ಕನ್ನಡಪ್ರಭ ವಾರ್ತೆ ಗಂಗಾವತಿ
ಹಲವು ತಿಂಗಳಿಂದ ಮುನಿಸಿಕೊಂಡಿದ್ದ ಶಾಸಕ ಗಾಲಿ ಜನಾರ್ದನ ರೆಡ್ಡಿ ಮತ್ತು ಮಾಜಿ ಸಚಿವ ಬಿ.ಶ್ರೀರಾಮುಲು ಅವರು ವೇದಿಕೆಯಲ್ಲಿ ಅಕ್ಕ-ಪಕ್ಕ ಕುಳಿತು, ಪರಸ್ಪರ ಕೈ ಕುಲುಕಿ ಒಗ್ಗಟ್ಟು ಪ್ರದರ್ಶಿಸಿದ್ದು, ಅಚ್ಚರಿಗೆ ಕಾರಣವಾಯಿತು.ತಾಲೂಕಿನ ಮರಳಿ ಗ್ರಾಮದಲ್ಲಿ ಭಾನುವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಬಳ್ಳಾರಿ ವಿಭಾಗ ಮಟ್ಟದ ಬಿಜೆಪಿ ಸಂಘಟನಾ ಸಭೆ ನಡೆಯಿತು. ಸಭೆ ಆರಂಭಕ್ಕೂ ಪೂರ್ವದಲ್ಲಿ ವೇದಿಕೆಯಲ್ಲಿದ್ದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಇಬ್ಬರು ನಾಯಕರ ಕೈಗಳನ್ನು ಮೇಲಕ್ಕೆ ಎತ್ತಿ ಒಗ್ಗಟ್ಟು ಪ್ರದರ್ಶಿಸಿದ್ದಲ್ಲದೇ, ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಇಬ್ಬರು ಒಂದೇ ಎಂದು ಸಾರಿದರು.
ಯತ್ನಾಳ್, ಲಿಂಬಾವಳಿ ಒಂದಾಗಲಿ: ಶ್ರೀರಾಮುಲುಈ ಮಧ್ಯೆ, ಸಭೆ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ರಾಮುಲು, ಕೇವಲ ನಾವು ಒಂದಾದರೆ ಕರ್ನಾಟಕದಲ್ಲಿ ಎಲ್ಲರೂ ಒಂದಾದಂತೆ ಅಲ್ಲ, ಮೊದಲು ಯತ್ನಾಳ, ಅರವಿಂದ ಲಿಂಬಾವಳಿ ಸೇರಿದಂತೆ ಹಲವರ ಮಧ್ಯೆ ಬಿರುಕುಗಳಿವೆ. ಅದೆಲ್ಲ ಸರಿಯಾಗಿ, ಅವರೆಲ್ಲ ಒಂದಾಗಬೇಕು. ರಾಜ್ಯದ 224 ಮತಕ್ಷೇತ್ರಗಳಲ್ಲಿ ಸಂಚಾರ ಮಾಡಿ, ಒಡೆದ ಮನಸ್ಸುಗಳನ್ನು ಒಂದು ಮಾಡುವ ಕೆಲಸ ಮಾಡುತ್ತಿದ್ದೇವೆ. 2028ರಲ್ಲಿ ಬಿಜೆಪಿ ಪಕ್ಷದ ನಾಯಕರು ಈ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ ಎಂದರು.ಒಂದು ದಿನದ ಸ್ನೇಹವಲ್ಲ
ನಮ್ಮಿಬ್ಬರದು ಒಂದು ದಿನದ ಸ್ನೇಹ ಅಲ್ಲ. ನಮ್ಮಿಬ್ಬರ ಸ್ನೇಹದ ಬಗ್ಗೆ ಹೇಳಲು ಹೋದರೆ ಸಾವಿರಾರು ಎಪಿಸೋಡ್ ಆಗುತ್ತೆ. ಒಬ್ಬರಿಗೊಬ್ಬರು ನೋಡಿದ ತಕ್ಷಣ ಎಲ್ಲವನ್ನೂ ಮರೆಯುವಂತೆ ಆಗುತ್ತದೆ. ವೈಯಕ್ತಿಕ ಕಾರಣಗಳಿಂದ ಇಬ್ಬರ ಮಧ್ಯೆ ಭಿನ್ನಾಭಿಪ್ರಾಯ ಬರಲು ಸಾಧ್ಯವಿಲ್ಲ.- ಜನಾರ್ದನ ರೆಡ್ಡಿ, ಶಾಸಕ.ನಮ್ಮ ಮುನಿಸು ಕ್ಷಣಿಕ ನಾವಿಬ್ಬರು ಬಾಲ್ಯಸ್ನೇಹಿತರು, ಮುನಿಸು ಬಂದರೂ ಅದು ಕ್ಷಣಿಕ. ಇಂದು ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ಒಂದಾದಂತೆ ಕರ್ನಾಟಕದ ಎಲ್ಲಾ ಮನಸ್ಸುಗಳು ಒಂದಾಗಬೇಕು. ಬಿಜೆಪಿಯಿಂದ ಉಚ್ಛಾಟಿತರಾಗಿರುವ ಶಾಸಕ ಬಸವರಾಜ ಪಾಟೀಲ್ ಯತ್ನಾಳ ಮತ್ತು ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರೂ ಒಂದಾಗಲಿ.
- ಬಿ.ಶ್ರೀರಾಮುಲು, ಮಾಜಿ ಸಚಿವ.