ರಾಮಕೃಷ್ಣ ದಾಸರಿ
ಇನ್ನೇನು ಕೇಂದ್ರ ಬಜೆಟ್ ಸಹ ಮುಗಿದು ಲೋಕಸಭೆ ಚುನಾವಣೆ ಘೋಷಣೆಗೆ ದಿನಗಣನೆ ಶುರುವಾದ ಹಿನ್ನೆಲೆ ಕೇಂದ್ರ, ರಾಜ್ಯ ಚುನಾವಣಾ ಆಯೋಗ, ಜಿಲ್ಲಾಡಳಿತ ಜೊತೆಗೆ ರಾಜಕೀಯ ಪಕ್ಷಗಳು ಹಾಗೂ ಆಕಾಂಕ್ಷಿಗಳು ಪೂರ್ವ ಸಿದ್ಧತೆಯಲ್ಲಿ ಸಂಪೂರ್ಣ ಮುಳುಗಿದ್ದು. ಪಕ್ಷಗಳ ಬಲಾಬಲದ ಲೆಕ್ಕಾಚಾರಗಳು ಜೋರಾಗಿ ನಡೆದಿವೆ.
ರಾಯಚೂರು-ಯಾದಗಿರಿ ಜಿಲ್ಲೆಗಳನ್ನೊಳಗೊಂಡ ರಾಯಚೂರು ಲೋಕಸಭಾ ಕ್ಷೇತ್ರ ಹಾಗೂ ಜಿಲ್ಲೆಯ ಸಿಂಧನೂರು, ಮಸ್ಕಿ ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡ ಕೊಪ್ಪಳ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಹೆಜ್ಜೆ ಗಮನಿಸುತ್ತಿರುವ ಕಾಂಗ್ರೆಸ್ ತನ್ನದೇ ಆದ ರೀತಿಯಲ್ಲಿ ಪೂರ್ವ ಸಿದ್ಧತೆ ಮಾಡಿಕೊಳ್ಳುತ್ತಿದೆ.ರಾಜ್ಯ ಸರ್ಕಾರಿ ಪಕ್ಷ (ಆಡಳಿತಾರೂಢ) ಕಾಂಗ್ರೆಸ್ ಗ್ಯಾರಂಟಿ ಲೆಕ್ಕಾಚಾರದಲ್ಲಿದ್ದರೆ, ಶೇ.100 ರಷ್ಟು ಮೋದಿ ಬಲದ ಮೇಲೆ ಅವಲಂಬಿತ ಬಿಜೆಪಿ ಮತ್ತಷ್ಟು ಹುಮಸ್ಸಿನಲ್ಲಿ ಲೋಕಸಭಾ ಚುನಾವಣೆಗೆ ತಳಮಟ್ಟದ ಸಂಘಟನೆ ಜೊತೆಗೆ ಹೊಸ ರೀತಿ ರಣತಂತ್ರ ರೂಪಿಸುತ್ತಿದೆ. ಉಭಯ ರಾಷ್ಟ್ರೀಯ ಪಕ್ಷಗಳು ತಮ್ಮದೇ ಆದ ರೀತಿ ಸಂಘಟನೆ, ಚುನಾವಣೆ ಪೂರ್ವದ ತಂತ್ರಗಾರಿಕೆಯಲ್ಲಿ ತೊಡಗಿರುವ ವಿಷಯಗಳು ಪಕ್ಷಗಳ ಆಂತರೀಕ ಚರ್ಚೆಗೆ ಕಾರಣವಾಗಿವೆ.
ಕಾಂಗ್ರೆಸ್ ಕಾರ್ಯಕರ್ತರ ಕಳವಳ: ಜಿಲ್ಲೆ ಏಳು ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಪಕ್ಷದ ಶಾಸಕರಿದ್ದು, ಜಿಲ್ಲೆಯವರೇ ಸಚಿವರಾಗಿ, ಉಸ್ತುವಾರಿ ಸಚಿವರಿದ್ದಾರೆ. ಮೂರು ಜನ ಶಾಸಕರಿಗೆ ನಿಗಮ ಮಂಡಳಿ ಸ್ಥಾನ ಸಹ ನೀಡಲಾಗಿದೆ. ಹೀಗಿದ್ದರೂ ಮಿತಿ ಮೀರಿದ ಗುಂಪು ಸಂಘರ್ಷ, ಮರೆಯಾಗದ ಕಲೆಳೆಯುವ ಪ್ರವೃತ್ತಿ, ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ದ್ವೇಷ, ಅಸೂಯೆ. ಇದು ಕಾಂಗ್ರೆಸ್ ಕಾರ್ಯಕರ್ತರನ್ನು ಕಳವಳಕ್ಕೀಡು ಮಾಡಿದೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಲಾಭ, ಸಚಿವ, ಶಾಸಕರು ಹಾಗೂ ನಿಗಮ ಮಂಡಳಿಗಳ ಸ್ಥಾನ-ಮಾನದ ಶಕ್ತಿಯನ್ನು ಬಳಸಿಕೊಂಡು ಸಂಘಟನೆ ಮಾಡಬೇಕು ಎಂದರೆ ಒಂದು ವರ್ಷ ಕಳೆಯುತ್ತಿದ್ದರು ಜಿಲ್ಲಾ ಕಾಂಗ್ರೆಸ್ ಸಮಿತಿಗೆ ಅಧ್ಯಕ್ಷರಿಲ್ಲದಿರುವುದು ಪಕ್ಷವನ್ನು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ.