ಸಿ.ಪುಟ್ಟರಂಗಶೆಟ್ಟಿ ಉಪ್ಪಾರ ಜನಾಂಗದ ಪರ ಧ್ವನಿ ಎತ್ತಲಿ

KannadaprabhaNewsNetwork | Published : Apr 18, 2025 12:33 AM

ಸಾರಾಂಶ

ಚಾಮರಾಜನಗರದಲ್ಲಿ ಬಿಜೆಪಿ ಒಬಿಸಿ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ನೂರೊಂದುಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಜಾತಿ ಗಣತಿ ವರದಿಯಲ್ಲಿ ಉಪ್ಪಾರ ಜನಾಂಗದ ಸಂಖ್ಯೆಯನ್ನು ತಪ್ಪಾಗಿ ನಮೂದಿಸಲಾಗಿದ್ದು, ಜನಾಂಗಕ್ಕೆ ಅನ್ಯಾಯವಾಗಿದ್ದು ಉಪ್ಪಾರ ಜನಾಂಗದ ಏಕೈಕ ಶಾಸಕ ಸಿ.ಪುಟ್ಟರಂಗಶೆಟ್ಟಿ ಧ್ವನಿ ಎತ್ತಬೇಕು ಎಂದು ಬಿಜೆಪಿ ಒಬಿಸಿ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ನೂರೊಂದುಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತಿ ಗಣತಿ ವಿರುದ್ಧ ಕಾಂಗ್ರೆಸ್‌ನಲ್ಲಿರುವ ಒಕ್ಕಲಿಗ, ಲಿಂಗಾಯತ ಶಾಸಕರು ಮಾತನಾಡುತ್ತಿದ್ದಾರೆ. ಆದರೆ, ಪುಟ್ಟರಂಗಶೆಟ್ಟರು ಜನಾಂಗದ ಪರ ಧ್ವನಿ ಎತ್ತಿದರೆ ಸಿದ್ದರಾಮಯ್ಯ ಅವರನ್ನು ವಿರೋಧ ಮಾಡಿಕೊಳ್ಳಬೇಕಾಗುತ್ತದೆ. ಜೊತೆಗೆ ಮುಸ್ಲಿಂ, ಕುರುಬ ಜನಾಂಗದ ಮತಗಳನ್ನು ಕಳೆದುಕೊಳ್ಳಬೇಕಾಗುತ್ತದೆ ಎಂಬ ಭಯದಿಂದ ಮಾತನಾಡುತ್ತಿಲ್ಲ ಎಂದು ದೂರಿದರು. ಜನಾಂಗದ ಪರ ಧ್ವನಿ ಎತ್ತದ ಪುಟ್ಟರಂಗಶೆಟ್ಟಿ ಅವರಿಗೆ ಶಾಸಕ ಸ್ಥಾನ ಯಾಕೆ ಬೇಕು ಎಂದು ಪ್ರಶ್ನಿಸಿದ ಅವರು ಕೂಡಲೇ ಶಾಸಕರು ಮೌನ ಮುರಿದು ಮುಖ್ಯಮಂತ್ರಿ ಬಳಿಯಾದರೂ ಜನಾಂಗಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ಮನವಿ ಮಾಡಬೇಕು ಎಂದರು.