ಬಿಕ್ಲು ಶಿವ ಕೊಲೆಯ ಎ1 ಜಗ್ಗನ ವಿರುದ್ಧ ಇವೆ 16 ಕೇಸ್ !

KannadaprabhaNewsNetwork |  
Published : Jul 21, 2025, 01:30 AM IST
ಜಗದೀಶ್  | Kannada Prabha

ಸಾರಾಂಶ

ದಶಕಗಳ ಹಿಂದೆ ರಾಜಧಾನಿಯ ವಾಣಿಜ್ಯ ವ್ಯವಹಾರಗಳ ‘ಹೃದಯ’ ಭಾಗ ಮಹಾತ್ಮ ಗಾಂಧಿ ರಸ್ತೆ ಸುತ್ತಮುತ್ತ ಸುಲಿಗೆಕೋರನಾಗಿದ್ದ ಹೆಣ್ಣೂರಿನ ಜಗದೀಶ್ ಅಲಿಯಾಸ್ ಜಗ್ಗ ಈಗ ಭೂ ಮಾಫಿಯಾದ ಕುಖ್ಯಾತ ಪಾತಕಿಯಾಗಿ ಬೆಳೆದಿದ್ದು, ಈತನ ವಿರುದ್ಧ ಬರೊಬ್ಬರಿ 16 ಕ್ರಿಮಿನಲ್‌ ಪ್ರಕರಣ ಇವೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ದಶಕಗಳ ಹಿಂದೆ ರಾಜಧಾನಿಯ ವಾಣಿಜ್ಯ ವ್ಯವಹಾರಗಳ ‘ಹೃದಯ’ ಭಾಗ ಮಹಾತ್ಮ ಗಾಂಧಿ ರಸ್ತೆ ಸುತ್ತಮುತ್ತ ಸುಲಿಗೆಕೋರನಾಗಿದ್ದ ಹೆಣ್ಣೂರಿನ ಜಗದೀಶ್ ಅಲಿಯಾಸ್ ಜಗ್ಗ ಈಗ ಭೂ ಮಾಫಿಯಾದ ಕುಖ್ಯಾತ ಪಾತಕಿಯಾಗಿ ಬೆಳೆದಿದ್ದು, ಈತನ ವಿರುದ್ಧ ಬರೊಬ್ಬರಿ 16 ಕ್ರಿಮಿನಲ್‌ ಪ್ರಕರಣ ಇವೆ.

ಈಗ ಭಾರತಿನಗರದ ರೌಡಿ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವನ ಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಕೆ.ಆರ್‌.ಪುರ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜು ಅವರ ಪರಮಾಪ್ತ ಬೆಂಬಲಿಗ ಎನ್ನಲಾದ ಹೆಣ್ಣೂರಿನ ಜಗದೀಶ್‌ನ ಪತ್ತೆಗೆ ಪೊಲೀಸರು ಹೊರರಾಜ್ಯಗಳಲ್ಲಿ ತೀವ್ರ ಹುಡುಕಾಟ ನಡೆಸಿದ್ದಾರೆ. ಕೇರಳದಲ್ಲೇ ಅಡಗಿಕೊಂಡು ತನ್ನ ಶತ್ರು ಶಿವನನ್ನು ಸಹಚರರ ಮೂಲಕ ಕೊಲೆ ಮಾಡಿಸಿರುವ ಆರೋಪ ಜಗ್ಗನ ಮೇಲಿದೆ.

ರಾಜಕೀಯ ಆಶ್ರಯ ಸಿಕ್ಕಿದ್ದು ಹೇಗೆ?:ತಮಿಳುನಾಡು ಮೂಲದ ಜಗ್ಗ, ಹೆಣ್ಣೂರಿನಲ್ಲಿ ಹಲವು ವರ್ಷಗಳಿಂದ ತನ್ನ ಕುಟುಂಬದ ಜತೆ ನೆಲೆಸಿದ್ದಾನೆ. 3 ದಶಕಗಳ ಹಿಂದೆ ಇಂದಿರಾ ನಗರ ವ್ಯಾಪ್ತಿಯಲ್ಲಿ ಪುಂಡನಾಗಿ ಜಗ್ಗನ ಹಾವಳಿ ಶುರುವಾಗಿದೆ. 1995ರಲ್ಲಿ ಕಳ್ಳತನ ಆರೋಪದ ಮೇರೆಗೆ ಇಂದಿರಾನಗರ ಠಾಣೆಯಲ್ಲಿ ಆತನ ಮೇಲೆ ಮೊದಲ ಪ್ರಕರಣ ದಾಖಲಾಗಿದೆ. ಆನಂತರ ಎಂ.ಜಿ.ರಸ್ತೆ ಸುತ್ತಮುತ್ತ ಪ್ರದೇಶಗಳಲ್ಲಿ ನಿರಂತರವಾಗಿ ಸುಲಿಗೆ ಹಾಗೂ ಸರಗಳ್ಳತನ ಕೃತ್ಯಗಳನ್ನು ಜಗ್ಗ ಎಸಗಿ ಆತಂಕ ಸೃಷ್ಟಿಸಿದ್ದ. 1998ರಲ್ಲಿ ಆತನ ಮೇಲೆ ಜೆ.ಬಿ.ನಗರ, ಅಶೋಕನಗರ, ಕಮರ್ಷಿಯಲ್‌ ಸ್ಟ್ರೀಟ್‌ ಹಾಗೂ ಕಬ್ಬನ್ ಪಾರ್ಕ್‌ ಠಾಣೆಗಳ ಐಪಿಸಿ 392ರ ( ಸುಲಿಗೆ, ಸರಗಳ್ಳತನ) ನಾಲ್ಕು ಪ್ರಕರಣಗಳು ದಾಖಲಾಗಿದ್ದವು.

