- ಬೈರಮಂಗಲ ಕೆರೆ ದಡದಲ್ಲಿ ಜಲಮಂಡಳಿಯಿಂದ ಸ್ಥಾಪನೆಕನ್ನಡಪ್ರಭ ವಾರ್ತೆ ಬೆಂಗಳೂರು
ಬೆಂಗಳೂರು ಜಲಮಂಡಳಿ ವತಿಯಿಂದ ಬೈರಮಂಗಲ ಕೆರೆಯ ದಡದಲ್ಲಿ 100 ದಶಲಕ್ಷ ಲೀಟರ್ ಸಾಮರ್ಥ್ಯದ ದ್ವಿತೀಯ ಹಂತದ ಶುದ್ಧೀಕರಣ ಹಾಗೂ 25 ದಶಲಕ್ಷ ಲೀಟರ್ ಸಾಮರ್ಥ್ಯದ ತೃತೀಯ ಹಂತದ ತ್ಯಾಜ್ಯ ನೀರು ಶುದ್ಧೀಕರಣ ಘಟಕ ಸ್ಥಾಪನೆಗೆ ಸಂಪುಟ ಅನುಮೋದನೆ ನೀಡಿದೆ.ಇದೇ ವೇಳೆ ಗೇಲ್ ಇಂಡಿಯಾ ಸಂಸ್ಥೆಯಿಂದ ಬಿಬಿಎಂಪಿಯ 300 ಮೆಟ್ರಿಕ್ ಟನ್ ಹಸಿ ತ್ಯಾಜ್ಯ ಉಪಯೋಗಿಸಿಕೊಂಡು ಹರಳಗುಂಟೆ ಬಳಿ ಬಯೋ ಗ್ಯಾಸ್ ಘಟಕ ಸ್ಥಾಪಿಸಲು ಜಾಗ ಒದಗಿಸಲು ತೀರ್ಮಾನಿಸಲಾಗಿದೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಎಚ್.ಕೆ. ಪಾಟೀಲ ಅವರು, ಬೆಂಗಳೂರು ಜಲಮಂಡಳಿಯಿಂದ ತ್ಯಾಜ್ಯ ನೀರು ಶುದ್ಧೀಕರಣ ಘಟಕ ಕಾಮಗಾರಿ ಹಾಗೂ 7 ವರ್ಷಗಳ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ₹391.82 ಕೋಟಿ ವೆಚ್ಚದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಿರುವುದಾಗಿ ತಿಳಿಸಿದರು.ಗೇಲ್ ಇಂಡಿಯಾ ಲಿಮಿಟೆಡ್ ಸಂಸ್ಥೆ ವತಿಯಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ನಿತ್ಯ ಉತ್ಪತ್ತಿಯಾಗುವ ಘನತ್ಯಾಜ್ಯದ ಪೈಕಿ 300 ಟನ್ ಹಸಿ ತ್ಯಾಜ್ಯ ಉಪಯೋಗಿಸಿಕೊಂಡು ಕಂಪ್ರೆಸ್ಡ್ ಬಯೋ ಗ್ಯಾಸ್ ಘಟಕ ಸ್ಥಾಪಿಸಲು ಹರಳಗುಂಟೆ ಗ್ರಾಮದಲ್ಲಿ 25 ವರ್ಷದ ಗುತ್ತಿಗೆ ಅವಧಿಗೆ 18 ಎಕರ ಎಜಮೀನು ನೀಡಲು ಸಂಪುಟ ಒಪ್ಪಿಗೆ ನೀಡಿದೆ ಎಂದರು.
ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲಿ 1000 ಹಾಸಿಗೆ ಸಾಮರ್ಥ್ಯದ ಹೆಚ್ಚುವರಿ ವಾರ್ಡ್‌ಗಳಿಗೆ ಅವಶ್ಯವಿರುವ ಉಪಕರಣಗಳು, ಪೀಠೋಪಕರಣಗಳಿಗೆ ₹20.05 ಕೋಟಿ, ಬೆಂಗಳೂರಿನ ಯಲಹಂಕ ಬೆಳ್ಳಹಳ್ಳಿಯಲ್ಲಿ ಮತ್ತು ತಾಲೂಕು, ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಪಶುಸಂಗೋಪನೆ ಮತ್ತು ಕೃಷಿ ಇಲಾಖೆ ಆವರಣದಲ್ಲಿ ತಲಾ ₹50 ಕೋಟಿ ಅಂದಾಜು ಮೊತ್ತದಲ್ಲಿ ಪ್ರತ್ಯೇಕವಾಗಿ 100 ಹಾಸಿಗೆಗಳ ಸಾಮರ್ಥ್ಯದ 2 ಅತ್ಯಾಧುನಿಕ ಮತ್ತು ಸುಸಜ್ಜಿತ ಆಸ್ಪತ್ರೆಗಳ ಕಟ್ಟಡಗಳನ್ನು ನಿರ್ಮಿಸಲು ಸಂಪುಟ ಒಪ್ಪಿಗೆ ನೀಡಿದೆ ಎಂದು ತಿಳಿಸಿದರು.ನಿರಾಶ್ರಿತರ ಪರಿಹಾರ ಕೇಂದ್ರ
ವ್ಯಾಪ್ತಿಯಲ್ಲಿ ವಾಲ್ಮೀಕಿ ಸೌಧನಗರದ ಮಾಗಡಿ ಮುಖ್ಯರಸ್ತೆಯಲ್ಲಿರುವ ನಿರಾಶ್ರಿತರ ಪರಿಹಾರ ಕೇಂದ್ರದ ವ್ಯಾಪ್ತಿಯಲ್ಲಿ ಸುಮಾರು ಎರಡು ಎಕರೆಯಲ್ಲಿ ಮಹರ್ಷಿ ವಾಲ್ಮೀಕಿ ಸೌಧ ಸ್ಥಾಪಿಸಲು ಸಂಪುಟದಲ್ಲಿ ಒಪ್ಪಿಗೆ ನೀಡಲಾಗಿದೆ. ನಿರಾಶ್ರಿತರ ಪರಿಹಾರ ಕೇಂದ್ರದ ಸಜ್ಜೆಪಾಳ್ಯ ಗ್ರಾಮದಲ್ಲಿರುವ ಸರ್ವೇ ನಂಬರ್ 4ರಲ್ಲಿ ಲಭ್ಯವಿರುವ ಜಮೀನಿನಲ್ಲಿ ಎರಡು ಎಕರೆ ಜಮೀನನ್ನು ಪರಿಶಿಷ್ಟ ಪಂಗಡಗಳ ನಿರ್ದೇಶನಾಲಯ ಮತ್ತು ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಕಚೇರಿಗಾಗಿ ಮಹರ್ಷಿ ವಾಲ್ಮೀಕಿ ಸೌಧ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ.