ಕೆಐಎಡಿಬಿ ಸಿಎ ನಿವೇಶನ ಹಂಚಿಕೆ : ಮಲ್ಲಿಕಾರ್ಜುನ ಖರ್ಗೆ, ಎಂ.ಬಿ. ಪಾಟೀಲ್‌ ವಿರುದ್ಧ ಆರೋಪ

KannadaprabhaNewsNetwork | Updated : Sep 03 2024, 05:41 AM IST

ಸಾರಾಂಶ

ಕೆಐಎಡಿಬಿ ಸಿಎ ನಿವೇಶನ ಹಂಚಿಕೆಯಲ್ಲಿ ನಿಯಮ ಉಲ್ಲಂಘನೆ ಮಾಡಿ ಮಲ್ಲಿಕಾರ್ಜುನ ಖರ್ಗೆ ಕುಟುಂಬ ಮತ್ತು ಎಂ.ಬಿ. ಪಾಟೀಲ್‌ ಜತೆ ಸಂಬಂಧ ಹೊಂದಿರುವವರಿಗೆ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ರಾಜ್ಯಪಾಲರು ಸರ್ಕಾರದಿಂದ ಸ್ಪಷ್ಟನೆ ಕೋರಿದ್ದಾರೆ.

 ಬೆಂಗಳೂರು : ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬಕ್ಕೆ ಸೇರಿದ ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ಹಾಗೂ ಸಚಿವ ಎಂ.ಬಿ. ಪಾಟೀಲ್‌ ಜತೆ ವ್ಯವಹಾರ ಸಂಬಂಧ ಹೊಂದಿರುವ ವ್ಯಕ್ತಿಗಳ ಸಂಸ್ಥೆಗಳಿಗೆ ನಿಯಮ ಬಾಹಿರವಾಗಿ ಕೆಐಎಡಿಬಿ ಸಿಎ (ನಾಗರಿಕ ಸೌಲಭ್ಯ) ನಿವೇಶನ ಹಂಚಿಕೆ ಮಾಡಲಾಗಿದೆ ಎಂಬ ದೂರಿನ ಬಗ್ಗೆ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಅವರು ಸರ್ಕಾರದ ಸ್ಪಷ್ಟನೆ ಕೋರಿ ಪತ್ರ ಬರೆದಿದ್ದಾರೆ.

ಕೆಐಎಡಿಬಿ ಸಿಎ ನಿವೇಶನಗಳ ಹಂಚಿಕೆಯಲ್ಲಿ ನಿಯಮ ಉಲ್ಲಂಘನೆ ಮಾಡಿದ್ದು, 43 ನಿವೇಶನಗಳನ್ನು ಹಂಚಿಕೆ ಮಾಡುವಲ್ಲಿ ಸ್ವಜನಪಕ್ಷಪಾತ ಧೋರಣೆ ಅನುಸರಿಸಲಾಗಿದೆ. ಹೀಗಾಗಿ ಸಚಿವ ಎಂ.ಬಿ. ಪಾಟೀಲ್‌ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಬೇಕು ಎಂದು ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ರಾಜ್ಯಪಾಲರಿಗೆ ದೂರು ನೀಡಿದ್ದರು.

ಇದರ ಬೆನ್ನಲ್ಲೇ ವಿಧಾನಪರಿಷತ್‌ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು, ಸಿಎ ನಿವೇಶನಗಳಿಗಾಗಿ 193 ಸಂಸ್ಥೆಗಳು ಅರ್ಜಿ ಸಲ್ಲಿಸಿದ್ದವು. ಈ ಪೈಕಿ 43 ಸಂಸ್ಥೆಗಳಿಗೆ ಹಂಚಿಕೆ ಮಾಡಲಾಗಿದ್ದು, ವ್ಯಾಪಕ ನಿಯಮ ಉಲ್ಲಂಘನೆಯಾಗಿದೆ. ಮುಖ್ಯವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬಕ್ಕೆ ಸೇರಿದ ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ನಿಯಮಬಾಹಿರವಾಗಿ ಅತಿ ಕಡಿಮೆ ದರಕ್ಕೆ ನಾಗರಿಕ ಸೌಲಭ್ಯ ನಿವೇಶನ ನೀಡಲಾಗಿದೆ. ಹೀಗಾಗಿ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ದೂರು ಸಲ್ಲಿಸಿದ್ದರು.

ಈ ಹಿನ್ನೆಲೆಯಲ್ಲಿ ಕೆಐಎಡಿಬಿ ಸಿಎ ನಿವೇಶನಗಳ ಹಂಚಿಕೆ ಬಗೆಗಿನ ದೂರುಗಳ ಬಗ್ಗೆ ಸ್ಪಷ್ಟನೆ ನೀಡುವಂತೆ ಸೋಮವಾರ ರಾಜ್ಯಪಾಲರ ಕಚೇರಿಯು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರಿಗೆ ಪತ್ರ ಬರೆದಿದೆ. ಆ ಮೂಲಕ ಮುಡಾ ಬಳಿಕ ಸಿಎ ನಿವೇಶನ ಹಂಚಿಕೆ ಸಂಬಂಧ ರಾಜ್ಯಪಾಲರು ಹಾಗೂ ಸರ್ಕಾರದ ಸಂಘರ್ಷ ಉಂಟಾಗುವ ಸಾಧ್ಯತೆ ಗೋಚರಿಸಿದೆ.

