ಬೈಪಾಸ್ ರಸ್ತೆ ಕಾಮಗಾರಿ ವಿಳಂಬ: ರಸ್ತೆ ಧೂಳುಮಯ

KannadaprabhaNewsNetwork |  
Published : Aug 15, 2026, 03:00 AM IST
ವಿಜೆಪಿ ೧೩ದೇವನಹಳ್ಳಿ ಚಿಕ್ಕಬಳ್ಳಾಪುರ ರಸ್ತೆಯ ಬೈಪಾಸ್ ರಸ್ತೆಯಲ್ಲಿ ವಾಹನಗಳ ಓಡಾಟದಿಂದ ಹೆಚ್ಚಿರುವ ಸಂಚಾರ ಸಮಸ್ಯೆ ಹಾಗೂ ಧೂಳಿನ ಸಮಸ್ಯೆ | Kannada Prabha

ಸಾರಾಂಶ

ವಿಜಯಪುರ: ಪಟ್ಟಣದ ಬೈಪಾಸ್ ರಸ್ತೆ ಕಾಮಗಾರಿ ಹೆಸರಿನಲ್ಲಿ ಏಳುತ್ತಿರುವ ನಿರಂತರ ಧೂಳು ಹಾಗೂ ಸಂಚಾರ ದಟ್ಟಣೆಯಿಂದ ಬೇಸತ್ತಿರುವ ಸಾರ್ವಜನಿಕರು, ಶೀಘ್ರವೇ ರಸ್ತೆ ಡಾಂಬರೀಕರಣ ಮಾಡದಿದ್ದರೆ ಬೈಪಾಸ್ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸುವುದಾಗಿ ಸರ್ಕಾರ ಹಾಗೂ ಸಚಿವರಿಗೆ ಎಚ್ಚರಿಕೆ ನೀಡಿದ್ದಾರೆ

ವಿಜಯಪುರ: ಪಟ್ಟಣದ ಬೈಪಾಸ್ ರಸ್ತೆ ಕಾಮಗಾರಿ ಹೆಸರಿನಲ್ಲಿ ಏಳುತ್ತಿರುವ ನಿರಂತರ ಧೂಳು ಹಾಗೂ ಸಂಚಾರ ದಟ್ಟಣೆಯಿಂದ ಬೇಸತ್ತಿರುವ ಸಾರ್ವಜನಿಕರು, ಶೀಘ್ರವೇ ರಸ್ತೆ ಡಾಂಬರೀಕರಣ ಮಾಡದಿದ್ದರೆ ಬೈಪಾಸ್ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸುವುದಾಗಿ ಸರ್ಕಾರ ಹಾಗೂ ಸಚಿವರಿಗೆ ಎಚ್ಚರಿಕೆ ನೀಡಿದ್ದಾರೆ.

ಪಟ್ಟಣದ ಅಂಗ ತಟ್ಟಿ ನಂಜುಂಡಪ್ಪ ವೃತ್ತದಿಂದ ಚಿಕ್ಕಬಳ್ಳಾಪುರ ರಸ್ತೆಯಲ್ಲಿ ಚತುಷ್ಪಥ ಕಾಂಕ್ರೀಟೀಕರಣ ಕಾಮಗಾರಿ ನಡೆಯುತ್ತಿದ್ದು, ಆ ಭಾಗದ ರಸ್ತೆಯನ್ನು ಸಂಪೂರ್ಣ ಮುಚ್ಚಲಾಗಿದೆ. ಇದರಿಂದಾಗಿ ಚಿಕ್ಕಬಳ್ಳಾಪುರದಿಂದ ಕೋಲಾರ ಹಾಗೂ ಶಿಡ್ಲಘಟ್ಟದಿಂದ ಬೆಂಗಳೂರು ಕಡೆಗೆ ಹೋಗುವ ಎಲ್ಲಾ ವಾಹನಗಳು ಚಿಕ್ಕಬಳ್ಳಾಪುರ ರಸ್ತೆಯ ಪ್ರಗತಿ ಕಾಲೇಜಿನಿಂದ ದೇವನಹಳ್ಳಿ ರಸ್ತೆಯ ವಿಜಯ ವೀರಾಂಜನೇಯಸ್ವಾಮಿ ದೇವಾಲಯದವರೆಗಿನ ಬೈಪಾಸ್ ರಸ್ತೆಯಲ್ಲೇ ಸಂಚರಿಸುತ್ತಿದ್ದು, ವಾಹನಗಳ ಒತ್ತಡ ನಾಲ್ಕು ಪಟ್ಟು ಹೆಚ್ಚಾಗಿದೆ. ಈ ರಸ್ತೆ ಡಾಂಬರೀಕರಣಕ್ಕೆ ಗುದ್ದಲಿಪೂಜೆ ನೆರವೇರಿಸಿ ೬ ತಿಂಗಳು ಕಳೆದರೂ ಕಾಮಗಾರಿ ನಡೆದಿಲ್ಲ. ರಸ್ತೆ ಹಳ್ಳಗಳಿಗೆ ಕೇವಲ ಜಲ್ಲಿ ಪುಡಿ ತುಂಬಿರುವುದರಿoದ ಧೂಳು ಮುಗಿಲು ಮುಟ್ಟುತ್ತಿದ್ದು, ಶಾಲಾ ಮಕ್ಕಳು, ರೋಗಿಗಳು ಹಾಗೂ ಸಾರ್ವಜನಿಕರು ತೀವ್ರ ಉಸಿರಾಟದ ಸಮಸ್ಯೆಗೆ ಈಡಾಗುತ್ತಿದ್ದಾರೆ.

