
ವಿಘ್ನೇಶ್ ಎಂ. ಭೂತನಕಾಡು ಮಡಿಕೇರಿ: ಅಪಾರ ಕಾನೂನು ಜ್ಞಾನದ ಮೂಲಕ ಗಮನ ಸೆಳೆದಿರುವ ರಾಜ್ಯದ ಪ್ರಭಾವಿ ಶಾಸಕ ಎ.ಎಸ್. ಪೊನ್ನಣ್ಣ ಅವರನ್ನು ಇದೀಗ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾಗಿ ನೇಮಿಸಿ ಕಾಂಗ್ರೆಸ್ ಪಕ್ಷ ಮಹತ್ವದ ಸ್ಥಾನ ನೀಡಿದೆ.
ಇತ್ತೀಚೆಗಷ್ಟೇ 19 ಮಂದಿ ಹೊಸ ಸಚಿವರನ್ನು ನೇಮಕ ಮಾಡಲಾಗಿತ್ತು. ಆದರೆ ಮಂತ್ರಿ ಸ್ಥಾನದ ನಿರೀಕ್ಷೆಯಲ್ಲಿದ್ದ ಪೊನ್ನಣ್ಣ ಅವರಿಗೆ ವಿಧಾನಸಭೆಯ ಉಪ ಸ್ಪೀಕರ್ ಸ್ಥಾನ ನೀಡುವುದಾಗಿ ಕಾಂಗ್ರೆಸ್ ಸಮಿತಿ ಪ್ರಸ್ತಾಪಿಸಿತ್ತು. ಈ ಬಗ್ಗೆ ಪೊನ್ನಣ್ಣ ಅವರು ಒಲ್ಲದ ಮನಸ್ಸು ಹೊಂದಿದ್ದು ಕೊಡಗಿಗೆ ಸಚಿವ ಸ್ಥಾನ ದೊರಕದಿರುವ ಬಗ್ಗೆ ಅಸಮಾಧಾನ ತೋಡಿಕೊಂಡಿದ್ದರು. ಇದೀಗ ಪಕ್ಷ ಪೊನ್ನಣ್ಣ ಅವರ ಅವಶ್ಯಕತೆ ಹಾಗೂ ನಾಯಕತ್ವವನ್ನು ಗಮನಿಸಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿ ಮಾಡಿ ಸಂಪುಟ ದರ್ಜೆಯ ಸ್ಥಾನ ನೀಡಿದೆ.ಈ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಾನೂನು ಸಲಹೆಗಾರರಾಗಿ ಕೆಲಸ ಮಾಡಿದ್ದ ಪೊನ್ನಣ್ಣ ಅವರು ತಮ್ಮ ಕಾರ್ಯವೈಖರಿ ಮೂಲಕ ಮೆಚ್ಚುಗೆ ಗಳಿಸಿದ್ದರು. ಅಲ್ಲದೆ ಸರ್ಕಾರಕ್ಕೆ ರಾಜಕೀಯ ಹಾಗೂ ಕಾನೂನಾತ್ಮಕವಾಗಿ ಹಲವು ಸಲಹೆ ನೀಡುವ ಮೂಲಕ ಸಿಎಂ ಸೇರಿದಂತೆ ಸಂಪುಟ ಸಹೋದ್ಯೋಗಿಗಳ ಮೆಚ್ಚುಗೆ ಗಳಿಸಿದ್ದರು. ಅಲ್ಲದೆ ಕೈ ಸರ್ಕಾರದ ಸಂಪುಟ ಸಹುದ್ಯೋಗಿಗಳಿಗೆ ಕಾನೂನು ವಿಷಯಗಳಲ್ಲಿ ಸಹ ಮಾರ್ಗದರ್ಶನ ನೀಡಿ ಯಶಸ್ವಿಯಾಗಿದ್ದರು. ಹಿಂದಿನ ಸರ್ಕಾರದ ಬಹುತೇಕ ಎಲ್ಲ ಆಡಳಿತಾತ್ಮಕ ಹಾಗೂ ರಾಜಕೀಯ ಬಿಕ್ಕಟ್ಟಿನ ವೇಳೆ ಸಲಹೆ ನೀಡಿ ಸರ್ಕಾರವನ್ನು ಬಚಾವ್ ಮಾಡಿ ಸೈ ಎನಿಸಿಕೊಂಡಿದ್ದರು. ರಾಜ್ಯಪಾಲರ ವಂದನಾ ನಿರ್ಣಯವನ್ನು ಅತ್ಯಂತ ಪರಿಣಾಮಕಾರಿಯಾಗಿ ಮಂಡಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದರು. ಆಡಳಿತಾತ್ಮಕ ಯಶಸ್ವಿ ನಿರ್ವಹಣೆ ಜೊತೆ ಜೊತೆಗೆ ಕೊಡಗಿನಲ್ಲಿ ಹಲವು ಅಭಿವೃದ್ಧಿ ಕಾರ್ಯಗಳಿಗೆ ಮುಂದಡಿಯಿಟ್ಟಿದ್ದಾರೆ.
ಟ್ರಬಲ್ ಶೂಟರ್: ಈ ಹಿಂದಿನ ಮುಖ್ಯಮಂತ್ರಿ ಅಧಿಕಾರ ಹಸ್ತಾಂತರ ಸಂದರ್ಭದಲ್ಲಿ ಪೊನ್ನಣ್ಣ ಅವರು ಪ್ರಮುಖ ಪಾತ್ರ ವಹಿಸಿದ್ದರು. ಆ ಸಂದರ್ಭ ಎಐಸಿಸಿ ಕಣ್ಣಲ್ಲಿ ಟ್ರಬಲ್ ಶೂಟರ್ ಆಗಿ ಗುರುತಿಸಿಕೊಂಡಿದ್ದರು. ಪೊನ್ನಣ್ಣ ಅವರು ಇದೀಗ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದು, ಮುಖ್ಯಮಂತ್ರಿಗಳೊಂದಿಗೆ ನಿಕಟ ಸಂಪರ್ಕದಲ್ಲಿ ಇರಲಿದ್ದಾರೆ. ಇದರಿಂದ ಕೊಡಗಿನ ಹಲವು ಸಮಸ್ಯೆಗಳ ಪರಿಹಾರಕ್ಕೆ ಸಹಕಾರಿಯಾಗಲಿದೆ. ಕೊಡಗಿಗೆ ಮೊದಲ ಬಾರಿಗೆ ಈ ಸ್ಥಾನ ದೊರಕಿರುವ ಬಗ್ಗೆ ಜಿಲ್ಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಿಸಿದ್ದಾರೆ.ಕೊಡಗಿಗೆ ಸಚಿವ ಸ್ಥಾನದ ನಿರೀಕ್ಷೆಯಿತ್ತು. ಇದೀಗ ಶಾಸಕ ಎ.ಎಸ್. ಪೊನ್ನಣ್ಣ ಅವರನ್ನು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿ ನೇಮಕ ಮಾಡುವ ಮೂಲಕ ಪಕ್ಷ ಸ್ಥಾನ ನೀಡಿದೆ. ಇದರಿಂದ ಕೊಡಗಿನ ಅಭಿವೃದ್ಧಿ ಗೆ ಪೂರಕವಾಗಲಿದೆ.-ಧರ್ಮಜ ಉತಪ್ಪ, ಅಧ್ಯಕ್ಷರು ಕೊಡಗು ಜಿಲ್ಲಾ ಕಾಂಗ್ರೆಸ್-ಸೂರಜ್ ಹೊಸೂರು, ಅಧ್ಯಕ್ಷರು ಸಾಮಾಜಿಕ ಜಾಲತಾಣ ವಿಭಾಗ ಕೊಡಗು ಕಾಂಗ್ರೆಸ್