ಮುಂಡರಗಿಯಲ್ಲಿ ಅಗ್ರೋ ಕೇಂದ್ರದ ಮುಂದೆ ಮುಗಿಬಿದ್ದ ರೈತರು

KannadaprabhaNewsNetwork |  
Published : Jul 21, 2025, 01:30 AM IST
20ಎಂಡಿಜಿ1, ಮುಂಡರಗಿ ಪಟ್ಟಣದಲ್ಲಿ ಭಾನುವಾರ ಗೊಬ್ಬರಕ್ಕಾಗಿ ರೈತರು ಅಗ್ರೋ ಕೇಂದ್ರಗಳಿಗೆ ಮುಗಿಬಿದ್ದಿರುವುದು. | Kannada Prabha

ಸಾರಾಂಶ

ಕಳೆದ 2-3 ದಿನಗಳಿಂದ ತಾಲೂಕಿನಾದ್ಯಂತ ಉತ್ತಮವಾಗಿ ಮಳೆ ಆಗುತ್ತಿರುವುದರಿಂದ ಭಾನುವಾರ ಮುಂಡರಗಿ ಪಟ್ಟಣದ ನಾಲ್ಕು ಅಗ್ರೋ ಕೇಂದ್ರಗಳ ಮುಂದೆ ಯೂರಿಯಾ ಗೊಬ್ಬರಕ್ಕಾಗಿ ರೈತರು ಮುಗಿಬಿದ್ದಿರುವುದು ಕಂಡು ಬಂದಿತು.

ಮುಂಡರಗಿ: ಕಳೆದ 2-3 ದಿನಗಳಿಂದ ತಾಲೂಕಿನಾದ್ಯಂತ ಉತ್ತಮವಾಗಿ ಮಳೆ ಆಗುತ್ತಿರುವುದರಿಂದ ಭಾನುವಾರ ಮುಂಡರಗಿ ಪಟ್ಟಣದ ನಾಲ್ಕು ಅಗ್ರೋ ಕೇಂದ್ರಗಳ ಮುಂದೆ ಯೂರಿಯಾ ಗೊಬ್ಬರಕ್ಕಾಗಿ ರೈತರು ಮುಗಿಬಿದ್ದಿರುವುದು ಕಂಡು ಬಂದಿತು.

ಕೃಷಿ ಇಲಾಖೆ ಪ್ರಕಾರ 1 ಸಾವಿರ ಟನ್ ಯೂರಿಯಾ ಗೊಬ್ಬರ ಸರಬರಾಜು ಆಗಬೇಕಾಗಿತ್ತು. ಈಗಾಗಲೇ ಸುಮಾರು 550 ಟನ್ ಗೊಬ್ಬರ ತಾಲೂಕಿನಾದ್ಯಂತ ಅಗ್ರೋ ಕೇಂದ್ರಗಳು, ವ್ಯವಸಾಯ ಸೇವಾ ಸಹಕಾರಿ ಸಂಘಗಳು ಹಾಗೂ ಟಿಎಪಿಸಿಎಂಎಸ್ ಮೂಲಕ ರೈತರಿಗೆ ಸರಬರಾಜು ಮಾಡಿದ್ದು, ಇದೀಗ ಭಾನುವಾರ 150 ಟನ್ ಗೊಬ್ಬರ ಬಂದಿದ್ದು, ಮಳೆಯಾಗಿರುವುದರಿಂದ ರೈತರು ಗೊಬ್ಬರ ಮಾರಾಟ ಮಾಡುವ ಅಗ್ರೋ ಕೇಂದ್ರಗಳ ಮುಂದೆ ಮುಗಿಬಿದ್ದಿದ್ದು ಕಂಡು ಬಂದಿತು.

ಪಟ್ಟಣದ ಸುಮಾರು 4 ಅಗ್ರೋ ಕೇಂದ್ರಗಳಲ್ಲಿ ಭಾನುವಾರ ಗೊಬ್ಬರ ಖರೀದಿಗಾಗಿ ರೈತರು ಮುಗಿಬಿದ್ದು, ಎಲ್ಲ ಅಗ್ರೋ ಕೇಂದ್ರಗಳ ಪ್ರದೇಶದಲ್ಲಿನ ಪ್ರಮುಖ ರಸ್ತೆಗಳು ರೈತರಿಂದ ತುಂಬಿ ತುಳುಕುತ್ತಿದ್ದುದು ಕಂಡು ಬಂದಿತು.

ಇಲಾಖೆ ರೈತರಿಗೆ ಸರಬರಾಜು ಮಾಡಬೇಕಾದಷ್ಟು ಯೂರಿಯಾ ಗೊಬ್ಬರದ ದಾಸ್ತಾನು ಬರದಿರುವುದರಿಂದ ನಮಗೆ ಗೊಬ್ಬರ ಸಿಗದಿದ್ದರೆ ಬೆಳೆಗಳಿಗೆ ತೊಂದರೆಯಾಗುತ್ತದೆ ಎಂದು ಗೊಬ್ಬರಕ್ಕೆ ಮುಗಿಬಿದ್ದರು. ಸರ್ಕಾರ ಹಾಗೂ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಎಲ್ಲ ರೈತರಿಗೂ ಬೇಕಾಗುವಷ್ಟು ಗೊಬ್ಬರದ ದಸ್ತಾನು ತರಿಸಿ ಸರಬರಾಜು ಮಾಡಬೇಕೆಂದು ರೈತ ಸಂಘಟನೆ ಮುಖಂಡ ಶಿವಾನಂದ ಇಟಗಿ ಒತ್ತಾಯಿಸಿದ್ದಾರೆ.

ತಾಲೂಕಿನಲ್ಲಿ ರೈತರಿಗೆ ಯಾವುದೇ ರೀತಿಯ ಗೊಬ್ಬರದ ಕೊರತೆ ಇರುವುದಿಲ್ಲ. ಈಗಾಗಲೇ ಅಗ್ರೋ ಕೇಂದ್ರಗಳು, ವ್ಯವಸಾಯ ಸೇವಾ ಸಹಕಾರಿ ಸೊಸೈಟಿಗಳು, ಟಿಎಪಿಸಿಎಂಎಸ್ ಮೂಲಕ ಸುಮಾರು 550 ಟನ್ ಗೂ ಅಧಿಕ ಯೂರಿಯಾ ಗೊಬ್ಬರ ಸರಬರಾಜು ಆಗಿದ್ದು, ಭಾನುವಾರ 150 ಟನ್ ಬಂದಿದೆ. ಮತ್ತೆ ಸೋಮವಾರ 100 ಟನ್ ಬರಲಿದೆ. ಮುಂದಿನ 4-6 ದಿನಗಳಲ್ಲಿ ಇನ್ನೂ 300 ಟನ್ ಗೊಬ್ಬರ ಬರಲಿದೆ. ರೈತರು ಯೂರಿಯಾ ಗೊಬ್ಬರದ ಜತೆಗೆ ನ್ಯಾನೋ ಯೂರಿಯಾ ಬಳಕೆಯನ್ನೂ ಮಾಡಿದರೆ ಗೊಬ್ಬರದ ಅಭಾವವನ್ನು ಕಡಿಮೆ ಮಾಡಿಕೊಳ್ಳಬಹುದು ಎಂದು ಪ್ರಾಣೇಶ ಹಾದಿಮನಿ ಸಹಾಯಕ ಕೃಷಿ ನಿರ್ದೇಶಕರು ಮುಂಡರಗಿ ಕನ್ನಡಪ್ರಭಕ್ಕೆ ವಿವರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''