ರಾಜ್ಯದಲ್ಲಿ ಉಪ್ಪಾರ ಜನಾಂಗದ 30-35 ಲಕ್ಷ ಜನಸಂಖ್ಯೆ ಇದೆ ಎಂದು ಹಲವು ವರ್ಷಗಳಿಂದಲೂ ಹೇಳಿಕೊಂಡು ಬರಲಾಗುತ್ತಿದೆ. ವರದಿಯಲ್ಲಿ ಕನಿಷ್ಠ 25 ಲಕ್ಷ ಜನಸಂಖ್ಯೆ ತೋರಿಸಿದರೂ ಬೇಸರವಾಗುತ್ತಿರಲಿಲ್ಲ. ರಾಜ್ಯದಲ್ಲಿ ಉಪ್ಪಾರ ಜನಾಂಗ 7.5 ಲಕ್ಷ ಜನಸಂಖ್ಯೆ ಇದೆ ಎಂದು ವರದಿಯಲ್ಲಿ ನಮೂದಿಸಲಾಗಿದೆ. ಚಾಮರಾಜನಗರ, ಮೈಸೂರು ಜಿಲ್ಲೆಗಳಲ್ಲಿಯೇ 2.25 ಲಕ್ಷ ಉಪ್ಪಾರ ಜನಾಂಗದ ಮತದಾರರಿದ್ದು ಎರಡು ಜಿಲ್ಲೆಗಳಲ್ಲಿ ಸುಮಾರು 3 ಲಕ್ಷಕ್ಕೂ ಹೆಚ್ಚು ಜನರಿದ್ದಾರೆ ಎಂದರು.ಜಾತಿ ಗಣತಿ ವರದಿ ಜಾರಿಯಾದರೆ ಮುಂದಿನ ದಿನಗಳಲ್ಲಿ ಉಪ್ಪಾರ ಜನಾಂಗಕ್ಕೆ ಸಿಗುವ ಮೀಸಲಾತಿ ಹಾಗೂ ಅಭಿವೃದ್ಧಿ ನಿಗಮಕ್ಕೆ ಸಿಗಬೇಕಾದ ಅನುದಾನದಲ್ಲಿ ಕಡಿತವಾಗಲಿದೆ. ಇದೊಂದು ಅವೈಜ್ಞಾನಿಕ ವರದಿಯಾಗಿದ್ದು ಗಣತಿಗೆ ಯಾರೊಬ್ಬರು ಜನಾಂಗದ ಬಡಾವಣೆಗಳ ಮನೆಗಳಿಗೆ ಬಂದಿಲ್ಲ ಎಂದು ಹೇಳಿದರು. ಅಲ್ಲದೇ ಮುಸ್ಲಿಂರನ್ನು ಓಲೈಕೆ ಮಾಡಲು ಏರಿಕೆ ಮಾಡಲಾಗಿದೆ. ಉಪ್ಪಾರ ಜನಾಂಗ ಹೆಚ್ಚಿರುವುದು ಹೊರಗೆ ಗೊತ್ತಾದರೆ ಕುರುಬ ಜನಾಂಗಕ್ಕೆ ಮಾನ್ಯತೆ ಕಡಿಮೆಯಾಗುತ್ತದೆ ಎಂಬ ಭಯದಿಂದ ಜನಸಂಖ್ಯೆ ಕಡಿಮೆ ಮಾಡಲಾಗಿದೆ. ಜಾತಿ ಗಣತಿ ವರದಿಯಲ್ಲಿ ದಿಯಲ್ಲಿ ಸಿದ್ದರಾಮಯ್ಯ ಅವರ ಸ್ಕ್ರಿಪ್ಟ್ ಕೆಲಸ ಮಾಡಿದೆ. ಸರ್ಕಾರ ವರದಿಯನ್ನು ತಿರಸ್ಕರಿಸಿ ಮತ್ತೊಮ್ಮೆ ಜಾತಿ ಗಣತಿ ಸಮೀಕ್ಷೆ ಮಾಡಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದರು.

ಸುದ್ದಿಗೋಷ್ಟಿಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊನ್ನೂರು ಮಹದೇವಸ್ವಾಮಿ, ಒಬಿಸಿ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೋಮಣ್ಣ ಉಪ್ಪಾರ್, ಜಿಲ್ಲಾ ಕಾರ್ಯದರ್ಶಿ ರಂಗಸ್ವಾಮಿ, ಯುವ ಮೋರ್ಚಾದ ಆನಂದ್ ಭಗೀರಥ, ಮುಖಂಡ ಶಿವಣ್ಣ ಇದ್ದರು.

Share this article