ಮುಡಾ ನಷ್ಟ ವಸೂಲಿಗೆ ಸಂಪುಟದಲ್ಲಿ ನಿರ್ಧಾರ

KannadaprabhaNewsNetwork |  
Published : Sep 05, 2025, 01:00 AM ISTUpdated : Sep 05, 2025, 05:21 AM IST
muda site

ಸಾರಾಂಶ

ಮುಡಾ ನಿವೇಶನ ಹಂಚಿಕೆಯಲ್ಲಿ ಅಕ್ರಮ ಎಸಗಿರುವ ಅಧಿಕಾರಿಗಳು ಮತ್ತು ಅಕ್ರಮ ನಿವೇಶನದಾರರ ವಿರುದ್ಧ ನ್ಯಾಯಾಂಗ ಕ್ರಮ ಕೈಗೊಳ್ಳುವ ಜತೆಗೆ, ಮುಡಾಗೆ ಉಂಟಾಗಿರುವ ಆರ್ಥಿಕ ನಷ್ಟ ವಸೂಲಿಗೆ ನ್ಯಾ.ಪಿ.ಎನ್‌. ದೇಸಾಯಿ ಆಯೋಗ ಮಾಡಿರುವ ಶಿಫಾರಸು ಅನುಷ್ಠಾನಕ್ಕೆ ಗುರುವಾರದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.

 ಬೆಂಗಳೂರು :  ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ನಿವೇಶನ ಹಂಚಿಕೆಯಲ್ಲಿ ಅಕ್ರಮ ಎಸಗಿರುವ ಅಧಿಕಾರಿಗಳು ಮತ್ತು ಅಕ್ರಮ ನಿವೇಶನದಾರರ ವಿರುದ್ಧ ನ್ಯಾಯಾಂಗ ಕ್ರಮ ಕೈಗೊಳ್ಳುವ ಜತೆಗೆ, ಮುಡಾಗೆ ಉಂಟಾಗಿರುವ ಆರ್ಥಿಕ ನಷ್ಟ ವಸೂಲಿಗೆ ಕ್ರಮ ಕೈಗೊಳ್ಳುವುದು ಸೇರಿ ನ್ಯಾ.ಪಿ.ಎನ್‌. ದೇಸಾಯಿ ಏಕಸದಸ್ಯ ವಿಚಾರಣಾ ಆಯೋಗ ಮಾಡಿರುವ ಶಿಫಾರಸು ಅನುಷ್ಠಾನಕ್ಕೆ ಗುರುವಾರದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.

ಅಕ್ರಮದ ಮೂಲಕ ಮುಡಾ ಸಂಸ್ಥೆಗೆ ಅಧಿಕಾರಿಗಳು, ಸರ್ವೇಯರ್‌, ಸಿಬ್ಬಂದಿ ಮತ್ತು ಅಕ್ರಮ ಫಲಾನುಭವಿಗಳಿಂದ ನಷ್ಟ ಉಂಟಾಗಿದೆ. ಅದರಲ್ಲೂ 2020ರ ಮೇ ತಿಂಗಳಿನಿಂದ 2024ರ ಜುಲೈವರೆಗಿನ ಆಯುಕ್ತರು, ಸರ್ವೇಯರ್‌, ಸಿಬ್ಬಂದಿ ಮತ್ತು ಅಕ್ರಮ ಫಲಾನುಭವಿಗಳಿಗೆ ಅಕ್ರಮ ಹಂಚಿಕೆ ಸಾಕಷ್ಟಿವೆ ಎಂದು ಆಯೋಗ ತನ್ನ ಶಿಫಾರಸಿನಲ್ಲಿ ತಿಳಿಸಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆಯೂ ಸೂಚಿಸಿದೆ. ಇದನ್ನು ಸರ್ಕಾರ ಒಪ್ಪಿದ್ದು, ಕ್ರಮ ಕೈಗೊಳ್ಳಲು ತೀರ್ಮಾನಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರ ಪರ್ಯಾಯ ನಿವೇಶನ ಪಡೆದ ಆರೋಪದ ಹಿನ್ನೆಲೆಯಲ್ಲಿ ಮುಡಾದಲ್ಲಿ ದೊಡ್ಡ ಪ್ರಮಾಣದಲ್ಲಿ ಇತರೆ ಅಕ್ರಮಗಳು ನಡೆದಿವೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಹೈಕೋರ್ಟ್‌ ನಿವೃತ್ತ ನ್ಯಾ.ಪಿ.ಎನ್‌.ದೇಸಾಯಿ ಏಕಸದಸ್ಯ ವಿಚಾರಣಾ ಆಯೋಗ ನೇಮಿಸಲಾಗಿತ್ತು. ಆಯೋಗವು 2006ರಿಂದ 2024ರ ಜು.15ರವರೆಗಿನ 19 ವರ್ಷಗಳ ಅವಧಿಯಲ್ಲಿ ಮುಡಾದಿಂದ ನಡೆದಿರುವ ನಿವೇಶನಗಳ ಹಂಚಿಕೆ ಕುರಿತು ಪರಿಶೀಲನೆ ನಡೆಸಿದೆ. ಒಟ್ಟಾರೆ ಮುಡಾ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆಗೆ ಸೂಚಿಸಿರುವ ಆಯೋಗ, ಯಾವೆಲ್ಲ ಅಂಶಗಳು ತಪ್ಪಾಗಿದ್ದು, ಅದಕ್ಕೆ ಏನು ಕ್ರಮ ಕೈಗೊಳ್ಳಬೇಕು ಎಂಬ ಕುರಿತು 80 ಅಂಶಗಳ ಶಿಫಾರಸು ಮಾಡಿದೆ.

8 ಅಂಶ ಇಟ್ಟುಕೊಂಡು ತನಿಖೆ:

ವಿಚಾರಣಾ ಆಯೋಗವು ಒಟ್ಟು 8 ಅಂಶಗಳನ್ನು ಮುಂದಿಟ್ಟುಕೊಂಡು ತನಿಖೆ ನಡೆಸಿದ್ದು, ಅದರಲ್ಲಿ ಅಧಿಕಾರಿಗಳು, ಸರ್ವೇಯರ್‌, ಸಿಬ್ಬಂದಿ ಮತ್ತು ಅಕ್ರಮ ಫಲಾನುಭವಿಗಳಿಂದ ಅಕ್ರಮಗಳು ನಡೆದಿವೆ ಎಂದು ಉಲ್ಲೇಖಿಸಿದೆ. ಅದರಲ್ಲೂ 2020ರ ಮೇ ತಿಂಗಳಿನಿಂದ 2024ರ ಜುಲೈವರೆಗಿನ ಆಯುಕ್ತರು, ಸರ್ವೇಯರ್‌, ಸಿಬ್ಬಂದಿ ಮತ್ತು ಅಕ್ರಮ ಫಲಾನುಭವಿಗಳಿಗೆ ಅಕ್ರಮ ಹಂಚಿಕೆ ಸಾಕಷ್ಟಿವೆ ಎಂದು ತಿಳಿಸಿದೆ.

ಅದರ ಜತೆಗೆ ಹಂಚಿಕೆ ಮಾಡಲಾದ ನಿವೇಶನ ಭೌತಿಕವಾಗಿ ಲಭ್ಯವಿಲ್ಲ, ವಾಸಿಸಲು ಅನುಕೂಲಕರವಾಗಿಲ್ಲ, ಸ್ಮಶಾನದ ಪಕ್ಕ ನಿವೇಶನ ಹಂಚಿಕೆ ಮಾಡಲಾಗಿದೆ ಎಂಬ ಕಾರಣಗಳನ್ನು ನೀಡಿ ಮುಡಾದಿಂದ ಪರ್ಯಾಯ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಇದರಿಂದ ಮುಡಾಕ್ಕೆ ಆರ್ಥಿಕ ನಷ್ಟವುಂಟಾಗಿದೆ. ಅದರ ಜತೆ ಕೆಲ ಪ್ರಕರಣಗಳಲ್ಲಿ ದಶಕಗಳ ನಂತರ ನಕಲಿ ಹಕ್ಕು ಸಾಧಿಸಿ ನಿವೇಶನ ರೂಪದಲ್ಲಿ ಪರಿಹಾರ ಕೇಳಿರುವುದು, ಸಿಎ ನಿವೇಶನಗಳನ್ನೂ ಅಕ್ರಮವಾಗಿ ಹಂಚಿಕೆ ಮಾಡಲಾಗಿದೆ ಎಂದು ಆಯೋಗ ಗಮನಿಸಿದ್ದು, ಈ ಕುರಿತು ವರದಿಯಲ್ಲಿ ತಿಳಿಸಿದೆ.

ಹೀಗೆ ಹಲವು ಕಾರಣಗಳಿಂದಾಗಿ ಸಾಕಷ್ಟು ನಷ್ಟವುಂಟಾಗಿದೆ ಹಾಗೂ ಪ್ರತಿ ಹಂತದಲ್ಲೂ ಅಕ್ರಮಗಳು ನಡೆದಿವೆ. ಹೀಗೆ ಮುಡಾಕ್ಕೆ ಆರ್ಥಿಕ ನಷ್ಟವುಂಟು ಮಾಡಿದ ಅಧಿಕಾರಿ, ಸರ್ವೇಯರ್‌, ಸಿಬ್ಬಂದಿ ಮತ್ತು ಅಕ್ರಮ ಫಲಾನುಭವಿಗಳಿಂದ ನಷ್ಟ ವಸೂಲಿ ಮಾಡಬೇಕು ಹಾಗೂ ನ್ಯಾಯಾಂಗ ಮತ್ತು ಇಲಾಖಾ ವಿಚಾರಗಳನ್ನು ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಆಯೋಗ ಶಿಫಾರಸು ಮಾಡಿದೆ. ಹೀಗೆ ಆಯೋಗ ಮಾಡಿರುವ ಎಲ್ಲ ಶಿಫಾರಸುಗಳನ್ನು ಪರಿಶೀಲಿಸಿ ಅದರಂತೆ ಕ್ರಮ ಕೈಗೊಳ್ಳಲು ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.

ಸಿಎಂ ಪತ್ನಿ ಪಾರ್ವತಿಗೆ ಬದಲಿ

ನಿವೇಶನ ಹಂಚಿಕೆಯಲ್ಲಿ ತಪ್ಪಿಲ್ಲ

ನ್ಯಾ.ಪಿ.ಎನ್‌.ದೇಸಾಯಿ ಏಕಸದಸ್ಯ ವಿಚಾರಣಾ ಆಯೋಗವು ತನಿಖೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾವರ್ತಿ ಅವರು ಕೆಸರೆ ಗ್ರಾಮದ ಭೂಮಿಗೆ ಬದಲಾಗಿ ನಿವೇಶನ ಪಡೆದ ವಿಚಾರವನ್ನು ಪರೋಕ್ಷವಾಗಿ ಪರಿಶೀಲನೆ ನಡೆಸಿದೆ. ಅದರಂತೆ ಕೆಸರೆ ಗ್ರಾಮದ ಸರ್ವೇ ನಂ.464ರ ಭೂಮಿಯನ್ನು ಡಿನೋಟಿಫೈ ಮಾಡಿದ್ದರೂ ಅದನ್ನು ಮುಡಾ ಬಳಸಿಕೊಂಡಿದ್ದಕ್ಕೆ ನಂತರ ಪರಿಹಾರವಾಗಿ ನಿವೇಶನ ಹಂಚಿಕೆ ಮಾಡಲಾಗಿದೆ. ಇದನ್ನು ಅಕ್ರಮ ಎಂದು ಹೇಳಲಾಗದು ಎಂದು ಉಲ್ಲೇಖಿಸಲಾಗಿದೆ.

PREV
Read more Articles on

Recommended Stories

ಬಿಆರ್‌ಎಲ್ ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಚಿರಕಾಲ ಉಳಿಯುವ ಆಪ್ತಭಾವದ ಕವಿ
ದಸರಾ ವೇಳೆ ಬಾನುರಿಂದ 2023ರ ಘಟನೆ ಮರುಕಳಿಸಬಾರ್ದು : ಯದುವೀರ್‌