ಜವಳಿ, ಏರೋಸ್ಪೇಸ್‌, ಸ್ಟಾರ್ಟ್‌ಅಪ್‌ ನೀತಿಗೆ ಸಂಪುಟ ಓಕೆ

KannadaprabhaNewsNetwork |  
Published : Sep 10, 2026, 01:30 AM IST
ಜಿ. ಪರಮೇಶ್ವರ್‌ | Kannada Prabha

ಸಾರಾಂಶ

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ನೇತೃತ್ವದ ರಾಜ್ಯ ಸರ್ಕಾರ ನೂರು ದಿನಗಳನ್ನು ಪೂರೈಸುತ್ತಿರುವ ಸಂಭ್ರಮದ ಹಿನ್ನೆಲೆಯಲ್ಲಿ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಜವಳಿ ಮತ್ತು ನೂತನ ಸಿದ್ಧ ಉಡುಪು ನೀತಿ-2026-31, ‘ಕರ್ನಾಟಕ ಏರೋಸ್ಪೇಸ್‌ ನೀತಿ,2026-31’, ‘ಸ್ಟಾರ್ಟ್‌ಅಪ್‌ ನೀತಿ 2025-30’ಕ್ಕೂ ಅನುಮೋದನೆ ನೀಡಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ನೇತೃತ್ವದ ರಾಜ್ಯ ಸರ್ಕಾರ ನೂರು ದಿನಗಳನ್ನು ಪೂರೈಸುತ್ತಿರುವ ಸಂಭ್ರಮದ ಹಿನ್ನೆಲೆಯಲ್ಲಿ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಜವಳಿ ಮತ್ತು ನೂತನ ಸಿದ್ಧ ಉಡುಪು ನೀತಿ-2026-31, ‘ಕರ್ನಾಟಕ ಏರೋಸ್ಪೇಸ್‌ ನೀತಿ,2026-31’, ‘ಸ್ಟಾರ್ಟ್‌ಅಪ್‌ ನೀತಿ 2025-30’ಕ್ಕೂ ಅನುಮೋದನೆ ನೀಡಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌, ‘ಜವಳಿ ಮತ್ತು ನೂತನ ಸಿದ್ಧ ಉಡುಪು ನೀತಿ 2026-31’ ಅಡಿ ರೇಷ್ಮೆ ಉದ್ಯಮವನ್ನೂ ಸೇರಿಸಲಾಗಿದೆ. ಮುಂದಿನ ಐದು ವರ್ಷಗಳಲ್ಲಿ ಸುಮಾರು 20 ಸಾವಿರ ಕೋಟಿ ರು. ಹೂಡಿಕೆ ಆಕರ್ಷಣೆ ಗುರಿ ಇದ್ದು, ಅದಕ್ಕೆ ಪೂರಕವಾಗಿ ಹಾಗೂ ಇಂದಿನ ಅಗತ್ಯಗಳಿಗೆ ಅನುಗುಣವಾಗಿ ನೀತಿ ರೂಪಿಸಲಾಗಿದೆ. ಜಿಲ್ಲೆಗೊಂದರಂತೆ 33 ತಾಲೂಕುಗಳನ್ನು ಆಯ್ಕೆ ಮಾಡಿ, ಅಲ್ಲಿ ಹೂಡಿಕೆ ಆಕರ್ಷಿಸಲಾಗುವುದು. ಹೂಡಿಕೆದಾರರಿಗೆ ಶೇ.5ರಷ್ಟು ಬಂಡವಾಳ ಸಬ್ಸಿಡಿ, ಪ್ರತಿ ಯುನಿಟ್‌ಗೆ 2 ರು. ವಿದ್ಯುತ್‌ ಸಬ್ಸಿಡಿ ನೀಡಲಾಗುವುದು. ಮುಂದಿನ ಐದು ವರ್ಷಗಳಲ್ಲಿ ಸರ್ಕಾರದಿಂದಲೂ ನಾಲ್ಕು ಸಾವಿರ ಕೋಟಿ ರು. ಹೂಡಿಕೆ ಮಾಡಲಾಗುವುದು ಎಂದು ಡಾ.ಪರಮೇಶ್ವರ್‌ ಹೇಳಿದರು.

ಹೊಸ ತಂತ್ರಜ್ಞಾನ ಸರ್ಕಾರದಿಂದಲೇ ಬಳಕೆ: ಇನ್ನು ‘ಸ್ಟಾರ್ಟ್‌ಅಪ್‌ ನೀತಿ 2025-30’ಕ್ಕೆ ಸಂಪುಟದಲ್ಲಿ ಅನುಮೋದನೆ ನೀಡಲಾಗಿದೆ. ಮಾರುಕಟ್ಟೆಗೆ ಬರುವ ಯಾವುದೇ ಹೊಸ ತಂತ್ರಜ್ಞಾನವನ್ನು ಮೊದಲು ಸರ್ಕಾರ ಅಳವಡಿಸಿಕೊಳ್ಳುವುದು ಇದರ ಉದ್ದೇಶ. ಸಾಮಾನ್ಯವಾಗಿ ಹೊಸ ತಂತ್ರಜ್ಞಾನ ಮಾರುಕಟ್ಟೆಗೆ ಬಂದ ತಕ್ಷಣ ಖಾಸಗಿಯವರು ಅಳವಡಿಸಿಕೊಳ್ಳುತ್ತಾರೆ. ಅದು ಸರ್ಕಾರ ಮಟ್ಟಕ್ಕೆ ಬರುವಷ್ಟರಲ್ಲಿ ಹಳೆಯದಾಗಿ ಬಿಟ್ಟಿರುತ್ತದೆ. ಆದ್ದರಿಂದ ಈ ಕ್ರಮಕ್ಕೆ ಮುಂದಾಗಿದ್ದೇವೆ ಎಂದರು.

60 ಸಾವಿರ ಹೂಡಿಕೆ ಗುರಿಯ ಏರೋಸ್ಪೇಸ್‌ ನೀತಿ:

ಏರೋಸ್ಪೇಸ್‌, ನಾವೀನ್ಯತೆ ಸೇರಿ ಇನ್ನೂ ಹಲವು ಕ್ಷೇತ್ರಗಳಲ್ಲಿ ಕರ್ನಾಟಕವನ್ನು ಮುಂಚೂಣಿ ರಾಜ್ಯವಾಗಿಸುವ ನಿಟ್ಟಿನಲ್ಲಿ ರೂಪಿಸಿರುವ ‘ಕರ್ನಾಟಕ ಏರೋಸ್ಪೇಸ್‌ ನೀತಿ 2026-31’ಕ್ಕೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಮುಂದಿನ ಐದು ವರ್ಷಗಳಲ್ಲಿ ಏರೋಸ್ಪೇಸ್‌ ಕ್ಷೇತ್ರದಲ್ಲಿ ಸರ್ಕಾರ ಹಾಗೂ ಖಾಸಗಿಯವರಿಂದ 60 ಸಾವಿರ ಕೋಟಿ ರು. ಬಂಡವಾಳ ಹೂಡಿಕೆ ಮತ್ತು 60 ಸಾವಿರ ಉದ್ಯೋಗ ಸೃಷ್ಟಿ ಗುರಿ ಹೊಂದಲಾಗಿದೆ. ಈ ಹೊಸ ನೀತಿಯಲ್ಲಿ ಆದ್ಯತೆಯ ವಲಯಗಳಲ್ಲಿ ಹೂಡಿಕೆದಾರರಿಗೆ ವಲಯವಾರು ಶೇ.25ರಿಂದ 30ರವರೆಗೆ ಬಂಡವಾಳ ಸಬ್ಸಿಡಿ ನೀಡಲಾಗುವುದು. ಆದ್ಯತೆಯೇತರ ವಲಯಗಳಲ್ಲಿ ಹೂಡಿಕೆದಾರರಿಗೆ 7ರಿಂದ 10 ವರ್ಷಗಳ ಸಬ್ಸಿಡಿ ಪ್ರಮಾಣ ಶೇ. 2.25ರಿಂದ ಶೇ.25ಕ್ಕೆ ಹೆಚ್ಚಿಸಲು ಅವಕಾಶ ನೀಡಲಾಗಿದೆ. ಅಲ್ಲದೆ, ಹಿಂದುಳಿದ ಮತ್ತು ಅತಿ ಹಿಂದುಳಿದ ಪ್ರದೇಶಗಳಲ್ಲಿ ರಕ್ಷಣಾ, ವೈಮಾನಿಕ, ಬಾಹ್ಯಾಕಾಶ ತಂತ್ರಜ್ಞಾನ, ಸೆಮಿಕಂಡಕ್ಟರ್‌, ಡ್ರೋನ್‌ ಉತ್ಪಾದನೆ, ಎಲೆಕ್ಟ್ರಾನಿಕ್ಸ್‌, ಔಷಧ, ಜೈವಿಕ ತಂತ್ರಜ್ಞಾನ, ಸೇರಿ ವಿವಿಧ ಕ್ಷೇತ್ರಗಳಲ್ಲಿ ಬಂಡವಾಳ ಹೂಡುವವರಿಗೆ ಕ್ರಮವಾಗಿ ಶೇ.10 ಮತ್ತು 20ರಷ್ಟು ಹೆಚ್ಚುವರಿ ಪ್ರೋತ್ಸಾಹಧನ ನೀಡಲು ಸಂಪುಟ ಸಮ್ಮತಿಸಿದೆ.ಚಿಕ್ಕಬಳ್ಳಾಪುರದಲ್ಲಿ ದೇಶದ ಮೊದಲ ಡ್ರೋನ್‌ ಪರೀಕ್ಷಾ ಸೌಲಭ್ಯ ಕೇಂದ್ರ:

