ಸುಭಾಶ್ಚಂದ್ರ ಎಸ್.ವಾಗ್ಳೆಕನ್ನಡಪ್ರಭ ವಾರ್ತೆ ಬೈಂದೂರುಇಲ್ಲಿನ ಸೋಮೇಶ್ವರ ಕಡಲ ತೀರದ ಜೈವಿಕ ಪರಿಸರ ಸ್ವಚ್ಛವಾಗಿದೆ ಎಂದು ಕಡಲಾಮೆಯೊಂದು ಸಾಕ್ಷಿ ಹೇಳಿದೆ. ಜೈವಿಕವಾಗಿ ಸ್ಚಚ್ಛವಾಗಿರುವ ಕಡಲ ತೀರದಲ್ಲಿ ಮೊಟ್ಟೆ ಇಟ್ಟು ಮರಿ ಮಾಡುವ ಕಡಲಾಮೆ ಈ ಬಾರಿ ಈ ಸೋಮೇಶ್ವರ ಕಡಲ ತೀರದಲ್ಲಿ ಮೊಟ್ಟೆ ಇಟ್ಟು ಮರಿ ಮಾಡಿವೆ.ಸೋಮೇಶ್ವರ ಕಡಲ ತೀರ ಕಳೆದ ಅನೇಕ ವರ್ಷಗಳಿಂದ ಪ್ಲಾಸ್ಟಿಕ್ ಇತ್ಯಾದಿ ತ್ಯಾಜ್ಯಗಳಿಂದ ಕಲುಷಿತಗೊಂಡಿತ್ತು. ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಅವರು ‘ಸಮೃದ್ಧ ಬೈಂದೂರು’ ಪರಿಕಲ್ಪನೆಯಡಿ ಹಾಕಿಕೊಂಡಿರುವ ಯೋಜನೆಗಳಲ್ಲಿ ಕೆರೆ, ಪುಷ್ಕರಣಿ ಮತ್ತು ಕಡಲತೀರಗಳ ಸ್ವಚ್ಛತೆಯೂ ಒಂದು. ‘ಕ್ಲೀನ್ ಕಿನಾರ’ ಯೋಜನೆಯಡಿ ಬೈಂದೂರಿನ ಅನೇಕ ಕಡಲ ತೀರಗಳನ್ನು ಶಾಸಕರ ನೇತೃತ್ವದಲ್ಲಿ ಯುವಕರು ಸ್ವಚ್ಛಗೊಳಿಸಿದ್ದಾರೆ. ಅದರಂತೆ ಸೋಮೇಶ್ವರ ತೀರವನ್ನು ಕೂಡ ತ್ಯಾಜ್ಯಗಳನ್ನು ಹೆಕ್ಕಿ ಸ್ವಚ್ಛಗೊಳಿಸಲಾಗಿತ್ತು.ಇದೀಗ ಸುಮಾರು 20 ವರ್ಷಗಳ ನಂತರ ಕಡಲಾಮೆಗಳು ಸ್ವಚ್ಛ ಸೋಮೇಶ್ವರ ಕಡಲತೀರಕ್ಕೆ ಬಂದು ಮೊಟ್ಟೆ ಇಟ್ಟಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಇದು ಕ್ಲೀನ್ ಕಿನಾರದಲ್ಲಿ ಭಾಗವಹಿಸಿದ್ದ ಪರಿಸರಪ್ರಿಯರನ್ನು ಪುಳಕಿತರನ್ನಾಗಿ ಮಾಡಿದೆ.‘ಆಲೀವ್ ರಿಡ್ಲೆ’ ಪ್ರಬೇಧದ ಈ ಕಡಲಾಮೆಗಳ ವಾಸಸ್ಥಾನ ಸಮುದ್ರವೇ ಆದರೂ, ಅವು ಮೊಟ್ಟೆ ಇಡುವುದಕ್ಕೆ ಕಡಲ ತೀರಕ್ಕೆ ಬರುತ್ತವೆ. ಪ್ರತಿ ವರ್ಷಕ್ಕೊಮ್ಮೆ ನಿರ್ದಿಷ್ಟ ಅವಧಿಯಲ್ಲಿ ಕಡಲಾಮೆಗಳು ತೀರಕ್ಕೆ ಬಂದು ಮರಳಲ್ಲಿ ಸುಮಾರು 1 ಅಡಿಯಷ್ಟು ಗುಂಡಿ ತೋಡಿ, ಸುಮಾರು ನೂರರಷ್ಟು ಮೊಟ್ಟೆಗಳನ್ನಿಟ್ಟು ಮರಳನ್ನು ಮುಚ್ಚಿ ಹಿಂದಿರುಗುತ್ತವೆ. ಕೆಲವು ದಿನಗಳ ನಂತರ ಈ ಮೊಟ್ಟೆಗಳು ಒಡೆದು ಮರಿಗಳು ಹೊರ ಬಂದು ಸಮುದ್ರ ಸೇರುತ್ತವೆ. ಈ ಸಂದರ್ಭದಲ್ಲಿ ಕಾಲ್ತುಳಿತ, ಕಳ್ಳತನ ಇತ್ಯಾದಿ ಕಾರಣಗಳಿಂದ ಮೊಟ್ಟೆಗಳು, ಬೇರೆ ಪ್ರಾಣಿಗಳಿಗೆ ಆಹಾರವಾಗಿ ಮರಿಗಳು ನಾಶವಾಗುವ ಸಂಭವವೂ ಇದೆ. ಶೇ.5ರಿಂದ 10ರಷ್ಟು ಮರಿಗಳು ಮಾತ್ರ ಸಮುದ್ರ ಸೇರುತ್ತವೆ.ಸೋಮೇಶ್ವರ ತೀರದಲ್ಲಿ ಕಡಲಾಮೆ ಮೊಟ್ಟೆ ಇಟ್ಟಿರುವ ವಿಷಯ ತಿಳಿದು ಇಲ್ಲಿನ ಪರಿಸರ ಪ್ರೇಮಿಗಳು ಸಂತಸಪಟ್ಟಿದ್ದಾರೆ. ಈ ಮೊಟ್ಟೆಗಳಿಗೆ ಯಾವುದೇ ಅಪಾಯ ಆಗದಂತೆ ಸಂರಕ್ಷಿಸಲು ಅಗತ್ಯ ಕ್ರಮಗಳನ್ನೂ ತೆಗೆದುಕೊಂಡಿದ್ದಾರೆ. ಸ್ವತಃ ಶಾಸಕ ಗುರುರಾಜ ಗಂಟಿಹೊಳೆ ಅವರೂ ಆಸಕ್ತಿಯಿಂದ ಸ್ಥಳಕ್ಕೆ ಭೇಟಿ ನೀಡಿ ಕಡಲಾಮೆಯ ಮೊಟ್ಟೆಗಳ ಸಂರಕ್ಷಣೆಯನ್ನು ಪರಿಶೀಲಿಸಿದ್ದರು.
