ರಾಜ್ಯ ಸರ್ಕಾರ ಜಾರಿಗೆ ತರುತ್ತಿರುವ ತಂಬಾಕು ಮತ್ತು ನಿಕೋಟಿನ್ ಅಂಶವುಳ್ಳ ಉತ್ಪನ್ನಗಳ ನಿಷೇಧ ವಿಚಾರವನ್ನು ಗಂಭೀರ ಪರಿಗಣಿಸಿರುವ ಅಡಕೆ ಬೆಳೆಗಾರರ ಅಂತಾರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೊ, ಅಡಕೆ ಬೆಳೆಗಾರರು ಬಲಿಪಶು ಆಗದಂತೆ ತಂಬಾಕು ನಿಷೇಧ ಜಾರಿಯಲ್ಲಿ ಸ್ಪಷ್ಟ ಚೌಕಟ್ಟು ರೂಪಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.

ಮಂಗಳೂರು: ರಾಜ್ಯ ಸರ್ಕಾರ ಜಾರಿಗೆ ತರುತ್ತಿರುವ ತಂಬಾಕು ಮತ್ತು ನಿಕೋಟಿನ್ ಅಂಶವುಳ್ಳ ಉತ್ಪನ್ನಗಳ ನಿಷೇಧ ವಿಚಾರವನ್ನು ಗಂಭೀರ ಪರಿಗಣಿಸಿರುವ ಅಡಕೆ ಬೆಳೆಗಾರರ ಅಂತಾರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೊ, ಅಡಕೆ ಬೆಳೆಗಾರರು ಬಲಿಪಶು ಆಗದಂತೆ ತಂಬಾಕು ನಿಷೇಧ ಜಾರಿಯಲ್ಲಿ ಸ್ಪಷ್ಟ ಚೌಕಟ್ಟು ರೂಪಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ. ಈ ಕುರಿತು ಬುಧವಾರ ಪತ್ರಿಕಾ ಹೇಳಿಕೆ ಹೊರಡಿಸಿರುವ ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್‌.ಸತೀಶ್ಚಂದ್ರ, ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ತಂಬಾಕು ಮತ್ತು ನಿಕೋಟಿನ್ ಅಂಶವುಳ್ಳ ಉತ್ಪನ್ನಗಳ ವಿರುದ್ಧ ಕಠಿಣ ಜಾರಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ತಿಳಿಸಿದೆ. ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಕರ್ನಾಟಕ ರಾಜ್ಯದಾದ್ಯಂತ ತಂಬಾಕು ಮತ್ತು ನಿಕೋಟಿನ್ ಅಂಶವುಳ್ಳ ಉತ್ಪನ್ನಗಳ ಮಾರಾಟ ಮತ್ತು ವಿತರಣೆಯನ್ನು ನಿಷೇಧಿಸಿ ಸರ್ಕಾರಿ ಅಧಿಸೂಚನೆಯನ್ನು ಹೊರಡಿಸಲಾಗಿದೆ ಎಂದು ಇಲಾಖೆ ತಿಳಿಸಿದೆ. ಈ ಅಧಿಸೂಚನೆಯು ಹೊರಡಿಸಿದ ದಿನಾಂಕದಿಂದ ಒಂದು ವರ್ಷದ ಅವಧಿಗೆ ರಾಜ್ಯದಾದ್ಯಂತ ಜಾರಿಯಲ್ಲಿರುತ್ತದೆ.ಸಾರ್ವಜನಿಕ ಆರೋಗ್ಯ ಸಂರಕ್ಷಣೆಯ ಸರ್ಕಾರದ ಉದ್ದೇಶವನ್ನು ಕ್ಯಾಂಪ್ಕೊ ಗೌರವಿಸುತ್ತದೆ ಹಾಗೂ ನಿಷೇಧಿತ ತಂಬಾಕು ಮತ್ತು ನಿಕೋಟಿನ್ ಅಂಶವುಳ್ಳ ಉತ್ಪನ್ನಗಳ ವಿರುದ್ಧ ಪರಿಣಾಮಕಾರಿ ಜಾರಿ ಕ್ರಮದ ಅಗತ್ಯವನ್ನೂ ಒಪ್ಪಿಕೊಳ್ಳುತ್ತದೆ ಎಂದಿದೆ.