ಇದಾದ ನಂತರ 1999ರಲ್ಲಿ ಕೊಲೆ ಪ್ರಕರಣದ ಜಗ್ಗನನ್ನು ಬಂಧಿಸಿ ಇಂದಿರಾನಗರ ಪೊಲೀಸರು ಜೈಲಿಗೆ ಕಳುಹಿಸಿದ್ದರು. 2008ರಲ್ಲಿ ನೇತ್ರಾವತಿ ಲೇಔಟ್‌ನ ರವೀಂದ್ರ ಹತ್ಯೆ ಪ್ರಕರಣದಲ್ಲಿ ಈಗಿನ ಕೆ.ಆರ್‌.ಪುರ ಕ್ಷೇತ್ರದ ಶಾಸಕ ಬೈರತಿ ಬಸವರಾಜು ಅವರ ಮತ್ತೊಬ್ಬ ಆಪ್ತ ಎನ್ನಲಾದ ಅಜಿತ್ ಹಾಗೂ ಜಗ್ಗ ಸೇರಿ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಈ ಹತ್ಯೆ ಪ್ರಕರಣದ ಜಾಮೀನು ಪಡೆದು ಹೊರ ಬಂದ ನಂತರ ಅಜಿತ್ ಮೂಲಕ ಆತನಿಗೆ ಬೈರತಿ ಬಸವರಾಜು ಅವರ ಸಂಪರ್ಕ ಸಿಕ್ಕಿದೆ ಎಂದು ಇಲಾಖೆ ಮೂಲಗಳು ಹೇಳಿವೆ.ಈ ಕ್ರಿಮಿನಲ್ ಚರಿತ್ರೆ ಹಿನ್ನಲೆಯಲ್ಲಿ ಆತನ ಮೇಲೆ ಹೆಣ್ಣೂರು ಠಾಣೆಯಲ್ಲಿ ರೌಡಿಪಟ್ಟಿ ತೆರೆಯಲಾಯಿತು. ಆದರೆ ರಾಜಕೀಯ ಗಾಡ್‌ ಫಾದರ್ ಪ್ರಭಾವ ಬಳಸಿ ರೌಡಿ ಪಟ್ಟಿಯಿಂದ ಆತ ಮುಕ್ತನಾಗಿದ್ದ. ಹೀಗೆ ಹಂತ ಹಂತವಾಗಿ ರಾಜಧಾನಿ ಭೂಗತ ಜಗತ್ತಿನಲ್ಲಿ ಜಗ್ಗ ಪ್ರವರ್ಧಮಾನಕ್ಕೆ ಬಂದಿದ್ದಾನೆ. ಇನ್ನು ತನ್ನ ಮೇಲೆ ದೂರು ನೀಡಿದವರಿಗೆ ನ್ಯಾಯಾಲಯದಲ್ಲಿ ಸಾಕ್ಷಿ ನುಡಿದಯಂತೆ ಜಗ್ಗ ಬೆದರಿಸುತ್ತಿದ್ದ. ಹೀಗಾಗಿ ಸುಲಿಗೆ, ಸರಗಳ್ಳತನ ಹಾಗೂ ಕೊಲೆ ಕೃತ್ಯಗಳಲ್ಲಿ ಆತ ದೋಷಮುಕ್ತನಾಗಿದ್ದ ಎಂದು ಹಿರಿಯ ಅಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.ತನಗೆ ರಾಜಕೀಯ ಆಶ್ರಯ ಸಿಕ್ಕಿದ ಬಳಿಕ ಕೆ.ಆರ್‌.ಪುರ, ಮಹದೇವಪುರ ಹಾಗೂ ವೈಟ್‌ಫೀಲ್ಡ್ ವ್ಯಾಪ್ತಿಯಲ್ಲಿ ಭೂ ಮಾಫಿಯಾಗೆ ಜಗ್ಗ ಸುಪಾರಿ ಕ್ಲಿಲರ್‌ ತಂಡದ ನಾಯಕನಾಗಿದ್ದ. ಖಾಲಿ ಜಾಗಗಳಿಗೆ ಬೇಲಿ ಹಾಕಿ ಬೆದರಿಸಿ ಭೂಮಿ ಕಬಳಿಕೆಗೆ ಜಗ್ಗ ತಂಡ ನಿರತವಾಗುತ್ತಿತ್ತು. ತಾವು ಕಣ್ಣಿಟ್ಟ ಭೂಮಿ ಮಾರಾಟಕ್ಕೆ ಅಡ್ಡಿಬಂದರೆ ಅವರ ಜೀವಕ್ಕೆ ಆತ ಕುತ್ತಾಗುತ್ತಿದ್ದ. ಅದೇ ರೀತಿ ಕಿತ್ತಗನೂರು ಗ್ರಾಮದಲ್ಲಿ ನಿವೇಶನ ವಿಚಾರವಾಗಿ ರೌಡಿ ಬಿಕ್ಲು ಶಿವ ಹಾಗೂ ಜಗ್ಗನ ಮಧ್ಯೆ ಗಲಾಟೆಯಾಗಿತ್ತು. ಈ ಭೂ ವಿವಾದದ ಹಿನ್ನಲೆಯಲ್ಲಿ ಕೊನೆಗೆ ಬಿಕ್ಲು ಶಿವನನ್ನು ಜಗ್ಗ ತಂಡ ಹತ್ಯೆ ಮಾಡಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಜಗ್ಗನ ವಿರುದ್ಧ ದಾಖಲಾದ

