ಸ್ವಿಗ್ಗಿ, ಝೊಮೆಟೋ, ಅಮೆಜಾನ್‌ ಸೇರಿ ಪ್ಲಾಟ್‌ಫಾರ್ಮ್‌, ಇ-ಕಾಮರ್ಸ್‌ಗಳಿಗೆ ಗಿಗ್‌ ವಿಧೇಯಕ ಜಾರಿ

KannadaprabhaNewsNetwork |  
Published : Apr 12, 2025, 12:50 AM ISTUpdated : Apr 12, 2025, 07:33 AM IST
Swiggy logo

ಸಾರಾಂಶ

ಸ್ವಿಗ್ಗಿ, ಝೊಮೆಟೋ, ಅಮೆಜಾನ್‌ ಸೇರಿ ಪ್ಲಾಟ್‌ಫಾರ್ಮ್‌, ಇ-ಕಾಮರ್ಸ್‌ ಆಧಾರಿತ ಗಿಗ್‌ ಕಾರ್ಮಿಕರು ಹಾಗೂ ಅವರ ಕುಟುಂಬದವರಿಗೆ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ರಚಿಸಿರುವ ‘ಕರ್ನಾಟಕ ಪ್ಲಾಟ್‌ಫಾರ್ಮ್‌ ಆಧಾರಿತ ಗಿಗ್‌ ಕಾರ್ಮಿಕರ ವಿಧೇಯಕ-2025 ಜಾರಿಗೆ ತರಲು ಸಂಪುಟ ಸಭೆ ಸಮ್ಮತಿ 

  ಬೆಂಗಳೂರು : ಸ್ವಿಗ್ಗಿ, ಝೊಮೆಟೋ, ಅಮೆಜಾನ್‌ ಸೇರಿ ಪ್ಲಾಟ್‌ಫಾರ್ಮ್‌, ಇ-ಕಾಮರ್ಸ್‌ ಆಧಾರಿತ ಗಿಗ್‌ ಕಾರ್ಮಿಕರು ಹಾಗೂ ಅವರ ಕುಟುಂಬದವರಿಗೆ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ರಚಿಸಿರುವ ‘ಕರ್ನಾಟಕ ಪ್ಲಾಟ್‌ಫಾರ್ಮ್‌ ಆಧಾರಿತ ಗಿಗ್‌ ಕಾರ್ಮಿಕರ(ಸಾಮಾಜಿಕ ಭದ್ರತೆ ಹಾಗೂ ಕಲ್ಯಾಣ) ವಿಧೇಯಕ-2025 ಜಾರಿಗೆ ತರಲು ರಾಜ್ಯ ಸಚಿವ ಸಂಪುಟ ಸಭೆ ಸಮ್ಮತಿಸಿದೆ.

ಅಸಂಘಟಿತ ವಲಯದ ಈ ಕಾರ್ಮಿಕರಿಗೆ ಮೊದಲ ಬಾರಿಗೆ ಅಪಘಾತ ವಿಮೆ ಘೋಷಣೆ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಈಗ ಇನ್ನೊಂದು ಮಹತ್ವದ ನಿರ್ಧಾರ ಕೈಗೊಂಡಿದೆ.

ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ.ಪಾಟೀಲ್‌, ಗಿಗ್‌ ಕಾರ್ಮಿಕರ ಸಾಮಾಜಿಕ ಭದ್ರತೆಗಾಗಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ರಚಿಸಿರುವ ಕರಡು ವಿಧೇಯಕವನ್ನು ಮುಖ್ಯಮಂತ್ರಿಯವರ ನೇತೃತ್ವದ ಇತ್ತೀಚಿನ ಸಭೆಯಲ್ಲಿ ಕೆಲ ಪರಿಷ್ಕರಣೆಗಳೊಂದಿಗೆ ಸಚಿವ ಸಂಪುಟದ ಮುಂದೆ ತರಲಾಗಿತ್ತು. ಈ ವಿಧೇಯಕವನ್ನು ಮುಂದಿನ ಅಧಿವೇಶನದಲ್ಲಿ ಮಂಡಿಸಿ ಒಪ್ಪಿಗೆ ಪಡೆಯುವ ಮೂಲಕ ಕಾನೂನಾಗಿ ಜಾರಿಗೊಳಿಸಲು ಕ್ಯಾಬಿನೆಟ್‌ ಸಮ್ಮತಿಸಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಗಿಗ್ ಕಾರ್ಮಿಕರ ಸಂಖ್ಯೆ ಸುಮಾರು 2.30 ಲಕ್ಷದಷ್ಟಿದೆ ಎಂದು ನೀತಿ ಆಯೋಗದ ವರದಿ ಹೇಳಿದೆ. ಅಸಂಘಟಿತ ವಲಯ ವ್ಯಾಪ್ತಿಯ ಈ ಕಾರ್ಮಿಕರು ಕಾರ್ಮಿಕ ಕಾನೂನುಗಳಡಿ ಲಭ್ಯವಿರುವ ಸಾಮಾಜಿಕ ಭದ್ರತಾ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಸರಕು ಸೇವೆಗಳನ್ನು ನಿಗದಿತ ಸಮಯಕ್ಕೆ ವಾಹನಗಳಲ್ಲಿ ಸೂಚಿಸಿದ ಸ್ಥಳಕ್ಕೆ ತಲುಪಿಸುವ ಸಂದರ್ಭಗಳಲ್ಲಿ ಅಪಘಾತಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅಂಥ ಅವಘಡಗಳು ಸಂಭವಿಸಿದಾಗ ಅಪಘಾತ ಪರಿಹಾರ, ನೈಸರ್ಗಿಕ ಮರಣ ಪರಿಹಾರ, ಅಂತ್ಯಸಂಸ್ಕಾರ ವೆಚ್ಚ, ವಿವಾಹ ಭತ್ಯೆ, ಹೆರಿಗೆ ಭತ್ಯೆ, ಮಕ್ಕಳಿಗೆ ಶೈಕ್ಷಣಿಕ ಸಹಾಯಧನ, ಭವಿಷ್ಯ ನಿಧಿ, ವಸತಿ ಸೌಲಭ್ಯ, ಕೌಶಲ್ಯಾಭಿವೃದ್ಧಿ ಹಾಗೂ ವೃದ್ಧಾಪ್ಯ ನೆರವು ಇತ್ಯಾದಿ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಹಂತ ಹಂತವಾಗಿ ಒದಗಿಸಲು ಅಗ್ರಿಗೇಟರ್, ಪ್ಲಾಟ್‌ಫಾರ್ಮ್‌ಗಳ ಆದಾಯದಲ್ಲಿ ಕನಿಷ್ಠ ಶೇ.1ರಿಂದ ಗರಿಷ್ಠ 2ರಷ್ಟು ಕಲ್ಯಾಣ ಶುಲ್ಕ ವಿಧಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

ನಿಧಿ ನಿರ್ವಹಣೆಗೆ ಕಲ್ಯಾಣ ಮಂಡಳಿ : ಗಿಗ್‌ ಕಾರ್ಮಿಕರ ಸೇವೆ ಬಳಸಿಕೊಂಡು ಲಾಭ ಮಾಡುತ್ತಿರುವ ಅಗ್ರಿಗೇಟರ್‌ಗಳು ಸಾಮಾಜಿಕ ಜವಾಬ್ದಾರಿ ಹೊರಬೇಕಾಗುತ್ತದೆ. ಇದಕ್ಕಾಗಿ ಅವುಗಳು ಕಾರ್ಮಿಕರಿಗೆ ಪಾವತಿಸುವ ಪ್ರತಿ ವಹಿವಾಟಿನ ಮೇಲೆ ಕನಿಷ್ಠ ಶೇ.1ರಿಂದ ಗರಿಷ್ಠ ಶೇ.2ರಷ್ಟು ಸುಂಕ ವಿಧಿಸಿ ನಿಧಿ ಸಂಗ್ರಹಿಸಲಾಗುವುದು. ನಿಧಿ ನಿರ್ವಹಣೆ ಹಾಗೂ ಫಲಾನುಭವಿಗಳಿಗೆ ಮತ್ತು ಅವರ ಕುಟುಂಬಗಳಿಗೆ ಅಥವಾ ಅವರ ಅವಲಂಬಿತರಿಗೆ ಸಾಮಾಜಿಕ ಭದ್ರತಾ ಸೌಲಭ್ಯಗಳ ‘ಕರ್ನಾಟಕ ಫ್ಲಾಟ್‌ ಫಾರ್ಮ್‌ ಆಧಾರಿತ ಗಿಗ್‌ ಕಾರ್ಮಿಕರ ಕಲ್ಯಾಣ ಮಂಡಳಿ’ ರಚಿಸಲು ಉದ್ದೇಶಿಸಲಾಗಿದೆ ಎಂದು ಸಚಿವರು ವಿವರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