ಶಿವರಾತ್ರಿ ಹಬ್ಬದ ಹಿನ್ನೆಲೆ ಬೆಂಗಳೂರಿನಿಂದ ವಿಜಯಪುರಕ್ಕೆ ಫೆ. 13, 14ರಂದು ಸಂಚರಿಸಲಿದ್ದು, ಫೆ. 16ರಂದು ವಿಜಯಪುರದಿಂದ ಬೆಂಗಳೂರಿಗೆ ವಿಶೇಷ ರೈಲು ಸಂಚಾರ ಮಾಡಲಿದೆ. ಈ ರೈಲು ಗದಗ ಮತ್ತು ಹುಬ್ಬಳ್ಳಿ ರೈಲ್ವೆ ನಿಲ್ದಾಣಗಳನ್ನು ಪ್ರವೇಶಿಸದೆ ಬೈಪಾಸ್ ಮೂಲಕ ಸಾಗಲಿದೆ.
ಶಿವಕುಮಾರ ಕುಷ್ಟಗಿ
ಗದಗ: ವಿಜಯಪುರ ಮತ್ತು ಬೆಂಗಳೂರು ನಡುವಿನ ರೈಲ್ವೆ ಪ್ರಯಾಣದ ಅವಧಿ ಕಡಿಮೆ ಮಾಡುವ ರೈಲ್ವೆ ಇಲಾಖೆಯ ಪ್ರಯತ್ನ ಇದೀಗ ಹೊಸ ವಿವಾದಕ್ಕೆ ನಾಂದಿ ಹಾಡಿದ್ದು, ಪ್ರಯಾಣದ ಸಮಯ ಉಳಿಸಲು ಗದಗ- ಹುಬ್ಬಳ್ಳಿ ಬೈಪಾಸ್ ಮಾರ್ಗವನ್ನು ಬಳಸುತ್ತಿರುವುದು ಒಂದು ಕಡೆ ವಿಜಯಪುರ ಭಾಗದ ಪ್ರಯಾಣಿಕರಿಗೆ ಖುಷಿ ತಂದಿದ್ದರೆ, ಇನ್ನೊಂದೆಡೆ ಗದಗ ರೈಲ್ವೆ ನಿಲ್ದಾಣದ ಅಸ್ತಿತ್ವಕ್ಕೆ ಧಕ್ಕೆ ತರುತ್ತಿದೆ ಎಂಬ ಆತಂಕ ಸೃಷ್ಟಿಸಿದೆ.ಶಿವರಾತ್ರಿ ಹಬ್ಬದ ಹಿನ್ನೆಲೆ ಬೆಂಗಳೂರಿನಿಂದ ವಿಜಯಪುರಕ್ಕೆ ಫೆ. 13, 14ರಂದು ಸಂಚರಿಸಲಿದ್ದು, ಫೆ. 16ರಂದು ವಿಜಯಪುರದಿಂದ ಬೆಂಗಳೂರಿಗೆ ವಿಶೇಷ ರೈಲು ಸಂಚಾರ ಮಾಡಲಿದೆ. ಈ ರೈಲು ಗದಗ ಮತ್ತು ಹುಬ್ಬಳ್ಳಿ ರೈಲ್ವೆ ನಿಲ್ದಾಣಗಳನ್ನು ಪ್ರವೇಶಿಸದೆ ಬೈಪಾಸ್ ಮೂಲಕ ಸಾಗಲಿದೆ. ಕಳೆದ ಡಿಸೆಂಬರ್‌ನಲ್ಲಿ ಕ್ರಿಸ್‌ಮಸ್ ಸಂದರ್ಭದಲ್ಲೂ ಇದೇ ರೀತಿ ಮಾಡಲಾಗಿತ್ತು. ರೈಲು ಇಲಾಖೆ ಇದನ್ನು ಕೇವಲ ವಿಶೇಷ ಹಬ್ಬಗಳ ಸಂದರ್ಭಗಳಲ್ಲಿ ಮಾತ್ರ ಮಾಡಿದರೆ ಒಕೆ. ಆದರೆ ಇದು ಮುಂದಿನ ದಿನಗಳಲ್ಲಿ ಕಾಯಂ ರೈಲುಗಳಿಗೂ ಅನ್ವಯವಾದಲ್ಲಿ ಗದಗ ರೈಲು ನಿಲ್ದಾಣದ ಅಸ್ತಿತ್ವವೇ ಇಲ್ಲದಂತಾಗುತ್ತದೆ ಎನ್ನುವುದು ಗದಗ ಜನರ ಆತಂಕ. ಸಮಯ ಉಳಿತಾಯ ಹೇಗೆ?: ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರ ಒತ್ತಾಯ ಮತ್ತು ಆ ಭಾಗದ ಕೆಲ ಹೋರಾಟಗಾರರ ಒತ್ತಾಸೆಯಂತೆ ಈ ಬೈಪಾಸ್ ಪ್ರಯೋಗ ನಡೆಯುತ್ತಿದೆ. ಬೈಪಾಸ್ ಮೂಲಕ ಸಂಚರಿಸಿದರೆ ಪ್ರಯಾಣದ ಅವಧಿ 14 ಗಂಟೆಯಿಂದ 10 ಗಂಟೆಗೆ ಇಳಿಕೆಯಾಗಲಿದ್ದು, (4 ಗಂಟೆ ಉಳಿತಾಯ) ಇದರಿಂದಾಗಿ ವಿಜಯಪುರ ಸೇರಿದಂತೆ ಆ ಭಾಗದಿಂದ ಸಂಚರಿಸುವ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ ಎನ್ನುವ ಲೆಕ್ಕಾಚಾರದಲ್ಲಿ ಈ ಪ್ರಯೋಗ ಸಧ್ಯ ಹಬ್ಬಗಳ ಸಂದರ್ಭದಲ್ಲಿ ಪ್ರಾಯೋಗಿಕವಾಗಿ ನಡೆಯುತ್ತಿದೆ. ಗದಗ ಜನರ ವಾದವೇನು?: ಗದಗ ನಿಲ್ದಾಣದಲ್ಲಿ ಎಂಜಿನ್ ಬದಲಿಸಲು ಕೇವಲ 15 ನಿಮಿಷ ಹಾಗೂ ಹುಬ್ಬಳ್ಳಿಯಲ್ಲಿ ಗರಿಷ್ಠ 1 ಗಂಟೆ ಬೇಕು. ಬೈಪಾಸ್ ಮಾಡುವುದರಿಂದ ಕೇವಲ ಒಂದೂವರೆ ಗಂಟೆ ಮಾತ್ರ ಉಳಿತಾಯವಾಗುತ್ತದೆಯೇ ಹೊರತು, ಸಚಿವರು ಹಾಗೂ ಆ ಭಾಗದ ಹೋರಾಟಗಾರರು ಹೇಳುವಷ್ಟು ದೊಡ್ಡ ಮಟ್ಟದ ವ್ಯತ್ಯಾಸವಾಗುವುದಿಲ್ಲ, ಅಷ್ಟೊಂದು ಸಮಯ ಉಳಿಯಲು ಸಾಧ್ಯವಿಲ್ಲ. ಅನಗತ್ಯವಾಗಿ ಈ ಗೊಂದಲ ಸೃಷ್ಟಿಸುತ್ತಿದ್ದಾರೆ ಎನ್ನುತ್ತಾರೆ ಹೋರಾಟಗಾರರು.ಅಸ್ತಿತ್ವದ ಪ್ರಶ್ನೆ: ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ 24 ಕೋಟಿ ರು. ವೆಚ್ಚದಲ್ಲಿ ಗದಗ ರೈಲ್ವೆ ನಿಲ್ದಾಣವನ್ನು ಅಮೃತ ಸ್ಟೇಷನ್ ಯೋಜನೆಯಡಿ ಪುನರ್ ನಿರ್ಮಿಸಿ ಉದ್ಘಾಟನೆ ಮಾಡಿದೆ. ಸಧ್ಯ ಹಬ್ಬದ ವೇಳೆ ನಡೆಯುತ್ತಿರುವ ಬೈಪಾಸ್ ಸಂಘರ್ಷ ಮುಂದುವರಿದು, ಒಂದೊಮ್ಮೆ ಪ್ರಮುಖ ರೈಲುಗಳು ಬೈಪಾಸ್ ಮೂಲಕ ಹೋದರೆ, ಕೋಟ್ಯಂತರ ರುಪಾಯಿ ಖರ್ಚು ಮಾಡಿ ಅಭಿವೃದ್ಧಿಪಡಿಸಿದ ನಿಲ್ದಾಣದ ಅಸ್ತಿತ್ವಕ್ಕೆ ಧಕ್ಕೆ ಬರಲಿದೆ. ಕೊಪ್ಪಳ, ಬಳ್ಳಾರಿ ಕಡೆಗೆ ಹೋಗುವ ಪ್ರಯಾಣಿಕರ ಸಂಪರ್ಕ ಕೊಂಡಿ ಕಡಿತಗೊಳ್ಳಲಿದೆ ಎನ್ನುವ ಕೂಗು ಕೂಡಾ ಜೋರಾಗಿ ಕೇಳಿ ಬರುತ್ತಿದೆ. ರೈಲು ಕಾಯಂ ಓಡಿಸುವ ಪ್ರಸ್ತಾವ ಇಲ್ಲಸದ್ಯಕ್ಕೆ ವಿಶೇಷ ರೈಲುಗಳನ್ನು ಮಾತ್ರ ಬೈಪಾಸ್ ಮೂಲಕ ಓಡಿಸಲಾಗುತ್ತಿದೆ. ಕಾಯಂ ರೈಲುಗಳನ್ನು ಬೈಪಾಸ್ ಮಾಡುವ ಯಾವುದೇ ಪ್ರಸ್ತಾವನೆ ಇಲಾಖೆಯ ಮುಂದಿಲ್ಲ ಎನ್ನುತ್ತಾರೆ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು.ಅಭಿವೃದ್ಧಿಗೆ ಮಾರಕ: ಸಮಯ ಉಳಿತಾಯಕ್ಕೆ ಬೈಪಾಸ್ ಒಂದೇ ದಾರಿಯಲ್ಲ, ಇದು ಗದಗ ಸೇರಿದಂತೆ ಈ ಭಾಗದ ಅಭಿವೃದ್ಧಿಗೆ ಮಾರಕವಾಗಲಿದೆ. ಇದಕ್ಕೆ ಬದಲಾಗಿ ಗದಗ- ಕೊಪ್ಪಳ- ಹೊಸಪೇಟೆ- ಕೊಟ್ಟೂರು- ದಾವಣಗೆರೆ ಮೂಲಕ ರೈಲು ಓಡಿಸುವುದು, ಸ್ಥಗಿತಗೊಂಡಿರುವ ರೈಲ್ವೆ ಮಾರ್ಗದ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ ರೈಲು ಪ್ರಾರಂಭಿಸುವುದು, ಎರಡೂ ಬದಿ ಎಂಜಿನ್ ಇರುವ ವಂದೇ ಭಾರತ್ ಸ್ಲೀಪರ್ ರೈಲು ಆರಂಭಿಸಿದರೆ ಎಂಜಿನ್ ಬದಲಿಸುವ ಸಮಸ್ಯೆಯೇ ಇರುವುದಿಲ್ಲ. ಈ ರೀತಿಯ ಪರಿಹಾರವನ್ನು ರೈಲ್ವೆ ಇಲಾಖೆ ಅಧಿಕಾರಿಗಳು ಮಾಡಬೇಕು ಎಂದು ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ ಗಣೇಶಸಿಂಗ್ ಬ್ಯಾಳಿ ತಿಳಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.