ಇದೀಗ ಮೊಟ್ಟೆಗಳನ್ನು ಸಂರಕ್ಷಿಸುವ 8 ವಾರಗಳ ಪ್ರಯತ್ನಗಳಿಗೆ ಪ್ರತಿಫಲ ದೊರೆತಿದೆ. ಒಂದೊಂದೇ ಮೊಟ್ಟೆಗಳು ಒಡೆದು ಪುಟಾಣಿ ಮರಿಗಳು ಹೊರಬರುತ್ತಿದ್ದು, ಅವುಗಳನ್ನು ಸುರಕ್ಷಿತವಾಗಿ ಕಡಲ ಒಡಲಿಗೆ ಸೇರಿಸಲಾಗುತ್ತಿದೆ. ಕೋಟ್ನಮ್ಮ ಕ್ಲೀನ್ ಕಿನಾರ ತಂಡ ಪ್ರತಿ ಭಾನುವಾರ ಬೀಚ್ ಕ್ಲೀನ್‌ಗೆ ಹೋದಾಗ, ಸೋಮೇಶ್ವರ ಬೀಚ್‌ನಲ್ಲಿ ಮೊದಲು ಒಂದೆರಡು ಮೊಟ್ಟೆಗಳು ಸಿಕ್ಕಿದವು, ಹುಡುಕಿದಾಗ ಒಟ್ಟು 46 ಮೊಟ್ಟೆ ಪತ್ತೆಯಾದವು. ನಂತರ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಅಧಿಕಾರಿಗಳು ಬಂದು ಎಲ್ಲವನ್ನೂ ಒಂದೆಕಡೆ ಮರಳಲ್ಲಿ ಹೂತು, ಮೇಲೆ ನೆರಳಿಗೆ ವ್ಯವಸ್ಥೆ, ಸುತ್ತ ಬೇಲಿ ಹಾಕಿ ರಕ್ಷಿಸಲಾಗಿದೆ. ಇದೀಗ ಒಂದೊಂದೇ ಮೊಟ್ಟೆ ಒಡೆದು ಹೊರಗೆ ಬರ್ತಿವೆ. ಇದು ನಮ್ಮ ಕ್ಲೀನ್ ಕಿನಾರ ತಂಡಕ್ಕೆ ಪ್ರಕೃತಿ ಹೇಳಿದ ಥ್ಯಾಂಕ್ಸ್ ಎಂದು ಭಾವಿಸುತ್ತೇವೆ.
। ಮಂಜುನಾಥ ಶೆಟ್ಟಿ, ಕ್ಲೀನ್ ಕಿನಾರ ತಂಡದ ಕಾರ್ಯಕರ್ತ--------------------
40 ಕಡೆಗಳಲ್ಲಿ ಮೊಟ್ಟೆ ಇಡುತ್ತಿದ್ದವು2006ರಲ್ಲಿ ಅವಿಭಜಿತ ದ.ಕ. ಜಿಲ್ಲೆಯಲ್ಲಿ 40ಕ್ಕೂ ಹೆಚ್ಚು ಕಡೆಗಳಲ್ಲಿ ಆಲಿವ್ ರಿಡ್ಲೆ ಮೊಟ್ಟೆಗಳನ್ನಿಡುತ್ತಿದ್ದ ಬಗ್ಗೆ ಸರ್ವೆ ನಡೆದಿತ್ತು. ಆದರೆ ಈಗ 5-6 ಬೀಚ್‌ಗಳಲ್ಲಿ ಮಾತ್ರ ಮೊಟ್ಟೆ ಇಡುತ್ತಿವೆ ಎಂದರೆ ಈ ಬೀಚುಗಳ ದುಸ್ಥಿತಿ, ಇಲ್ಲಿನ ಮಾಲಿನ್ಯತೆಯ ಮಟ್ಟವನ್ನು ಸಾರಿ ಹೇಳುತ್ತಿದೆ. ಕೆಲವು ವರ್ಷಗಳಿಂದ ಉಡುಪಿ ಜಿಲ್ಲೆಯ ಮರವಂತೆ, ಕೋಡಿ ತೀರದಲ್ಲಿ ಕಡಲಾಮೆಗಳು ಮೊಟ್ಟೆ ಪತ್ತೆಯಾಗುತ್ತಿದ್ದವು, ಈಗ ಸೋಮೇಶ್ವರ ತೀರದಲ್ಲಿಯೂ ಮೊಟ್ಟೆಗಳು ಪತ್ತೆಯಾಗಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.