ಕನ್ನಡಪ್ರಭ ವಾರ್ತೆ ಕಲಬುರಗಿ
ರಾಜ್ಯ ಸರ್ಕಾರ ಅದೇ ಸೆ. 21 ರಿಂದ ನಡೆಸಲು ಮುಂದಾಗಿರುವ ಶೈಕ್ಷಣಿಕ, ಸಾಮಾಜಿಕ ಆರ್ಥಿಕ ಸಮೀಕ್ಷೆಯಲ್ಲಿ ಮೂಲಜಾತಿ ಕಾಲಂ 09 ರಲ್ಲಿ ಕಬ್ಬಲಿಗ ಎಂದೇ ಬರೆಯಿಸುವಂತೆ ಕೋಲಿ ಕಬ್ಬಲಿಗ ಸಮನ್ವಯ ಸಮಿತಿ ಅಧ್ಯಕ್ಷರು ಹಾಗೂ ಮೇಲ್ಮನೆ ಸದಸ್ಯರಾಗಿರುವ ತಿಪ್ಪಣ್ಣಪ್ಪ ಕಮಕನೂರ್ ಸಮಾಜ ಬಾಂಧವರಿಗೆ ಕರೆ ನೀಡಿದ್ದಾರೆ.ಕಬ್ಬಲಿಗ ಸಮಾಜದ ಮುಖಂಡ ಶಿವಶರಣಪ್ಪ ಕೋಬಾಳ್, ಅವ್ವಣ್ಣ ಮ್ಯಾಕೇರಿ, ಬಸವರಾಜ ಬೂದಿಹಾಳ, ಬಸವರಾಜ ಸಪ್ಪಣಗೋಳ, ಶಾಂತಪ್ಪ ಕೂಡಿ, ಹುಲಿಗೆಪ್ಪ ಕನಕಗಿರಿ, ರಾಜಗೋಪಾಲ ರೆಡ್ಡಿ, ಶಿವಕುಮಾರ್ ನಾಟೀಕಾರ್ ಅವರೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಹಿರಿಯ ಮುಖಂಡ ತಿಪ್ಪಣ್ಣಪ್ಪ ಕಮಕನೂರ್ ಅವರು, ಮೂಲ ಜಾತಿ ಕಾಲಂನಲ್ಲಿ ಕಬ್ಬಲಿಗ (ಎ- 0588) ನಮೂದಿಸಿರಿ, ಉಪಜಾತಿ ಕಾಲಂ 10ರಲ್ಲಿ ಕೋಲಿ (ಎ- 0712), ಪರ್ಯಾಯ ಜಾತಿ ಕಾಲಂನಲ್ಲಿ ಟೋಕರೆ ಕೋಳಿ (ಸಿ 22. 2 ) ಎಂದು ನಮೂದಿಸುವಂತೆ ಸಮಾಜದ ಬಾಂಧವರಲ್ಲಿ ಮನವಿ ಮಾಡಿದರು.
ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯರೂ ಆಗಿರುವ ಕಮಕನೂರ್ ಜಾತಿ ಗಣತಿಯಲ್ಲಿ ಎಲ್ಲಾ ಜನ ಸಮುದಾಯಗಳ ಸಮಾಜಾಕಿ- ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿಗಳು ಗೊತ್ತಾಗಬೇಕು, ಅಂದಾಗ ಮಾತ್ರ ಸರ್ಕಾರಕ್ಕೆ ಯೋಜನೆ ರೂಪಿಸಲು, ನೀತಿ ನಿರೂಪಣೆಗೆ ಸಹಕಾರಿ. ಕೋಲಿ ಸಮಾಜದವರು ಮೂಲ ಜಾತಿ ಕಬ್ಬಲಿಗ ಎಂದು ಉಳಿದಂತೆ ಸಮಾಜ ಬಂಧುಗಳ ನಿರ್ಣಯದಂತೆ ಗಣತಿದಾರರು ಮನೆಗೆ ಬಂದಾಗ ಬರೆಯಿಸಿ ಖಾತ್ರಿ ಮಾಡಿಕೊಳ್ಳುವಂತೆ ಕರೆ ನೀಡಿದರು.ಕೋಲಿ ಸಮಾಜ ತುಂಬ ಹಿಂದುಳಿದ ಸಮಾಜ. ಕಲ್ಯಾಣ ನಾಡಲ್ಲಿ ಕೋಲಿ ಸಮಾಜದ ಜನರಿದ್ದಾರೆ. ಓಬಿಸಿಯಲ್ಲಿಯೇ ಕೋಲಿ ಬಹುಸಂಖ್ಯಾತವಾಗಿರುವ ಸಮಾಜ. ಹೀಗಾಗಿ ನಮ್ಮ ಜನಸಂಖ್ಯೆ ನಿಖರವಾಗಿ ಗೊತ್ತಾಗಲು ಇದು ಸಹಕಾರಿಯಾಗಲಿದೆ ಎಂದು ಕಮಕನೂರ್ ಹೇಳಿದರು.
