ಶಿಕಾರಿಪುರ: ನಿತ್ಯ ಬೆವರಿನ ಸ್ನಾನ ಮಾಡುವ ಶ್ರಮಿಕ ವರ್ಗದಿಂದ ಮಾತ್ರ ಇತಿಹಾಸ ಪುರುಷರ ಜನನವಾಗಲಿದೆ ಎಂದು ಮಹಾನ್ ಮಾನವತಾವಾದಿ ಡಾ.ಬಿ.ಆರ್.ಅಂಬೇಡ್ಕರ್ ಬಲವಾಗಿ ಪ್ರತಿಪಾದಿಸಿದ್ದು, ಈ ದಿಸೆಯಲ್ಲಿ ಅವಲಂಭಿಸಿದ ಉದ್ಯೋಗದಲ್ಲಿನ ಪರಿಶ್ರಮದಿಂದ ಬದುಕಿನಲ್ಲಿ ಯಶಸ್ಸು ಶತಸಿದ್ಧ ಎಂದು ಡಿಎಸ್‌ಎಸ್ ರಾಜ್ಯ ಸಂಚಾಲಕ ಗುರುಮೂರ್ತಿ ತಿಳಿಸಿದರು.
ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ನಿತ್ಯೋತ್ಸವ ಸೇವಾ ಟ್ರಸ್ಟ್ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಿ.(ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ತಾ.ಶಾಖೆ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ 135ನೇ ಜನ್ಮ ದಿನಾಚರಣೆ ಹಾಗೂ ಶ್ರೀ ಬಸವೇಶ್ವರ ಜಯಂತಿ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ 7ನೇ ವರ್ಷದ ಸರಳ ಸಾಮೂಹಿಕ ಮಂತ್ರ ಮಾಂಗಲ್ಯ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು,.ಆಡಂಬರದ ಮದುವೆಗಳ ಕಾಲದಲ್ಲಿ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಆಸರೆಯಾಗುವ ನಿಟ್ಟಿನಲ್ಲಿ ಸರಳ ಸಾಮೂಹಿಕ ವಿವಾಹ ಆಯೋಜನೆ ಸಂತೋಷದ ಸಂಗತಿಯಾಗಿದ್ದು,ಪ್ರೊ.ಬಿ.ಕೃಷ್ಣಪ್ಪ ಹಾಕಿಕೊಟ್ಟ ದಾರಿಯಲ್ಲಿ ಸಮಾಜದ ಏಳಿಗೆಗಾಗಿ ಈ ಸೇವಾ ಕಾರ್ಯಗಳು ನಿರಂತರವಾಗಿ ಮುಂದುವರಿಯಲಿ ಎಂದು ಹಾರೈಸಿದರು.
ಅಂಬೇಡ್ಕರ್ ಜಯಂತಿ ಸಹಿತ ದಾಸ ಶ್ರೇಷ್ಠರ ದಿನಾಚರಣೆಗಳು ಕೇವಲ ಆಚರಣೆಯಾಗದೆ,ಅವರ ಸಿದ್ಧಾಂತಗಳನ್ನು ಅಳವಡಿಸಿಕೊಳ್ಳಬೇಕು ಮತ್ತು ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡುವ ಮೂಲಕ ಮೌಢ್ಯಗಳನ್ನು ತೊಡೆದು ಹಾಕಬೇಕು. ಎಂದ ಅವರು ಅಂಬೇಡ್ಕರ್ ಹಾಕಿ ಕೊಟ್ಟ ಆಶಯದಲ್ಲಿ ಇಂದಿಗೂ ಕೆಲ ಜನಾಂಗ ಬದುಕಲಾಗದೆ ಮೌಡ್ಯದಲ್ಲೇ ಬದುಕುತ್ತಿರುವುದು ಬೇಸರದ ಸಂಗತಿಯಾಗಿದೆ ಎಂದರು.ನಿತ್ಯೋತ್ಸವ ಟ್ರಸ್ಟ್ ಅಧ್ಯಕ್ಷ ಜಗದೀಶ್ ಚುರ್ಚುಗುಂಡಿ ಮಾತನಾಡಿ, ಆರ್ಥಿಕ,ಸಾಮಾಜಿಕವಾಗಿ ಹಿಂದುಳಿದವರು ಮೂಢನಂಬಿಕೆಗಳಿಗೆ ಬಲಿಯಾಗಿ ಸಾಲದಿಂದ ಅದ್ದೂರಿಯಾಗಿ ಮದುವೆ ಮಾಡಿಕೊಂಡು ಜೀವನಪರ್ಯಂತ ಸಾಲದಲ್ಲೇ ಬದುಕು ಸಾಗಿಸುತ್ತಿರುವುದು ವಿಪರ್ಯಾಸ ಈ ದಿಸೆಯಲ್ಲಿ ಪ್ರತಿ ವರ್ಷ ಟ್ರಸ್ಟ್ ವತಿಯಿಂದ ಸರಳ ಸಾಮೂಹಿಕ ವಿವಾಹವನ್ನು ಆಚರಿಸುತ್ತಿದ್ದೇವೆ ಎಂದರು.
ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪ ಶಿವಕುಮಾರ್ ಮಾತನಾಡಿ, ಶೋಷಿತರು ಮನುವಾದದ ಸಂಕೋಲೆಯಿಂದ ಹೊರಬಂದಿಲ್ಲ.ಕುವೆಂಪು ಮಂತ್ರಮಾಂಗಲ್ಯ ನೂತನ ವಧು ವರ ತಾಳ್ಮೆ ಮತ್ತು ಸಹನೆಯ ಸಾಂಸಾರಿಕ ಬದುಕಿಗೆ ಪ್ರೇರಣೆಯಾಗಲಿ ಎಂದರು.
ಕೆಪಿಸಿಸಿ ಸದಸ್ಯ ಗೋಣಿ ಮಾಲತೇಶ್ ಮಾತನಾಡಿ, ಡಾ,ಅಂಬೇಡ್ಕರ್ ಸಂವಿಧಾನದಲ್ಲಿ ಮೀಸಲಾತಿ ಮೂಲಕ ಸರ್ಕಾರಿ ಕೆಲಸ ಮಾಡುತ್ತಿರುವವರು ಮೂಢನಂಬಿಕೆಗಳನ್ನು ದೂರ ಮಾಡಬೇಕು ಎಂದರು.
ಜಿಲ್ಲಾ ಕೆಡಿಪಿ ಸದಸ್ಯ ರಾಘವೇಂದ್ರ ನಾಯಕ್ ಮಾತನಾಡಿ, ಹಿಂದುಳಿದ ವರ್ಗದ ಮಕ್ಕಳು ಐಎಎಸ್,ಐಪಿಎಸ್, ಕೆಎಎಸ್ ಅಧಿಕಾರಿಗಳಾಗಬೇಕು,ದುಶ್ಚಟ ತ್ಯಜಿಸಿ ಶಿಕ್ಷಣದ ಕಡೆ ಗಮನಕೊಡಿ ಎಂದು ಕರೆ ನೀಡಿದರು.ನ್ಯಾಯವಾದಿ ನಿಂಗಪ್ಪ,ಮುಖಂಡ ಭಂಡಾರಿ ಮಾಲತೇಶ್, ಈರೇಶ್, ತಿಮ್ಮಣ್ಣ, ಹಾಲಪ್ಪ, ಹನುಮಂತಪ್ಪ, ಅಣ್ಣಪ್ಪ, ಸಮೀರ್ ಶ್ರೀ.ಕ್ಷೇ.ಧ.ಗ್ರಾ ಯೋ. ಯೋಜನಾಧಿಕಾರಿ ನಂಜುಂಡಿ ಸಹಿತ ನಿತ್ಯೋತ್ಸವ ಟ್ರಸ್ಟ್, ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಹಾಜರಿದ್ದರು.