ಕನ್ನಡಪ್ರಭ ವಾರ್ತೆ ಇಂಡಿ
ಜನಪದದಲ್ಲಿ ಸಂಸ್ಕೃತಿ, ಸಂಸ್ಕಾರ, ಜೀವನದ ಮೌಲ್ಯಗಳು ಅಡಗಿದೆ ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ. ಜಾನಪದ ಎಸ್. ಬಾಲಾಜಿ ಹೇಳಿದರು.ನಗರದ ಶಾಂತೇಶ್ವರ ಮಂಗಲ ಕಾರ್ಯಾಲಯದಲ್ಲಿ ಜಾನಪದ ಪರಿಷತ್ ವತಿಯಿಂದ ನಡೆದ ಕನ್ನಡ ಜಾನಪದ ಪರಿಷತ್ ಮಹಿಳಾ ಘಟಕವನ್ನು ಸಂಬಾಳ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಕೃಷಿ ಸಂಸ್ಕೃತಿಯಿಂದ ಜಾನಪದ ಉಗಮವಾದರೇ ಅದನ್ನು ಇಂದಿಗೂ ಉಳಿಸಿ, ಬೆಳೆಸುತ್ತಿರುವುದು ಹೆಣ್ಮಕ್ಕಳು. ದಶಮಾನೋತ್ಸವದ ಸಂದರ್ಭದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ತಾಲೂಕುಗಳಲ್ಲಿ ಮಹಿಳಾ ಘಟಕಗಳನ್ನು ಪ್ರಾರಂಭಿಸಿ ಮಹಿಳಾ ಜಾನಪದ ಸಬಲೀಕರಣವನ್ನು ಮಾಡಲಾಗುತ್ತದೆ ಎಂದರು.ಶಾಲಾ ಕಾಲೇಜು ಪಠ್ಯ ಪುಸ್ತಕದ ಹೆಚ್ಚಾಗಿ ಜನಪದ ಪದ್ಯ ಗದ್ಯಗಳನ್ನು ಅಳವಡಿಸಬೇಕು. ವಿಶ್ವವಿದ್ಯಾಲಯಗಳನ್ನು ಜಾನಪದ ಅಧ್ಯಯನ ಪೀಠಗಳು ಸ್ಥಾಪನೆ ಆಗಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ತಾಲೂಕು ಕನ್ನಡ ಜಾನಪದ ಪರಿಷತ್ ಅಧ್ಯಕ್ಷರ ಪಂಡಿತ ಅವಜಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂಡಿ ತಾಲೂಕಿನ ಮೂಲ ಕಲೆ ಮತ್ತು ಕಲಾವಿದರು ಸಂರಕ್ಷಣೆಗೋಸ್ಕರ ಜಾನಪದ ಪರಿಷತ್ ತಾಲೂಕು ಘಟಕ ಕಾರ್ಯ ನಿರ್ವಹಿಸುತ್ತಿದ್ದು, ನಾಳೆ ಬಂಥನಾಳ ನಾಡಲ್ಲಿ ಬೃಹತ್ ಜಾನಪದ ಸಮ್ಮೇಳನವನ್ನು ಏರ್ಪಡಿಸಲಾಗುತ್ತದೆ ಎಂದು ತಿಳಿಸಿದರು. ಆದೇಶಪತ್ರ ಪ್ರಧಾನ ಮಾಡಿ ಮಾತನಾಡಿದ ಕನ್ನಡ ಜಾನಪದ ಪರಿಷತ್ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ದಾಕ್ಷಾಯಿಣಿ ಬಿರಾದಾರ, ಇಂಡಿಯಲ್ಲಿ ಜಿಲ್ಲಾ ಮಹಿಳಾ ಸಮ್ಮೇಳನ ಏರ್ಪಡಿಸಲಾಗುವುದು. ವಿಜಯಪುರ ಜಿಲ್ಲೆಯ ಎಲ್ಲ ಗ್ರಾಮಗಳಲ್ಲೂ ಕನ್ನಡ ಜಾನಪದ ಪರಿಷತ್ ಗ್ರಾಮ ಘಟಕಗಳನ್ನು ರಚಿಸಲಾಗುವುದು ತಿಳಿಸಿದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಗೀತಾ ಗುತ್ತರಿಗಿಮಠ, ಬಿಸಿಊಟ ಯೋಜನಾಧಿಕಾರಿ ಸುಜಾತ ಪೂಜಾರಿ, ತಾಲೂಕು ಗೌರವಾಧ್ಯಕ್ಷ ಶೈಲಜಾ ತೇಲ್ಲೂರು, ಎಸ್.ಆರ್.ಪಾಟೀಲ್, ದಾನಮ್ಮ ಮಠಪತಿ, ಬಿ.ಸಿ.ಭಗವಂತ ಗೌಡರ್, ಸಾಗರ್ ಮನೆ ಹಾಗೂ ಇತರರು ಉಪಸ್ಥಿತರಿದ್ದರು.
ನಗರದ ಕೆಜಿಎಸ್ ಶಾಲೆಯ ಮಕ್ಕಳು ಜೋಗಿತಿ ನೃತ್ಯ ಹಾಗೂ ಲಂಬಾಣಿ ನೃತ್ಯಗಳನ್ನು ಪ್ರದರ್ಶಿಸಿದರು.