ಈಗಾಗಲೇ ಈ ಬಗ್ಗೆ ಸಮಾಜದ ಮುಖಂಡರೆಲ್ಲರೂ ಸಭೆ ಸೇರಿಯೇ ಈ ನಿರ್ಣಯಕ್ಕೆ ಬರಲಾಗಿದೆ ಎಂದೂ ಕಮಕನೂರ್ ಸ್ಪಷ್ಟಪಡಿಸಿದರು.ಮುಖ್ಯಮಂತ್ರಿಗಳ ಬಳಿಗೆ ಶೀಘ್ರ ನಿಯೋಗ
ಕೋಲಿ ಸಮಾಜಕ್ಕೆ ಎಸ್ಟಿ ಪಟ್ಟ ನೀಡಬೇಕು ಎಂಬ ಬೇಡಿಕೆ ಸಾಕಾರ ಗೊಳಿಸಲು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ನೇತೃತ್ವದಲ್ಲಿ ಸಮಾಜದ ಪ್ರಮುಖರು, ಜಿಲ್ಲೆಯ ಶಾಸಕರು ನಿಯೋಗ ಹೋಗುತ್ತಿದ್ದೇವೆ. ಅಲ್ಲಿ ಈ ಬಗ್ಗೆ ಸಿಎಂ ಅವರನ್ನು ಕಂಡು ಸಂಪುಟದಲ್ಲಿ ಮತ್ತೆ ವಿಷಯ ಮಂಡಿಸಿ ಕೇಂದ್ರಕ್ಕೆ ಕಳುಹಿಸುವಂತೆ ಕೋರಲಾಗುತ್ತದೆ ಎಂದರು. ಕೋಲಿಗೆ ಎಸ್ಟಿ ಪಟ್ಟ ನೀಡುವಲ್ಲಿ ಕೇಂದ್ರವೂ ಉತ್ಸುಕವಾದಂತಿದೆ. ಹೀಗಾಗಿ ರಾಜ್ಯ, ಕೇಂದ್ರ ಎರಡೂ ಕಡೆಯಿಂದ ಸೂಕ್ತ ವಾತಾವರಣವಿದ್ದಾಗಲೇ ಮತ್ತೆ ಕೇಂದ್ರಕ್ಕೆ ಪ್ರಸ್ತಾವನೆ ಹೋದಲ್ಲಿ ಶೀಘ್ರ ಕೆಲಸ ಕೈಗೂಡುವ ಸಂಭವವಿದೆ ಎಂದು ಕಮಕನೂರ್ ಅಭಿಪ್ರಾಯಪಟ್ಟರು.ತಿಪ್ಪಣ್ಣಪ್ಪ ಕಮಕನೂರ್‌ಗೆ ಮಂತ್ರಿಸ್ಥಾನ: ಮುಖಂಡರ ಆಗ್ರಹ
ಎಂಎಲ್ಸಿಯಾಗಿರುವ ತಿಪ್ಪಣ್ಣಪ್ಪ ಕಮಕನೂರ್ ಅವರಿಗೆ ಸಂಪುಟ ಪುನಾರಚನೆಯಲ್ಲಿ ಮಂತ್ರಿಗಿರಿ ಕೊಡಬೇಕೆಂದು ಸುದ್ದಿಗೋಷ್ಠಿಯಲ್ಲಿದ್ದ ಕೋಲಿ ಸಮಾಜ ಮುಖಂಡ ಅವ್ವಣ್ಣ ಮ್ಯಾಕೇರಿ, ವಿಜಯಕುಮಾರ್ ಹದಗಿಲ್, ಲಕ್ಷಣ ಅವಂಟಿ, ಗುಂಡು ಐನಾಪೂರ, ಸೋಮಶೇಖರ ಬಿಬಳ್ಳಿ, ಶಿವಶರಣಪ್ಪ ಕೋಬಾಳ್, ಬಸವರಾಜ ಬೂದಿಹಾಳ್, ರಾಜಗೋಪಾಲರೆಡ್ಡಿ, ಬಸವರಾಜ ಸಪ್ಪಣ್ಣಗೋಳ, ಹುಲಿಗೆಪ್ಪ ಕನಕಗಿರಿ ಆಗ್ರಹಿಸಿದರು. ಪಕ್ಷಭೇದ ಮರೆತು ನಾವು ಈ ಬೇಡಿಕೆ ಇಡುತ್ತಿದ್ದೇವೆ. ಕಾಂಗ್ರೆಸ್ ಪಕ್ಷ ಕಮಕನೂರ್ ಅವರಿಗೆ ಸಂಪುಟ ಪುನಾರಚನೆಯಲ್ಲಿ ಮಂತ್ರಿ ಸ್ಥಾನ ನೀಡಿದಲ್ಲಿ ಸಮಾಜ ಆ ಪಕ್ಷಕ್ಕೆ ಅಭಿನಂದಿಸುತ್ತದೆ ಎಂದು ಮ್ಯಾಕೇರಿ ಹೇಳಿದರು.