ರಾಹುಲ್ ಗಾಂಧಿ ಕಾಣೆಯಾಗಿದ್ದರಿಂದಲೇ ಸಚಿವ ಸಂಪುಟ ವಿಸ್ತರಣೆ ವಿಳಂಬ: ಜೋಶಿ

KannadaprabhaNewsNetwork |  
Published : Jul 12, 2026, 03:15 AM IST
ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿದರು.  | Kannada Prabha

ಸಾರಾಂಶ

ರಾಜ್ಯ ನಾಯಕರು ಮುಖ್ಯಮಂತ್ರಿ ಸ್ಥಾನಕ್ಕೆ ಸಂಬಂಧಿಸಿದ ಚರ್ಚೆಯಲ್ಲೇ ಮಗ್ನರಾಗಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವ್ಯಂಗ್ಯವಾಡಿದರು.

ಗದಗ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಳೆದ 40 ದಿನಗಳಿಂದ ಸಾರ್ವಜನಿಕವಾಗಿ ಕಾಣಿಸಿಕೊಳ್ಳದೇ ಕಾಣೆಯಾಗಿದ್ದರಿಂದಲೇ ರಾಜ್ಯದ ಸಚಿವ ಸಂಪುಟ ವಿಸ್ತರಣೆ ವಿಳಂಬವಾಗಿದೆ. ಆದರೆ, ರಾಜ್ಯ ನಾಯಕರು ಮುಖ್ಯಮಂತ್ರಿ ಸ್ಥಾನಕ್ಕೆ ಸಂಬಂಧಿಸಿದ ಚರ್ಚೆಯಲ್ಲೇ (ಸಿಎಂ, ಡಿಸಿಎಂ) ಮಗ್ನರಾಗಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವ್ಯಂಗ್ಯವಾಡಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಸಮರ್ಪಕ ಮಳೆಯಿಲ್ಲದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ, ಪ್ರಕೃತಿ ವಿಕೋಪ ಉಸ್ತುವಾರಿಯಾಗಿ ನೇಮಕಗೊಂಡಿರುವ ಸಚಿವ ಈಶ್ವರ ಖಂಡ್ರೆ ಇನ್ನೂ ಜಿಲ್ಲೆಗೆ ಭೇಟಿ ನೀಡಿಲ್ಲ. ಜಿಲ್ಲೆಯ ಪರಿಸ್ಥಿತಿಯನ್ನು ಪರಿಶೀಲಿಸುವಲ್ಲಿಯೂ ಸರ್ಕಾರ ವಿಫಲವಾಗಿದೆ. ಜಿಲ್ಲಾಡಳಿತವೂ ಅಗತ್ಯ ಮುನ್ನೆಚ್ಚರಿಕೆ ಹಾಗೂ ಪರಿಹಾರ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.

ವಿಶೇಷ ಮತದಾರರ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಕುರಿತು ರಾಜ್ಯ ಸರ್ಕಾರ ಅನಗತ್ಯ ಗೊಂದಲ ಸೃಷ್ಟಿಸಲು ಪ್ರಯತ್ನಿಸುತ್ತಿದೆ. ಕಷ್ಟದ ಪರಿಸ್ಥಿತಿಯಲ್ಲೂ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ. ಮತದಾರರ ನೋಂದಣಿ ನಮೂನೆಗಳು ಮನೆ ಮನೆಗೆ ತಲುಪುವಂತೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳು ಹೆಚ್ಚಿನ ಗಮನ ಹರಿಸಬೇಕು.

ಶಾಶ್ವತ ನಿವಾಸ ಪ್ರಮಾಣಪತ್ರ ನೀಡುವ ರಾಜ್ಯ ಸರ್ಕಾರದ ಕ್ರಮ ಕಾನೂನು ಬಾಹಿರವಾಗಿದೆ. ನುಸುಳುಕೋರರಿಗೆ ಮತದಾರರ ಗುರುತಿನ ಚೀಟಿ ದೊರಕಿಸುವ ಉದ್ದೇಶದಿಂದಲೇ ಈ ಕ್ರಮ ಕೈಗೊಳ್ಳಲಾಗಿದೆ. ಪ್ರಮಾಣಪತ್ರ ನೀಡಲು ಸರ್ಕಾರ ವಿಧಿಸಿರುವ 11 ಷರತ್ತುಗಳೂ ಸಮಂಜಸವಾಗಿಲ್ಲ ಎಂದು ಜೋಶಿ ಆಕ್ಷೇಪ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಸದ ಬಸವರಾಜ ಬೊಮ್ಮಾಯಿ, ಶಾಸಕ ಸಿ.ಸಿ. ಪಾಟೀಲ, ಮಾಜಿ ಸಚಿವ ಮುರುಗೇಶ್ ನಿರಾಣಿ, ಶಾಸಕ ಡಾ. ಚಂದ್ರು ಲಮಾಣಿ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ ಸೇರಿದಂತೆ ಪಕ್ಷದ ಮುಖಂಡರು ಉಪಸ್ಥಿತರಿದ್ದರು.

ತಿರುಗೇಟು

ಕೆಪಿಸಿಸಿ ಕಾರ್ಯಾಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಬೇಬಿ ಯಡಿಯೂರಪ್ಪ ಎಂದು ಟೀಕಿಸಿರುವ ಕುರಿತು ಪ್ರತಿಕ್ರಿಯಿಸಿದ ಪ್ರಹ್ಲಾದ್ ಜೋಶಿ, ವಿಜಯೇಂದ್ರ ಅವರು ಬೇಬಿ ಯಡಿಯೂರಪ್ಪ ಆಗಿದ್ದರೆ, ರಾಹುಲ್ ಗಾಂಧಿ ಕೂಡ ಬೇಬಿ ಗಾಂಧಿಯೇ ಅಲ್ಲವೇ ? ಎಂದು ಖಾರವಾಗಿಯೇ ಪ್ರಶ್ನಿಸುವ ಮೂಲಕ ತಿರುಗೇಟು ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹದಗೆಟ್ಟ ಭಟ್ಕಳ ಸರ್ಕಾರಿ ಆಸ್ಪತ್ರೆ ರಸ್ತೆ, ಗಿಡ ನೆಟ್ಟು ಪ್ರತಿಭಟನೆ
ಹುಲಿ ಗಣತಿ ಕ್ಯಾಮೆರಾ ಕಳ್ಳನ ಬಂಧನ, ಎರಡು ಕ್ಯಾಮೆರಾ ವಶ