ಖರ್ಗೆ ಕುಟುಂಬಕ್ಕೆ ಸಿಎ ನಿವೇಶನ:ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪುತ್ರ ರಾಹುಲ್ ಖರ್ಗೆ ಅಧ್ಯಕ್ಷತೆಯ ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ರಾಜ್ಯ ಸರ್ಕಾರ ತರಾತುರಿಯಲ್ಲಿ ಮತ್ತು ನಿಯಮಗಳನ್ನು ಉಲ್ಲಂಘಿಸಿ ಬೆಂಗಳೂರಿನ (ದೇವನಹಳ್ಳಿ) ಏರೋಸ್ಪೇಸ್ ಪಾರ್ಕ್‌ನಲ್ಲಿ 5 ಎಕರೆ ನಾಗರಿಕ ಸೌಲಭ್ಯಗಳ ನಿವೇಶನ ಮಂಜೂರು ಮಾಡಿದೆ.ಈ ರೀತಿ ಭೂಮಿ ಹಂಚಿಕೆ ಆಗಿರುವುದರ ಹಿಂದೆ ಪ್ರಭಾವ ಕೆಲಸ ಮಾಡಿದೆ. 

ಸ್ವಜನ‌ಪಕ್ಷಪಾತ ಎದ್ದು ಕಾಣುತ್ತಿದ್ದು, ಈ ಕಾರಣಕ್ಕೆ ತನಿಖೆಯಾಗಬೇಕು ಎಂದು ದೂರು ಛಲವಾದಿ ನಾರಾಯಣಸ್ವಾಮಿ ದೂರು ಸಲ್ಲಿಸಿದ್ದರು.ಮಾರ್ಚ್ 4ರಂದು ಅರ್ಜಿಗಳ ಪರಿಶೀಲನೆ ನಡೆದಿದ್ದು, ಮಾರ್ಚ್ 5ರಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ನಿರ್ಣಯ ಕೈಗೊಂಡು ಮಾರ್ಚ್ 6ರಿಂದ ಹಂಚಿಕೆ ಪತ್ರಗಳನ್ನು ನೀಡಲಾಗಿದೆ. ಇದೆಲ್ಲವನ್ನೂ ಇಷ್ಟು ಅವಸರದಲ್ಲಿ ಏಕೆ ಮಾಡಲಾಗಿದೆ? ಅರ್ಜಿ ಸಲ್ಲಿಸಲು ಕೇವಲ 14 ದಿನಗಳ ಕಾಲಾವಕಾಶ ನೀಡಿ ತರಾತುರಿಯಲ್ಲಿ ಪ್ರಕ್ರಿಯೆ ಮುಗಿಸಿರುವ ಹಿಂದೆ ಸ್ವಜನಪಕ್ಷಪಾತ ಹಾಗೂ ಅಕ್ರಮ ನಡೆದಿದೆ ಎಂದು ಆರೋಪಿಸಿ ದೂರು ಬಂದಿದೆ. ಈ ಬಗ್ಗೆ ಹೆಚ್ಚಿನ ಸ್ಪಷ್ಟನೆ ಕೋರಿ ರಾಜ್ಯಪಾಲರು ಪತ್ರ ಬರೆದಿದ್ದಾರೆ‌.

ಎಂ.ಬಿ. ಪಾಟೀಲ್‌ ವಿರುದ್ಧವೂ ಸ್ವಜನಪಕ್ಷಪಾತ ಆರೋಪ: ಬೃಹತ್‌ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್‌ ಅವರು ನಿವೇಶನ ಹಂಚಿಕೆಯಲ್ಲಿ ಸ್ವಜನಪಕ್ಷಪಾತ ಮಾಡಿದ್ದಾರೆ. ಎಂ.ಬಿ. ಪಾಟೀಲ್‌ ಅವರು ರಾಜ ಬಾಗಮನೆ ಅವರಿಂದ 4 ಕೋಟಿ ರು. ಸಾಲ ಪಡೆದಿರುವುದಾಗಿ ಚುನಾವಣಾ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ. ರಾಜ ಬಾಗಮನೆ ಅವರು ಬಾಗಮನೆ ಡೆವಲಪರ್ಸ್‌ ಪ್ರೈವೇಟ್‌ ಲಿಮಿಟೆಡ್‌ನ ಸಂಸ್ಥಾಪಕ ಹಾಗೂ ನಿರ್ದೇಶಕರು. ಇವರೇ ನಿರ್ದೇಶಕರಾಗಿರುವ ವೈಗೈ ಇನ್ವೆಸ್ಟರ್ಸ್‌ ಪ್ರೈವೇಟ್‌ ಲಿಮಿಟೆಡ್‌ಗೆ ನಿಯಮ ಉಲ್ಲಂಘಿಸಿ ನಿವೇಶನ ನೀಡಲಾಗಿದೆ. ಇನ್ನು ಎಂ.ಬಿ. ಪಾಟೀಲ್‌ ಅವರ ಒಡನಾಡಿ ಬಬಲೇಶ್ವರ ಅವರಿಗೆ ಸೇರಿ ಹಲವರಿಗೆ ನಿಯಮ ಬಾಹಿರವಾಗಿ ನಿವೇಶನ ಕೊಡಲು ನೆರವಾಗಿದ್ದಾರೆ ಎಂದು ದಿನೇಶ್‌ ಕಲ್ಲಹಳ್ಳಿ ದೂರಿನಲ್ಲಿ ತಿಳಿಸಿದ್ದರು. ಈ ಬಗ್ಗೆ ರಾಜ್ಯಪಾಲರು ಸಮಗ್ರ ಸ್ಪಷ್ಟ ಕೋರಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

Share this article