗಿ ಗೊಚರಿಸುತ್ತವೆ.ಮಳೆಯಾದರೆ ಬೈಪಾಸ್ ರಸ್ತೆಯಲ್ಲಿ ಜನಸಂಚಾರ, ದ್ವಿಚಕ್ರ ವಾಹನಗಳ ಸಂಚಾರ ಸಂಪೂರ್ಣ ಸ್ಥಗಿತವಾಗುತ್ತದೆ. ಜಲಾವೃತಗೊಂಡ ರಸ್ತೆಗೆ ಬ್ಯಾರಿಕೇಡ್ ಅಳವಡಿಸುವ ಮೂಲಕ ಎರಡು ದಿನಗಳವರೆಗೆ ರಸ್ತೆ ಸಂಚಾರ ಸ್ಥಗಿತಗೊಳಿಸಲಾಗುತ್ತದೆ. ನೀರು ಹರಿದು ಹೋದ ನಂತರ ಮತ್ತೆ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುತ್ತದೆ. ಇದರಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಬೈಪಾಸ್ ಸಂಚಾರ ಸ್ಥಗಿತಗೊಂಡರೆ ವಾಹನ ಸವಾರರು ನಗರದಲ್ಲಿ ಪ್ರವೇಶ ಮಾಡುವ ಮೂಲಕ ಕಿರರಿದಾದ ರಸ್ತೆಗಳಲ್ಲಿ ಸಂಚರಿಸಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಇದರಿಂದ ಟ್ರಾಫಿಕ್ ಸಮಸ್ಯೆಗಳು ಹೆಚ್ಚಾಗುತ್ತವೆ. ವಯೋವೃದ್ಧರು, ವಿದ್ಯಾರ್ಥಿಗಳು, ಶಾಲಾ ವಾಹನಗಳ ಸಂಚಾರ, ತರಕಾರಿ ಮಾರಾಟಗಾರರು ಟ್ರಾಫಿಕ್ ಪರದಾಡುತ್ತಾರೆ.
ನಗರದ ಕೇಂದ್ರ ಬಸ್ ನಿಲ್ದಾಣದ ಮುಂಭಾಗದಲ್ಲಿ ನಗರಸಭೆ ವತಿಯಿಂದ ಅವೈಜ್ಞಾನಿಕವಾಗಿ ಚರಂಡಿ ನಿರ್ಮಾಣ ಮಾಡಿರುವುದರಿಂದ ಸಿಂಗಾಪುರ ಮಾದರಿ ಕೇಂದ್ರ ಬಸ್ ನಿಲ್ದಾಣ ಸಂಪೂರ್ಣ ಜಲಾವೃತಗೊಂಡು ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗುತ್ತಿದೆ. ಚಿಕ್ಕ ಮಕ್ಕಳು, ಲಗೇಗಜ್‌ಗಳನ್ನು ಎತ್ತಿಕೊಂಡು ಹೋಗಲು ಪ್ರಯಾಣಿಕರು ಹರಸಾಹಸ ಪಡಬೇಕಾಗುತ್ತದೆ.ಈಡೇರದ ಅಧಿಕಾರಿಗಳ ಭರವಸೆ
ಕಳೆದ ವರ್ಷ ಸುರಿದ ಭಾರೀ ಮಳೆಗೆ ದಿ.ಸಿದ್ದು ನ್ಯಾಮಗೌಡ ಬೈಪಾಸ್ ರಸ್ತೆ, ನೂತನ ವಿದ್ಯಾಲಯ ಶಾಲೆ ಹತ್ತಿರ ಮತ್ತು ಚೌಡಯ್ಯನಗರ, ಸಿದ್ದಮುತ್ಯಾ ದೇವಸ್ಥಾನ ಹತ್ತಿರದ ಮನೆಗಳು ಜಲಾವೃತಗೊಂಡು ತೀವ್ರ ತೊಂದರೆಯಾಗಿತ್ತು. ಅಂದಿನ ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಉಪವಿಭಾಗಾಧಿಕಾರಿ ಶ್ವೇತಾ ಬೀಡಕರ, ಹಿಂದಿನ ನಗರಸಭೆ ಪೌರಾಯುಕ್ತೆ ಲಕ್ಷ್ಮೀ ಅಷ್ಟಗಿ ಸಹಿತ ವಿವಿಧ ಇಲಾಖೆಗಳ ಅಧಿಕಾರಿಗಳು ಭೇಟಿ ನೀಡಿ 6 ತಿಂಗಳಲ್ಲಿ ಶಾಶ್ವತ ಪರಿಹಾರ ಒದಗಿಸುವುದಾಗಿನೀಡಿದ್ದ ಭರವಸೆಗಳು ಈವರೆಗೂ ಈಡೇರಿಲ್ಲ. ಸಾರ್ವಜನಿಕರು ಮಾತ್ರ ಮಳೆಗಾಲದಲ್ಲಿ ತೊಂದರೆ ಅನುಭವಿಸುವದು ತಪ್ಪಿಲ್ಲ.