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ದೇಶದ ಮೊದಲ ಡ್ರೋನ್‌ ಪರೀಕ್ಷಾ ಸೌಲಭ್ಯ ಕೇಂದ್ರ ಆರಂಭಿಸಲು ತೀರ್ಮಾನಿಸಲಾಗಿದೆ ಎಂದು ಡಿಸಿಎಂ ಡಾ.ಜಿ.ಪರಮೇಶ್ವರ್‌ ಹೇಳಿದರು. ಸಂಪುಟ ಸಭೆ ಬಳಿಕ ಮಾತನಾಡಿದ ಅವರು, ಪ್ರಸ್ತುತ ನಾನಾ ಪ್ರಕಾರದ ಡ್ರೋನ್‌ಗಳು ಮಾರುಕಟ್ಟೆಗೆ ಬರುತ್ತಿವೆ. ಔಷಧ ಸಾಗಣೆಗೂ ಡ್ರೋನ್‌ ಬಳಕೆ ಮಾಡಲಾಗುತ್ತಿದೆ. ಮುಂದುವರಿದು ಬೇರೆ ಬೇರೆ ದೇಶಗಳಲ್ಲಿ ಮನುಷ್ಯರನ್ನೂ ಒಂದು ಕಡೆಯಿಂದ ಮತ್ತೊಂದು ಕಡೆಗೆ ಕರೆದೊಯ್ಯಲು ಡ್ರೋನ್‌ಗಳ ಪ್ರಯೋಗ ನಡೆದಿದೆ. ಮುಂದೆ ರಕ್ಷಣಾ ವಲಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಡ್ರೋನ್‌ ಬಳಕೆ ಹೆಚ್ಚಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಇವುಗಳ ಸಾಮರ್ಥ್ಯ ಪರೀಕ್ಷೆಗಾಗಿ ಪ್ರಯೋಗಾಲಯ ಅಸ್ತಿತ್ವಕ್ಕೆ ಬರುತ್ತಿದೆ ಎಂದು ಹೇಳಿದರು.