16 ಪ್ರಕರಣಗಳ ವಿವರ

ಹೆಣ್ಣೂರಿನ ಜಗದೀಶ್ ಅಲಿಯಾಸ್ ಜಗ್ಗನ ವಿರುದ್ಧ ಇಂದಿರಾನಗರ ಪೊಲೀಸ್‌ ಠಾಣೆಯಲ್ಲಿ 1995 ರಿಂದ 2004ರಲ್ಲಿ ಕಳ್ಳತನ, ಕೊಲೆ, ಸರಗಳ್ಳತನ ಸೇರಿ 6 ಪ್ರಕರಣಗಳು ಇವೆ. ಜೆ.ಪಿ.ನಗರ ಠಾಣೆಯಲ್ಲಿ 1997-98ರಲ್ಲಿ ಎರಡು ದರೋಡೆ ಕೃತ್ಯಗಳು, 1998ರಲ್ಲಿ ಜೆ.ಬಿ.ನಗರದಲ್ಲಿ ಸುಲಿಗೆ, 1998ರಲ್ಲಿ ಕಮರ್ಷಿಯಲ್ ಸ್ಟ್ರೀಟ್‌ನಲ್ಲಿ ಸುಲಿಗೆ, 1998ರಲ್ಲಿ ಅಶೋಕನಗರದಲ್ಲಿ ಸುಲಿಗೆ, ಕೆ.ಆರ್‌.ಪುರದಲ್ಲಿ 2008ರ ಕೊಲೆ, ರಾಮಮೂರ್ತಿ ನಗರದಲ್ಲಿ 2012ರಲ್ಲಿ ವಂಚನೆ, ಅಪರಾಧಿಕ ಸಂಚು ಹಾಗೂ 2016ರಲ್ಲಿ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಎಸ್ಸಿ-ಎಸ್ಟಿ ದೌರ್ಜನ್ಯ ಪ್ರಕರಣ ಸೇರಿ ಒಟ್ಟು 16 ಕೇಸ್‌ ದಾಖಲಾಗಿವೆ.

ದಲಿತ ದೌರ್ಜನ್ಯಕ್ಕೆ ‘ಬಿ’ ರಿಪೋರ್ಟ್‌ದಲಿತರ ಮೇಲೆ ದೌರ್ಜನ್ಯ ನಡೆಸಿದ ಆರೋಪದ ಮೇರೆಗೆ ಜಗ್ಗನ ವಿರುದ್ಧ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ಈ ಪ್ರಕರಣದಲ್ಲಿ ಆತನ ಮೇಲೆ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿದ್ದರು. ದಲಿತರ ಮೇಲೆ ದೌರ್ಜನ್ಯ ಪ್ರಕರಣದಲ್ಲಿ ದೋಷಮುಕ್ತರಾಗಲು ಜಗ್ಗನಿಗೆ ‘ರಾಜಕೀಯ’ ಶಕ್ತಿ ಕೆಲಸ ಮಾಡಿತ್ತು ಎನ್ನಲಾಗಿದೆ.

PREV

Recommended Stories

ಮಹಾಜನ ವರದಿ ಒಪ್ಪಿ, ಇಲ್ಲದಿದ್ರೆ ಯಥಾಸ್ಥಿತಿ ಇರಲಿ
ಸೂರಿಲ್ಲದವರಿಗೆ ಸೂರು ಒದಗಿಸುವ ಸಂಕಲ್ಪ: ವಿಜಯಾನಂದ ಕಾಶಪ್ಪನವರ