ಟೆಂಡರ್ ಮುಗಿದಿದೆ, ಆದೇಶ ನೀಡಿಲ್ಲಪ್ರತಿವರ್ಷ ಮಳೆಗಾಲದಲ್ಲಿ ದಿ.ಸಿದ್ದು ನ್ಯಾಮಗೌಡ ಬೈಪಾಸ್ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡು ಜನರಿಗೆ ಆಗುತ್ತಿರುವ ತೊಂದರೆಗಳಿಗೆ ಶಾಶ್ವತ ಪರಿಹಾರ ನೀಡುವುದಕ್ಕಾಗಿ ಜಿಲ್ಲಾಧಿಕಾರಿ ಮತ್ತು ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ಸರಕಾರಿ ಇಲಾಖೆಗಳಿಂದ ಟೆಂಡರ್ ಕರೆಯಲಾಗಿತ್ತು. ಅದರಲ್ಲಿ ನಗರಸಭೆ, ಪಿ.ಡಬ್ಲೂ.ಡಿ ಮತ್ತು ಜಿಪಂ ಮೂರು ಇಲಾಖೆಗಳು ಟೆಂಡರ್ ಹಾಕಿದ್ದವು. ಕಡಿಮೆ ಮೊತ್ತ ₹1.40 ಕೋಟಿ ಸಲ್ಲಿಸಿದ್ದ ನಗರಸಭೆ ಟೆಂಡರ್ ಲಭಿಸಿದೆ. ಟೆಂಡರ್ ಆಗಿ 6 ತಿಂಗಳ ಕಳೆದರೂ ಕಾಮಗಾರಿ ಆರಂಭಕ್ಕೆ ಆದೇಶ ಪತ್ರ ನೀಡಿಲ್ಲ. ಅನುದಾನ ಬಿಡುಗಡೆ ಆದೇಶ ನೀಡುತ್ತಿಲ್ಲ. ಯಾರ ತಪ್ಪಿನಿಂದ ವಿಳಂಭವಾಗುತ್ತಿದೆ ಎಂಬುವುದು ಬಹಿರಂಗ ಆಗಬೇಕಿದೆ. ಮಳೆಗಾಲದಲ್ಲಿ ಬೈಪಾಸ್ ರಸ್ತೆ ಜಲಾವೃತ ಕುರಿತು ಕನ್ನಡಪ್ರಭ ಪತ್ರಿಕೆ ನಿರಂತರವಾಗಿ ವರದಿ ಮಾಡಿ ಗಮನ ಸೆಳೆಯುತ್ತದೆ. ಆದರೂ ಸಂಬಂಧಿಸಿದ ಇಲಾಖೆಯ ವೇಗ ಮಾತ್ರ ಆಮೆ ಗತಿಯಲ್ಲಿರುವುದರಿಂದ ಕಾಮಗಾರಿಗೆ ಅದೇಶ ಬಂದಿಲ್ಲ.
ಮಳೆಗಾಲದಲ್ಲಿ ದಿ.ಸಿದ್ದು ನ್ಯಾಮಗೌಡ ಬೈಪಾಸ್ ರಸ್ತೆ ಜಲಾವೃತಗೊಂಡು ವಾಹನಗಳ ಸಂಚಾರ ಸ್ಥಗಿತ ಮತ್ತು ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಕಾಮಗಾರಿ ಟೆಂಡರ್ ಕರೆದ ಸಂದರ್ಭದಲ್ಲಿ ನಗರಸಭೆ ₹1.40 ಕೋಟಿ ವೆಚ್ಚದ ಟಂಡರ್ ಹಾಕಿತ್ತು. ನಗರಸಭೆ ಕಾಮಗಾರಿ ಟೆಂಡರ್ ಮಂಜೂರಿ ಆಗಿದೆ. ಆದರೆ ಆದೇಶ ಪತ್ರ ಬಂದಿಲ್ಲ. ಅಂದಿನ ಜಿಲ್ಲಾಧಿಕಾರಿಗಳು, ಹಿಂದಿನ ಅಧ್ಯಕ್ಷ ಪರಮಾನಂದ ಗವರೋಜಿ ಅವರಿಗೆ ಸೂಚಸಿದ್ದರು. ಯಾವುದೇ ಆದೇಶ ಪತ್ರ ಬರದೇ ಇರುವುದರಿಂದ ಕಾಮಗಾರಿ ಆರಂಭಿಸಿಲ್ಲ.- ಜ್ಯೋತಿಗಿರೀಶ, ನಗರಸಭೆ ಪೌರಾಯುಕ್ತರು ಜಮಖಂಡಿ