ತುಮಕೂರಿನಲ್ಲಿ ಈ ಲ್ಯಾಬ್‌ ನಿರ್ಮಿಸಬೇಕು ಎಂದು ಮನವಿ ಮಾಡಿದ್ದೆವು. ಆದರೆ, ಅಲ್ಲಿ ಜಾಗದ ಅಲಭ್ಯತೆ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರದಲ್ಲಿ ಸ್ಥಾಪಿಸಲು ಸಂಪುಟ ಅನುಮೋದನೆ ನೀಡಿದೆ ಎಂದು ತಿಳಿಸಿದರು.ಸುಮಾರು 19.26 ಎಕರೆ ಸರ್ಕಾರಿ ಜಮೀನಿನಲ್ಲಿ ಸ್ಥಾಪನೆಯಾಗಲಿರುವ ಈ ಕೇಂದ್ರಕ್ಕೆ ರಾಜ್ಯ ಸರ್ಕಾರವು ಒಟ್ಟು ₹42.83 ಕೋಟಿ ನೆರವು ನೀಡಲಿದೆ. ಇದರಲ್ಲಿ ₹38.15 ಕೋಟಿ ಮೂಲಸೌಕರ್ಯ ನಿರ್ಮಾಣಕ್ಕೆ ಹಾಗೂ ಆರಂಭಿಕ ಮೂರು ವರ್ಷಗಳ ಕಾರ್ಯಾಚರಣೆಗೆ ₹4.68 ಕೋಟಿ ವೆಚ್ಚವಾಗಲಿದೆ ಎಂದು ಪರಮೇಶ್ವರ್‌ ಮಾಹಿತಿ ನೀಡಿದರು.ಕೈಗಾರಿಕಾ ಉತ್ತೇಜನಕ್ಕೆ ಡಿಕೆಶಿ 2 ಯೋಜನೆ:

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ನೇತೃತ್ವದ ರಾಜ್ಯ ಸರ್ಕಾರ ನೂರು ದಿನಗಳನ್ನು ಪೂರೈಸುತ್ತಿರುವ ಸಂಭ್ರಮದ ಹಿನ್ನೆಲೆಯಲ್ಲಿ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಶ್ರಮಿಕರಿಗಾಗಿ ವಿಶೇಷ ಯೋಜನೆಗಳ ಅನುಷ್ಠಾನಕ್ಕೆ ಮುಂದಾಗಿದೆ. ಕಾರ್ಮಿಕರು, ನೌಕರರಿಗೆ ಕೈಗಾರಿಕೆಗಳ ಸಮೀಪವೇ ವಾಸ ಮಾಡಲು ಶ್ರಮಿಕ್‌ ನಿವಾಸ್‌ ಹಾಗೂ ಕೈಗಾರಿಕೆಗಳಲ್ಲಿ ಹೆಚ್ಚು ಉದ್ಯೋಗ ಸೃಷ್ಟಿಗಾಗಿ ಉದ್ಯೋಗ ನಿಧಿ ಯೋಜನೆಗೆ ಅನುಮೋದನೆ ನೀಡಲಾಗಿದೆ.ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಡಿಸಿಎಂ ಡಾ.ಜಿ.ಪರಮೇಶ್ವರ್‌ ಅವರು, ತಮ್ಮ ಕಾರ್ಮಿಕರು ಅಥವಾ ನೌಕರರು ಕೈಗಾರಿಕೆಗಳ ಸಮೀಪವೇ ವಾಸ ಮಾಡಲು ಮನೆಗಳನ್ನು ಕಟ್ಟಿಕೊಡಲು ಉದ್ಯಮಿಗಳು ಮುಂದೆ ಬಂದರೆ ಅಂತಹವರಿಗೆ ಸಬ್ಸಿಡಿ ದರದಲ್ಲಿ ಭೂಮಿ ನೀಡಲು ‘ಶ್ರಮಿಕ್‌ ನಿವಾಸ್‌’ ಎಂಬ ಹೊಸ ಯೋಜನೆ ರೂಪಿಸಲಾಗಿದೆ. ಐಟಿಬಿಟಿ, ಉತ್ಪಾದನಾ ವಲಯ ಸೇರಿ ಎಲ್ಲ ದೊಡ್ಡ ಮಟ್ಟದ ಕೈಗಾರಿಕೆಗಳಿಗೆ ಇದು ಅನ್ವಯ. ಯೋಜನೆಯಡಿ ಒಟ್ಟು 10 ಸಾವಿರ ಮನೆಗಳನ್ನು ನಿರ್ಮಾಣಕ್ಕೆ ಪ್ರೋತ್ಸಾಹ ನೀಡಲು ಸಂಪುಟ ಒಪ್ಪಿದೆ. ಈ ಮನೆಗಳಿಗೆ ಎಷ್ಟು ವಿಸ್ತೀರ್ಣದ ನಿವೇಶನಗಳಿರಬೇಕು, ಸಬ್ಸಿಡಿ ದರ ಎಷ್ಟು, ಯೋಜನೆಗೆ ಎಷ್ಟು ಕಾರ್ಮಿಕರಿರುವ ಕೈಗಾರಿಕೆ ಅರ್ಹ ಈ ಎಲ್ಲವನ್ನೂ ಮುಂದಿನ ದಿನಗಳಲ್ಲಿ ಸಂಬಂಧಿಸಿದ ಇಲಾಖೆಯಿಂದ ಮಾನದಂಡಗಳನ್ನು ರೂಪಿಸಲಾಗುತ್ತದೆ ಎಂದು ತಿಳಿಸಿದರು. ಪ್ರತಿ ಹೊಸ ಉದ್ಯೋಗಕ್ಕೆ ಪ್ರೋತ್ಸಾಹಧನ:ಕೈಗಾರಿಕೆಗಳಲ್ಲಿ ಹೆಚ್ಚು ಉದ್ಯೋಗ ಸೃಷ್ಟಿಗಾಗಿ ಉದ್ಯೋಗ ನಿಧಿ ಯೋಜನೆ ರೂಪಿಸಲಾಗಿದೆ. ಹಾಲಿ ಹಾಗೂ ಹೊಸ ಕೈಗಾರಿಕೆಗಳು ಹೊಸದಾಗಿ ಸೃಷ್ಟಿಸುವ ಪ್ರತಿಯೊಂದು ಉದ್ಯೋಗಕ್ಕೂ ಮುಂದಿನ ಎರಡು ವರ್ಷ ಮಾಸಿಕ 2500 ರು. ಪ್ರೋತ್ಸಾಹಧನ ನೀಡಲು 300 ಕೋಟಿ ರು. ವೆಚ್ಚ ಮಾಡಲು ಸಂಪುಟ ಒಪ್ಪಿಗೆ ನೀಡಿದೆ. ಪ್ರೊ.ಎಂ.ಗೋವಿಂದರಾಜ್‌ ವರದಿ ಆಧರಿಸಿ, ಹಿಂದುಳಿದ 10 ಜಿಲ್ಲೆಗಳಲ್ಲಿ ಕೈಗಾರಿಕೆಗಳು ಸೃಷ್ಟಿ ಮಾಡುವ ಪ್ರತಿ ಉದ್ಯೋಗಕ್ಕೆ ಮಾಸಿಕ 2500 ಪ್ರೋತ್ಸಾಹ ಧನ ನೀಡಲಾಗುವುದು ಎಂದು ಮಾಹಿತಿ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬುದ್ಧ ಮನುಕುಲಕ್ಕೆ ನೀಡಿದ ಸಂದೇಶ ಕರುಣೆ-ಅಹಿಂಸೆ: ಡಾ. ಬೂವನಹಳ್ಳಿ ನಾಗರಾಜು
ಸೋಲೂರು ಹೋಬಳಿಯ ಸಮಗ್ರ ಅಭಿವೃದ್ದಿ: ಶಾಸಕ ಶ್ರೀನಿವಾಸ್‌