ನಗರ ಹೊರ ವಲಯಗಳಿಗೆ ಕಾವೇರಿ ನೀರು ಪೂರೈಕೆಗೆ ಸಂಪುಟ ಅಸ್ತು

KannadaprabhaNewsNetwork |  
Published : Feb 27, 2026, 04:30 AM ISTUpdated : Feb 27, 2026, 08:22 AM IST
Cauvery River

ಸಾರಾಂಶ

ನಗರದ ಹೊರವಲಯದ ಉಪ ನಗರಗಳು ಮತ್ತು ಇತರ ಪ್ರದೇಶಗಳಿಗೆ ಕಾವೇರಿ ನೀರು ಪೂರೈಕೆಗಾಗಿ ಜಲಮಂಡಳಿ ರೂಪಿಸಿರುವ ಕಾವೇರಿ 6ನೇ ಹಂತದ ಯೋಜನೆ ಅನುಷ್ಠಾನಕ್ಕೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.

 ಬೆಂಗಳೂರು :  ನಗರದ ಹೊರವಲಯದ ಉಪ ನಗರಗಳು ಮತ್ತು ಇತರ ಪ್ರದೇಶಗಳಿಗೆ ಕಾವೇರಿ ನೀರು ಪೂರೈಕೆಗಾಗಿ ಜಲಮಂಡಳಿ ರೂಪಿಸಿರುವ ಕಾವೇರಿ 6ನೇ ಹಂತದ ಯೋಜನೆ ಅನುಷ್ಠಾನಕ್ಕೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.

ಕಾವೇರಿ 6ನೇ ಹಂತದ ಯೋಜನೆ

ಕಾವೇರಿ 6ನೇ ಹಂತದ ಯೋಜನೆ ಅಡಿಯಲ್ಲಿ ಹಂಚಿಕೆಯಾಗಿರುವ 500 ಎಂಎಲ್‌ಡಿ (6 ಟಿಎಂಸಿ) ನೀರಿನಲ್ಲಿ ನಾಲ್ಕು ಟಿಎಂಸಿಯನ್ನು ನಾಡಪ್ರಭು ಕೆಂಪೇಗೌಡ ಬಡಾವಣೆ, ಶಿವರಾಮ ಕಾರಂತ ಬಡಾವಣೆ ಸೇರಿದಂತೆ ಮತ್ತಿತರ ಪ್ರಮುಖ ಬಡಾವಣೆಗಳಿಗೆ ಹಾಗೂ 2 ಟಿಎಂಸಿಯನ್ನು ಕರ್ನಾಟಕ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಬೇಡಿಕೆಗನುಗುಣವಾಗಿ ದೇವನಹಳ್ಳಿ, ಹೊಸಕೋಟೆ, ಹುಣಸಮಾರನಹಳ್ಳಿ, ಮಾದನಾಯಕನಹಳ್ಳಿ, ನೆಲಮಂಗಲ, ಚಿಕ್ಕಬಾಣಾವಾರ, ವಿಜಯಪುರ, ಬಾಶೆಟ್ಟಿಹಳ್ಳಿ ಸೇರಿ ಮತ್ತಿತರ ಪ್ರದೇಶಗಳಿಗೆ ನೀರು ಪೂರೈಸಲಾಗುತ್ತದೆ.

ಯೋಜನೆಗಾಗಿ ₹6,939 ಕೋಟಿ ವೆಚ್ಚವಾಗಲಿದೆ

ಯೋಜನೆಗಾಗಿ ₹6,939 ಕೋಟಿ ವೆಚ್ಚವಾಗಲಿದೆ. ಅದರಲ್ಲಿ ಯೋಜನಾ ವೆಚ್ಚ ₹5,177 ಕೋಟಿ ಹಾಗೂ ಯೋಜನೆಗೆ ಅಗತ್ಯವಿರುವ 130 ಎಕರೆ ಭೂಮಿಯ ಸ್ವಾಧೀನಕ್ಕೆ ₹1,822 ಕೋಟಿ ವ್ಯಯಿಸಲಾಗುತ್ತದೆ. ಯೋಜನೆಗೆ ಅಗತ್ಯವಿರುವ ಹಣವನ್ನು ಜಲಮಂಡಳಿಯು ವಿಶ್ವ ಬ್ಯಾಂಕ್‌, ಜೈಕಾ, ಹುಡ್ಕೋ ಸೇರಿ ಇನ್ನಿತರ ಹಣಕಾಸು ಸಂಸ್ಥೆಗಳಿಂದ ಪಡೆಯಲಿದೆ.

ಕಾವೇರಿ 6ನೇ ಹಂತಕ್ಕಾಗಿ ಕೆಆರ್‌ಎಸ್‌ ಜಲಾಶಯದಿಂದ 2 ಕಿ.ಮೀ. ದೂರದಲ್ಲಿರುವ ಕಟ್ಟೇರಿ ಗ್ರಾಮದಲ್ಲಿನ ನೀರು ಸಂಸ್ಕರಣಾ ಘಟಕದಲ್ಲಿ ಶೇಖರಣಾ ಜಲಾಶಯ ನಿರ್ಮಿಸಿ ಅಲ್ಲಿಂದ ನೀರನ್ನು ಪಂಪ್‌ ಮಾಡಲಾಗುತ್ತದೆ. ಬಳಿಕ ಗುರುತ್ವಾಕರ್ಷಣಾ ಬಲದಿಂದ 82 ಕಿ.ಮೀ. ದೂರದಲ್ಲಿರುವ ರಾಮನಗರ ಬಳಿಯ ದೇವರ ಹೊಸಹಳ್ಳಿಯಲ್ಲಿ ನಿರ್ಮಿಸುವ ಶೇಖರಣಾ ಜಲಾಶಯಕ್ಕೆ ನೀರನ್ನು ಹರಿಸಲಾಗುತ್ತದೆ. ಅಲ್ಲಿಂದ ಪಂಪಿಂಗ್‌ ಮೂಲಕ 43 ಕಿ.ಮೀ. ದೂರದ ಕೆಂಗೇರಿ ಬಳಿಯ ನೈಸ್‌ ರಸ್ತೆ ಜಂಕ್ಷನ್‌ನಲ್ಲಿ ನಿರ್ಮಿಸುವ 3ನೇ ಶೇಖರಣಾ ಜಲಾಶಯಕ್ಕೆ ತುಂಬಿಸಿ, ನಂತರ 32 ಕಿ.ಮೀ. ಉದ್ದದ ಕೊಳವೆ ಅಳವಡಿಸಿ ಜಿಕೆವಿಕೆಯಲ್ಲಿ ನಿರ್ಮಿಸುವ ಶೇಖರಣಾ ಜಲಾಶಯಕ್ಕೆ ನೀರು ಪೂರೈಕೆ ಮಾಡಲಾಗುತ್ತದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

‘ಅಭಿಮಾನೋತ್ಸವ : ಬಿಎಸ್‌ವೈ ಕೊಡುಗೆಗಳ ‘ಸ್ತಬ್ಧಚಿತ್ರ’
ಹಕ್ಕಿಜ್ವರದಿಂದ ತುಮಕೂರಲ್ಲಿ ಮತ್ತೆ 12 ನವಿಲು ಸಾವು : ಹೆಚ್ಚಿದ ಆತಂಕ