ಧಾರವಾಡ: ನಗರದ ರ‍್ಯಾಪಿಡ್ ಸಂಸ್ಥೆ ಹಾಗೂ ಯಶೋಧ ವೆಲ್ಫೇರ್ ಟ್ರಸ್ಟ್ ಸಹಯೋಗದಲ್ಲಿ ಮಾಳಮಡ್ಡಿಯ ರ‍್ಯಾಪಿಡ್ ಕಚೇರಿಯಲ್ಲಿ ಸಿರಿ ಧಾನ್ಯಗಳ ಉಪಯೋಗ ಹಾಗೂ ಸಿರಿಧಾನ್ಯಗಳ ವಿವಿಧ ತಿನಿಸುಗಳ ಪ್ರಾತ್ಯಕ್ಷಿಕೆ, ತರಬೇತಿ ಶಿಬಿರವನ್ನು ಮಹಿಳೆಯರಿಗಾಗಿ ಇತ್ತೀಚೆಗೆ ಆಯೋಜಿಸಲಾಗಿತ್ತು.
ವಾಣಿ ಪುರೋಹಿತ ಮಾತನಾಡಿ, ಪೌಷ್ಟಿಕಾಂಶಗಳ ಸಿರಿಯು ಈ ಧಾನ್ಯಗಳಲ್ಲಿ ಹೆಚ್ಚಿರುವುದರಿಂದ ಸಿರಿಧಾನ್ಯಗಳು ಅಚ್ಚುಮೆಚ್ಚಾಗಿವೆ. ಸಿರಿಧಾನ್ಯಗಳು ಬಡವರು ಮತ್ತು ಹಳ್ಳಿ ಜನರಿಗೆ ಮಾತ್ರ ಎಂಬ ಮಾತು ಇಂದು ಬದಲಾಗಿದೆ. ಒಟ್ಟಿನಲ್ಲಿ ಗ್ರಾಮೀಣ ಪ್ರದೇಶದ ಜನರಿಗಿಂತ ಹೆಚ್ಚಾಗಿ ನಗರವಾಸಿಗಳು ಸಿರಿಧಾನ್ಯ ಸ್ವಾಗತಿಸುತ್ತಿದ್ದು, ಇದು ಉತ್ತಮ ಬದಲಾವಣೆ ಎಂದರು.
ನವಣೆ, ಬರಗು, ಸಾವಿ, ಜೋಳ, ಸಜ್ಜೆ ಮುಂತಾದ ಸಿರಿಧಾನ್ಯಗಳನ್ನು ಉಪಯೋಗಿಸಿ ತಯಾರಿಸಬಹುದಾದ ಖಾದ್ಯಗಳಾದ ಸ್ವಾಗತ ಪಾನೀಯ, ಬಿಸಿಬೆಳೆಬಾತ್, ಚಿತ್ರಾನ್ನ, ಕಿಚಡಿ, ಪಡ್ದು, ದೋಸಾ, ಕಟ್ಲೆಟ್, ಪಾಯಸ, ಇತರ ಖಾದ್ಯಗಳನ್ನು ತಯಾರಿಸುವ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ತರಬೇತಿ ನೀಡಲಾಯಿತು.ಯಶೋಧ ವೆಲ್ಫೇರ್ ಟ್ರಸ್ಟ್ ಕಾರ್ಯನಿರ್ವಾಹಕ ಅಧಿಕಾರಿ ಆನಂದ ಅಗ್ನಿಹೋತ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಧಾರವಾಡ ನಗರ ಹಾಗೂ ಗ್ರಾಮೀಣ ಪ್ರದೇಶದ 25 ಮಹಿಳೆಯರು ತರಬೇತಿ ಪ್ರಯೋಜನ ಪಡೆದರು.