ಸಂಪುಟ ಪುನಾರಚನೆಗೆ 4 ತಿಂಗಳಹಿಂದೆಯೇ ಸೂಚನೆ ಇತ್ತು: ಸಿಎಂ

KannadaprabhaNewsNetwork |  
Published : Oct 27, 2025, 12:00 AM IST
ಸಿದ್ದರಾಮಯ್ಯ  | Kannada Prabha

ಸಾರಾಂಶ

ಸಂಪುಟ ಪುನಾರಚನೆ ಮಾಡುವಂತೆ ನಾಲ್ಕೈದು ತಿಂಗಳ ಹಿಂದೆಯೇ ಹೈಕಮಾಂಡ್‌ ಸೂಚನೆ ಕೊಟ್ಟಿತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಸಂಪುಟ ಪುನಾರಚನೆ ಮಾಡುವಂತೆ ನಾಲ್ಕೈದು ತಿಂಗಳ ಹಿಂದೆಯೇ ಹೈಕಮಾಂಡ್‌ ಸೂಚನೆ ಕೊಟ್ಟಿತ್ತು. ಸರ್ಕಾರಕ್ಕೆ ಎರಡೂವರೆ ವರ್ಷವಾಗಲಿ ಎಂದು ಹೇಳಿದ್ದೆ. ಈಗ ಸರ್ಕಾರಕ್ಕೆ ಎರಡೂವರೆ ವರ್ಷವಾಗುತ್ತಿದೆ. ಹೀಗಾಗಿ ಸಂಪುಟ ಪುನಾರಚನೆ ಬಗ್ಗೆ ಹೈಕಮಾಂಡ್‌ ಜತೆ ಮಾತನಾಡುತ್ತೇನೆ. ಹೈಕಮಾಂಡ್‌ ಹೇಳಿದರೆ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.ಜಿಲ್ಲೆಯ ಚನ್ನಮ್ಮನ ಕಿತ್ತೂರಿನಲ್ಲಿ ಶನಿವಾರ ಕಿತ್ತೂರು ಉತ್ಸವದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿರಿಯ ನಾಯಕ ಕಪಿಲ್ ಸಿಬಲ್ ಅವರ ಪುಸ್ತಕ ಬಿಡುಗಡೆಗಾಗಿ ದೆಹಲಿಗೆ ಹೋಗುತ್ತಿದ್ದೇನೆ. ಅಲ್ಲಿಗೆ ಹೋದಾಗ ಪಕ್ಷದ ನಾಯಕರನ್ನು ಭೇಟಿಯಾಗುತ್ತೇನೆ. ನಮ್ಮ ರಾಜ್ಯದಲ್ಲಿ ನಡೆಯುತ್ತಿರುವ ಆಡಳಿತಾತ್ಮಕ ವಿದ್ಯಮಾನಗಳ ಬಗ್ಗೆ ತಿಳಿಸುವ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.ಸಿಎಂ ವಿಚಾರವಾಗಿ ಯತೀಂದ್ರ ಹೇಳಿಕೆಯನ್ನು ನೀವು (ಮಾಧ್ಯಮಗಳು) ತಿರುಚಿದ್ದೀರಿ. ಸೈದ್ಧಾಂತಿಕವಾಗಿ ಅವರು ಹೇಳಿಕೆ ಕೊಟ್ಟಿದ್ದಾರೆ. ಈಗ ನಾನು ಅಹಿಂದ ಸಂಘಟನೆ ಮಾಡುತ್ತಿದ್ದೇನೆ. ಮುಂದೆ ಸತೀಶ ಜಾರಕಿಹೊಳಿ ಮಾಡುತ್ತಾರೆ ಎಂದಿದ್ದಾರೆ. ಅವರೇ ಲೀಡರ್ ಆಗಬೇಕು ಎಂದು ಹೇಳಿದ್ದಾರಾ? ಅದನ್ನು ಪಕ್ಷದ ಹೈಕಮಾಂಡ್ ತೀರ್ಮಾನಿಸುತ್ತದೆಯೇ ಹೊರತು ನಾವಲ್ಲ ಎಂದು ಹೇಳಿದರು.

ಎರಡನೇ ಬಾರಿ ಕಿತ್ತೂರು ಉತ್ಸವಕ್ಕೆ ಬಂದಿದ್ದೇನೆ. ಮೂರನೇ ಸಲವೂ ಬರಲು ಯತ್ನಿಸುತ್ತೇ‌ನೆ ಎಂದರು. ಮುಂದಿನ ವರ್ಷ ಮೈಸೂರು ಮಾದರಿಯಲ್ಲಿ ಡ್ರೋನ್ ಶೋ ಮಾಡುತ್ತೀರಾ ಎಂಬ ಪ್ರಶ್ನೆಗೆ, ಕಿತ್ತೂರು ಉತ್ಸವದಲ್ಲಿ ಯಾವ ಮಾದರಿ ಕಾರ್ಯಕ್ರಮ ಮಾಡಬೇಕು ಎಂಬುದನ್ನು ಶಾಸಕ ಬಾಬಾಸಾಹೇಬ ಪಾಟೀಲರ ವಿವೇಚನೆಗೆ ಬಿಡುವೆ ಎಂದು ಹೇಳಿದರು.ಒಳಮೀಸಲಾತಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಕೆಪಿಎಸ್ಸಿಯವರಿಗೆ ಸಂದರ್ಶನ ಮಾಡಿ ಆದರೆ, ಫಲಿತಾಂಶ ಪ್ರಕಟಿಸಬೇಡಿ ಎಂದು ಕೋರ್ಟ್ ಹೇಳಿದೆ. ಫಲಿತಾಂಶ ಪ್ರಕಟಿಸುವ ಮುನ್ನ ನಮ್ಮನ್ನು ಕೇಳುವಂತೆ ಕೋರ್ಟ್ ತಿಳಿಸಿದೆ ಎಂದು ಸ್ಪಷ್ಟಪಡಿಸಿದರು.

PREV

Recommended Stories

ವಾಲ್ಮೀಕಿಗೆ ದೇವರ ಪಟ್ಟ ಕೊಡದಿರುವುದು ದುರಂತ: ಡಾ.ಗೋಪಾಲ
ಚರ್ಚ್‌ನಲ್ಲಿ ನಡೆದಿರುವುದು ಆತ್ಮಹತ್ಯೆಯಲ್ಲ, ಕೊಲೆ: ಆರೋಪ