ಇದೇ ರಸ್ತೆಯಲ್ಲಿ ಈಗಾಗಲೇ ಎರಡು ಕಡೆ ಒಳಚರಂಡಿ ಮುಚ್ಚಳಗಳು ಹಾಳಾಗಿದ್ದು ಅದರಲ್ಲಿ ಒಂದೆಡೆ ಗಿಡಗಳನ್ನು ನೆಟ್ಟಿದ್ದು ಮತ್ತೊಂದೆಡೆ ಹಾಗೆಯೇ ಬಿಟ್ಟಿರುವ ಕಾರಣ ಅಪಘಾತಗಳಿಗೆ ಆಹ್ವಾನ ನೀಡುವಂತಿದೆ. ಅದರಲ್ಲಿಯೂ ರಾತ್ರಿ ಸಮಯದಲ್ಲಿ ದ್ವಿಚಕ್ರ ವಾಹನಗಳೇನಾದರೂ ಅದರಲ್ಲಿ ಬಿದ್ದರೆ ಸವಾರರು ಜೀವಂತ ಸಮಾಧಿ ಆಗುವುದು ಖಚಿತ.

ದಿನಕ್ಕೆ ಹತ್ತಾರು ಬಾರಿ ಕಸ ಗುಡಿಸಿದರೂ ಅಂಗಡಿ-ಮನೆಗಳಿಗೆ ಧೂಳು ತುಂಬಿಕೊಳ್ಳುತ್ತಿದೆ. ಖಾಸಗಿಯಾಗಿ ಸಾವಿರಾರು ರುಪಾಯಿ ವೆಚ್ಚ ಮಾಡಿ ಟ್ಯಾಂಕರ್‌ನಿಂದ ನೀರು ಸಿಂಪಡಿಸಿದರೂ ವ್ಯಾಪಾರ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ವ್ಯಾಪಾರಿಯೊಬ್ಬರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಚತುಷ್ಪಥ ರಸ್ತೆ ಗುತ್ತಿಗೆದಾರ ರವೀಶ್‌ ಪ್ರತಿಕ್ರಿಯಿಸಿ, ಬೆಸ್ಕಾಂನವರು ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ ಸಹಕರಿಸುತ್ತಿಲ್ಲ. ಪುರಸಭೆ ಗುತ್ತಿಗೆದಾರರು ಕುಡಿಯುವ ನೀರಿನ ಪೈಪ್‌ಗಳನ್ನು ೩ ಅಡಿ ಆಳಕ್ಕೆ ಅಳವಡಿಸುವ ಬದಲು ಅರ್ಧ ಅಡಿಗೆ ಅಳವಡಿಸಿದ್ದು, ಕಾಮಗಾರಿ ವೇಳೆ ಹಾಳಾದರೆ ರಿಪೇರಿ ವೆಚ್ಚ ನಮ್ಮ ಮೇಲೆಯೇ ಬೀಳುತ್ತಿದೆ ಎಂದು ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ. ಪ್ರತಿಭಟನೆ ಎಚ್ಚರಿಕೆ:

ಸಾರ್ವಜನಿಕರ ತಾಳ್ಮೆ ಎಲ್ಲೆ ಮೀರಿದ್ದು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನೆಪ ಹೇಳುವುದನ್ನು ಬಿಟ್ಟು ತಕ್ಷಣವೇ ರಸ್ತೆ ಡಾಂಬರೀಕರಣ ಮಾಡಬೇಕು. ಇಲ್ಲವಾದಲ್ಲಿ ರಸ್ತೆಯನ್ನು ಸಂಪೂರ್ಣವಾಗಿ ತಡೆದು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಸಾರ್ವಜನಿಕರು ಎಚ್ಚರಿಸಿದ್ದಾರೆ.

ಕೋಟ್‌...........

ಅಭಿವೃದ್ಧಿ ಕಾರ್ಯಗಳು ನಡೆಯುವಾಗ ತಾತ್ಕಾಲಿಕ ತೊಂದರೆ ಸಹಜ. ಈಗಾಗಲೇ ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ಗಳ ಜೊತೆ ಮಾತನಾಡಿದ್ದು, ಶೀಘ್ರವೇ ಡಾಂಬರೀಕರಣ ನಡೆಸಲಾಗುವುದು

-ಸತ್ಯನಾರಾಯಣ, ಮುಖ್ಯಾಧಿಕಾರಿ, ಪುರಸಭೆ

(ಫೋಟೋ ಕ್ಯಾಫ್ಷನ್‌)

ದೇವನಹಳ್ಳಿ-ಚಿಕ್ಕಬಳ್ಳಾಪುರ ಬೈಪಾಸ್ ರಸ್ತೆಯಲ್ಲಿ ವಾಹನಗಳ ಓಡಾಟದಿಂದ ಹೆಚ್ಚಿರುವ ಸಂಚಾರ ಸಮಸ್ಯೆ ಹಾಗೂ ಧೂಳಿನ ಸಮಸ್ಯೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮೀರ್ ಮೊಬೈಲಲ್ಲಿ ಭಾರತ ವಿರೋಧಿ ಮ್ಯಾಪ್‌!
ಗ್ರಾಪಂ ವ್ಯಾಪ್ತಿಗೆ ಒಳಪಡದ ಕೆಲಸ ವಹಿಸದಂತೆ ಸಿಬ್ಬಂದಿ ಮನವಿ