- ಅಗತ್ಯ ಸಾಧನಗಳ ಮೌಲ್ಯಮಾಪನ, 1 ತಿಂಗಳಲ್ಲಿ ಸಾಧನ ವಿತರಣೆ: ಆರ್.ಜಿ.ಶ್ರೀನಿವಾಸಮೂರ್ತಿ - - -
ವಡ್ಡಿನಹಳ್ಳಿಯ ಕಾಂಪೋಸಿಟ್ ರೀಜನಲ್ ಸೆಂಟರ್ (ಸಿಆರ್‌ಸಿ), ಪ್ರಧಾನ ಮಂತ್ರಿ ದಿವ್ಯಾಂಗನ್ ವಯೋಶ್ರೀ ಕೇಂದ್ರ, ದಾವಣಗೆರೆ ಲಯನ್ಸ್ ಕ್ಲಬ್-317 ಎಚ್, ಅಲಿಮ್ಕೋ ಸಹಯೋಗದಲ್ಲಿ ಹರಿಹರ ತಾಲೂಕಿನ ಮಲೇಬೆನ್ನೂರಿನ ಜಿಗಳಿ ರಸ್ತೆಯ ಲಯನ್ಸ್ ಸಭಾ ಭವನದಲ್ಲಿ ವಿಶೇಷಚೇತನರಿಗೆ ಸಹಾಯಕ ಅಗತ್ಯ ಸಾಧನಗಳ ಮೌಲ್ಯಮಾಪನ ಶಿಬಿರವನ್ನು ಅ.14ರಂದು ಹಮ್ಮಿಕೊಳ್ಳಲಾಗಿದೆ ಎಂದು ಲಯನ್ಸ್ ಕ್ಲಬ್-317 ಎಚ್ ಜಿಲ್ಲಾ ಗವರ್ನರ್ ಆರ್.ಜಿ.ಶ್ರೀನಿವಾಸ ಮೂರ್ತಿ ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 10ರಿಂದ ಆರಂಭಗೊಳ್ಳುವ ಶಿಬಿರದಲ್ಲಿ ಭಾಗವಹಿಸುವ ವಿಶೇಷಚೇತನರು, ದೃಷ್ಟಿಹೀನರಿಗೆ ಯಾವ್ಯಾವ ಅಗತ್ಯ ಸಾಧನ ಸಲಕರಣೆಗಳು ಬೇಕೆಂಬುದನ್ನು ಗುರುತಿಸ, ಮುಂದಿನ ದಿನಗಳಲ್ಲಿ ದಾವಣಗೆರೆ ತಾ. ವಡ್ಡಿನಹಳ್ಳಿ ಗ್ರಾಮದ ಸಿಆರ್‌ಸಿ ಕೇಂದ್ರದಲ್ಲಿ ಅವುಗಳನ್ನು ವಿತರಿಸಲಾಗುವುದು ಎಂದರು.ಲಯನ್ಸ್ ಕ್ಲಬ್‌ನಿಂದ ದಾವಣಗೆರೆ ಜಿಲ್ಲೆ ನಂತರ ಶಿವಮೊಗ್ಗ, ವಿಜಯನಗರ, ಚಿತ್ರದುರ್ಗದಲ್ಲಿ ವಿಶೇಷಚೇತನರಿಗೆ ಸಹಾಯಕ ಅಗತ್ಯ ಸಾಧನಗಳ ಮೌಲ್ಯಮಾಪನ ಶಿಬಿರ ಹಮ್ಮಿಕೊಳ್ಳಲಾಗುವುದು. ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಅವರ ಮಾರ್ಗದರ್ಶನದಲ್ಲಿ ಶಿಬಿರ ಆಯೋಜಿಸಲಾಗಿದೆ. ತಮ್ಮ ಸಂಸ್ಥೆಯಿಂದ ಇದು ಮೊದಲ ಶಿಬಿರವಾಗಿದ್ದು, ಮುಂದಿನ ದಿನಗಳಲ್ಲಿ ದಾವಣಗೆರೆ ತಾಲೂಕು ಮಟ್ಟದಲ್ಲೂ ಶಿಬಿರ ನಡೆಸಲಾಗುವುದು ಎಂದು ಹೇಳಿದರು.
ವಿಶೇಷಚೇತನರಿಗೆ ಅಗತ್ಯ ಸಾಧನಾ ಸಲಕರಣೆ ನೀಡುವುದರಿಂದ ಚಲನಶೀಲತೆ, ಶ್ರವಣ ಸಾಮರ್ಥ್ಯ, ಜ್ಞಾನಾತ್ಮಕ ಸಾಮರ್ಥ್ಯ, ಕಲಿಕಾ ಸಾಮರ್ಥ್ಯ, ಹೆಚ್ಚು ಸ್ವಾವಲಂಬಿ ಮತ್ತು ಉತ್ತಮ ಜೀವನ ನಡೆಸುವುದಕ್ಕೆ ನೆರವಾಗಲಿದೆ. ಸುಮಾರು ಐದಾರು ಕೋಟಿ ರು.ಗಳ ಅನುದಾನದ ಅಗತ್ಯ ಸಾಧನಾ ಸಲಕರಣೆ ವಿತರಿಸಲಾಗುವುದು. ಶಿಬಿರಕ್ಕೆ ಆಗಮಿಸುವವರು ಆಧಾರ ಕಾರ್ಡ್ ಕಡ್ಡಾಯವಾಗಿ ತರಬೇಕು ಎಂದರು.
ಲಯನ್ಸ್ ಕ್ಲಬ್‌ನ ಅಜಯಕುಮಾರ ಮಾತನಾಡಿ, ದಾವಣಗೆರೆ ಶ್ರೀ ಕನ್ನಿಕಾ ಪರಮೇಶ್ವರಿ ಬ್ಯಾಂಕ್‌ನ ಸಭಾಂಗಣದಲ್ಲಿ ಅ.30 ಮತ್ತು 31ರಂದು 2 ದಿನ 30 ಶಿಕ್ಷಕರಿಗೆ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ. ಹದಿಹರೆಯದ ಸಮಸ್ಯೆ, ನೈತಿಕ ಶಿಕ್ಷಣ ಇತರೆ ವಿಷಯಗಳ ಬಗ್ಗೆ ಕವಿತಾ ಶಾಸ್ತ್ರಿ ತರಬೇತಿ ನೀಡುವರು. ತರಬೇತಿ ನಂತರದಲ್ಲಿ ಶಿಕ್ಷಕರು ಬೋಧನೆಯಲ್ಲಿ ಹೇಗೆ ತೊಡಗಿಸಿಕೊಳ್ಳುವರು ಎಂಬುದನ್ನು ಗಮನಿಸಲಾಗುವುದು ಎಂದು ತಿಳಿಸಿದರು.
- - -