ಗದಗ: ರಾಜ್ಯದಲ್ಲಿನ ಭೀಕರ ಬರಗಾಲದ ಸಂದರ್ಭದಲ್ಲಿ ರೈತರ ಹಿತ ಕಾಪಾಡಬೇಕಾದ ಕಾಂಗ್ರೆಸ್ ಸರ್ಕಾರ ಸಂಪೂರ್ಣವಾಗಿ ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ. ಮುಖ್ಯಮಂತ್ರಿಗಳು ಸಭೆ ಸಮಾರಂಭ ಬಿಟ್ಟು ಬರ ತಾಲೂಕುಗಳ ಕಡೆ ಗಮನಕೊಡಲಿ ಎಂದು ಸಂಸದ ಬಸವರಾಜ ಬೊಮ್ಮಾಯಿ ಒತ್ತಾಯಿಸಿದರು.
ರಾಜ್ಯದ ಶೇ. 50ಕ್ಕೂ ಹೆಚ್ಚು ತಾಲೂಕುಗಳಲ್ಲಿ ಭೀಕರ ಬರಗಾಲವಿದ್ದರೂ, ಸರ್ಕಾರದ ಬಳಿ ಯಾವುದೇ ಆ್ಯಕ್ಷನ್ ಪ್ಲಾನ್ ಇಲ್ಲ. ಪ್ರಸ್ತುತ ರಾಜ್ಯದಲ್ಲಿ ಕೃಷಿ ಇಲಾಖೆಯೂ ಇಲ್ಲ, ಕೃಷಿ ಸಚಿವರೂ ಇಲ್ಲದಂತಾಗಿದೆ. ಮುಂಗಾರು ವಿಫಲವಾದಾಗ ಪರ್ಯಾಯ ಬೆಳೆ ಯೋಜನೆ ರೂಪಿಸಬೇಕಿತ್ತು. ಆದರೆ, ರೈತರಿಗೆ ಇಲಾಖೆಯಿಂದ ಯಾವುದೇ ಸಲಹೆ ಅಥವಾ ಮಾರ್ಗದರ್ಶನ ಸಿಗುತ್ತಿಲ್ಲ. ರೈತರು ಬೀಜ, ಗೊಬ್ಬರಕ್ಕೆ ಬಂಡವಾಳ ಹಾಕಿ ಈಗ ತೀವ್ರ ಹತಾಶರಾಗಿದ್ದಾರೆ.
ಗದಗ ಜಿಲ್ಲಾದ್ಯಂತ ಭೀಕರ ಬರಗಾಲ ಆವರಿಸಿದ್ದು, ಯಾವುದೇ ತಾಲೂಕಿನಲ್ಲೂ ವಾಡಿಕೆಯಂತೆ ಮಳೆಯಾಗಿಲ್ಲ. ಜಿಲ್ಲೆಯಲ್ಲಿ ಕೇವಲ ಶೇ. 30ರಷ್ಟು ಮಾತ್ರ ಬಿತ್ತನೆಯಾಗಿದ್ದು, ಮುಂಗಾರು ಸಂಪೂರ್ಣವಾಗಿ ವಿಫಲವಾಗಿದೆ. ಜಿಲ್ಲೆಯಲ್ಲಿ ಇಷ್ಟೊಂದು ಗಂಭೀರ ಪರಿಸ್ಥಿತಿ ಇದ್ದರೂ ಜಿಲ್ಲಾಡಳಿತವಾಗಲಿ ಅಥವಾ ರಾಜ್ಯ ಸರ್ಕಾರವಾಗಲಿ ಈ ಕಡೆ ತಿರುಗಿಯೂ ನೋಡಿಲ್ಲ. ಬರಗಾಲದ ಕುರಿತು ಪ್ರಾಥಮಿಕ ವರದಿ ತರಿಸಿಕೊಳ್ಳುವ ಕನಿಷ್ಠ ಕೆಲಸವನ್ನೂ ಸರ್ಕಾರ ಮಾಡಿಲ್ಲ.ನಿಯಮಾವಳಿಗಳ ಪ್ರಕಾರ ಮೊದಲು ಪ್ರಾಥಮಿಕ ವರದಿ ಪಡೆದು, ಅದರ ಆಧಾರದ ಮೇಲೆ ಅಧಿಕಾರಿಗಳನ್ನು ಕಳುಹಿಸಿ ಜಂಟಿ ಸಮೀಕ್ಷೆ ನಡೆಸಬೇಕು. ನಂತರ ಬರಗಾಲ ಪೀಡಿತ ಪ್ರದೇಶ ಎಂದು ಘೋಷಿಸಿ, ರೈತರಿಗೆ ತಕ್ಷಣ ಪರಿಹಾರ ವಿತರಿಸುವ ಕಾರ್ಯ ಪ್ರಾರಂಭಿಸಬೇಕು. ಕೇಂದ್ರ ಸರ್ಕಾರ ನೀಡಿರುವ ಎನ್‌ಡಿಆರ್‌ಎಫ್ ನಿಧಿ ರಾಜ್ಯ ಸರ್ಕಾರ ಹಾಗೂ ಜಿಲ್ಲಾ ಮಟ್ಟದ ಕೋಶದಲ್ಲಿ ಸಾಕಷ್ಟು ಲಭ್ಯವಿದೆ. ಅದನ್ನು ಕೂಡಲೇ ಬಿಡುಗಡೆ ಮಾಡಿ ರೈತರಿಗೆ ನೆರವಾಗಬೇಕು ಮತ್ತು ಕುಡಿಯುವ ನೀರಿನ ಸಮಸ್ಯೆ ಇರುವ ಕಡೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು.
ಇದೇ ವೇಳೆ ಈಚೆಗೆ ಬೆಳಗಾವಿಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಉಪಮುಖ್ಯಮಂತ್ರಿ ಪರಮೇಶ್ವರ ಅವರು ನಡೆಸಿದ ಪ್ರಗತಿ ಪರಿಶೀಲನಾ ಸಭೆಯನ್ನು ಟೀಕಿಸಿದ ಬೊಮ್ಮಾಯಿ, ಅವರು ಅಲ್ಲಿ ಏನು ಪರಿಶೀಲನೆ ನಡೆಸಿದ್ದಾರೆ? ಗದಗ ಜಿಲ್ಲೆಯ ಬಗ್ಗೆ ಏನು ಹೇಳಿದ್ದಾರೆ? ಬರಗಾಲದಿಂದ ಮಳೆಯಿಲ್ಲದೆ ಕಷ್ಟಪಡುತ್ತಿರುವ ಜಿಲ್ಲೆಗಳ ಸಮಸ್ಯೆಗಳ ಬಗ್ಗೆ ಅಲ್ಲಿ ಯಾವುದೇ ಚರ್ಚೆ ನಡೆದಿಲ್ಲ. ಕೇವಲ ಆರೇಳು ಜಿಲ್ಲೆಗಳನ್ನು ಒಟ್ಟಿಗೆ ಸೇರಿಸಿ ಪ್ರಗತಿ ಪರಿಶೀಲನೆ ಹೆಸರಿನಲ್ಲಿ ಜಾತ್ರೆ ಮಾಡಲಾಗಿದೆಯೇ ಹೊರತು, ವಿಭಾಗ ಮಟ್ಟದಲ್ಲಿ ಸಭೆ ನಡೆಸುವುದರಿಂದ ತಳಮಟ್ಟದ ವಾಸ್ತವ ಸ್ಥಿತಿ ಯಾರಿಗೂ ತಿಳಿಯಲು ಸಾಧ್ಯವಿಲ್ಲ.