ಆದರೆ ಅದೇ ಸಮಯದಲ್ಲಿ ಈ ಅಧಿಸೂಚನೆಯ ಜಾರಿಯು ಅಡಕೆ ಬೆಳೆಗಾರರ ಹಾಗೂ ಕಾನೂನುಬದ್ಧ ಅಡಕೆ ವ್ಯಾಪಾರದ ಹಿತಾಸಕ್ತಿಗಳಿಗೆ ಯಾವುದೇ ರೀತಿಯಲ್ಲಿ ಧಕ್ಕೆ ಉಂಟುಮಾಡದಂತೆ ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಖಚಿತಪಡಿಸಿಕೊಳ್ಳಬೇಕು ಎಂದು ಕ್ಯಾಂಪ್ಕೊ ಒತ್ತಾಯಿಸಿದೆ. ಅಡಕೆ ಉತ್ಪನ್ನಗಳಿಂದ ಅತೀ ಹೆಚ್ಚು ಜಿಎಸ್‌ಟಿ ಸಂಗ್ರಹ: ಅಡಕೆ ವಲಯ ಕರ್ನಾಟಕದ ಆರ್ಥಿಕತೆಗೆ ನೀಡುತ್ತಿರುವ ಗಣನೀಯ ಕೊಡುಗೆಯು ಸಂಸತ್ತಿನ ಮುಂದೆ ಮಂಡಿಸಲಾದ ಮಾಹಿತಿಯಲ್ಲಿಯೂ ಲಭ್ಯವಾಗಿದೆ. ಸಂಸದ ಬಿ.ವೈ. ರಾಘವೇಂದ್ರ ಅವರು ಎತ್ತಿದ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿನೀಡಿದ ಮಾಹಿತಿಯಲ್ಲಿ ಅಡಕೆ ಮತ್ತು ಅಡಕೆ ಆಧಾರಿತ ಉತ್ಪನ್ನಗಳ ಮಾರಾಟದಿಂದ ರಾಜ್ಯವಾರು ಅತೀ ಹೆಚ್ಚು ಜಿಎಸ್ಟಿ ಸಂಗ್ರಹಿಸಿದ ರಾಜ್ಯ ಕರ್ನಾಟಕವಾಗಿದೆ ಎಂದು ತಿಳಿಸಿದ್ದಾರೆ. ಹಣಕಾಸು ಸಚಿವಾಲಯ ನೀಡಿರುವ ವರದಿಯ ಪ್ರಕಾರ, ಕರ್ನಾಟಕದಲ್ಲಿ ಅಡಕೆ ಸಂಬಂಧಿತ ಜಿಎಸ್ಟಿ ಸಂಗ್ರಹ 2025-26ನೇ ಸಾಲಿನಲ್ಲಿ ₹ 379.34 ಕೋಟಿಗಳಷ್ಟಿತ್ತು. ಇದಲ್ಲದೆ 2026-27ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಕರ್ನಾಟಕ ₹ 90.21 ಕೋಟಿ ಅಡಕೆ ಸಂಬಂಧಿತ ಜಿಎಸ್ಟಿ ಸಂಗ್ರಹಿಸಿದೆ.

ಈ ನಿಟ್ಟಿನಲ್ಲಿ ನಿಷೇಧದ ಜಾರಿಯು ಅಧಿಸೂಚನೆಯಲ್ಲಿ ಒಳಗೊಂಡಿರುವ ಉತ್ಪನ್ನಗಳಿಗೆ ಮಾತ್ರ ಸೀಮಿತವಾಗಿರಬೇಕು ಹಾಗೂ ಅಡಕೆಯ ಕೃಷಿ ಉತ್ಪನ್ನದ ಸ್ಥಾನಮಾನ, ಅದರ ಕಾನೂನುಬದ್ಧ ಬೆಳೆಯುವಿಕೆ, ಸಂಗ್ರಹಣೆ, ಸಂಸ್ಕರಣೆ ಮತ್ತು ವ್ಯಾಪಾರದ ಮೇಲೆ ಯಾವುದೇ ಪರೋಕ್ಷ ನಿರ್ಬಂಧ ಉಂಟಾಗದಂತೆ ಖಚಿತಪಡಿಸಿಕೊಳ್ಳಬೇಕೆಂದು ಸರ್ಕಾರ ಹಾಗೂ ಜಾರಿ ಅಧಿಕಾರಿಗಳನ್ನು ಕ್ಯಾಂಪ್ಕೊ ಆಗ್ರಹಿಸಿದೆ.

ನಿಷೇಧಿತ ಉತ್ಪನ್ನಗಳಿಗೆ ಮಾತ್ರ ಅನ್ವಯವಾಗಲಿ: ಎಸ್ಆರ್‌ಎಸ್‌ : ಈ ಬಗ್ಗೆ ಪ್ರತಿಕ್ರಿಯಿಸಿರುವ ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ, ಅಡಕೆಯು ಕರ್ನಾಟಕ ಮತ್ತು ದೇಶದ ಇತರ ಭಾಗಗಳ ಅಸಂಖ್ಯಾತ ರೈತರ ಜೀವನೋಪಾಯಕ್ಕೆ ಆಧಾರವಾಗಿರುವ ಪ್ರಮುಖ ತೋಟಗಾರಿಕಾ ಬೆಳೆಯಾಗಿದೆ. ಈ ಅಧಿಸೂಚನೆಯ ಜಾರಿ ಕ್ರಮ ನಿಷೇಧಿತ ಉತ್ಪನ್ನಗಳಿಗೆ ಮಾತ್ರ ಸೀಮಿತವಾಗಿರಬೇಕೇ ಹೊರತು ಅಡಕೆ ಬೆಳೆಗಾರರಿಗೆ ಅಥವಾ ಕಾನೂನುಬದ್ಧ ಅಡಕೆ ವ್ಯಾಪಾರಕ್ಕೆ ಯಾವುದೇ ಅನಪೇಕ್ಷಿತ ಪರಿಣಾಮ ಬೀರಬಾರದು ಎಂಬ ಆಗ್ರಹ ಮಾಡಿದ್ದಾರೆ.

ಅಡಕೆ ಬೆಳೆಗಾರರು ತಮ್ಮ ಕೃಷಿ ಉತ್ಪನ್ನದ ದುರ್ಬಳಕೆ ಅಥವಾ ಇತರರಿಂದ ಆಗುವ ಬಳಕೆಯ ಪರಿಣಾಮಗಳಿಗೆ ಹೊಣೆಗಾರರಾಗಬಾರದು ಎಂದು ಅವರು ಸ್ಪಷ್ಟಪಡಿಸಿದರು.