ಮಾನಸಿಕ ಆರೋಗ್ಯ ಕಾಪಾಡಲು ಶಿಬಿರ ಸಹಕಾರಿ: ತಮ್ಮಯ್ಯ

KannadaprabhaNewsNetwork | Published : Nov 7, 2023 1:30 AM

ಸಾರಾಂಶ

ಮಾನಸಿಕ ಆರೋಗ್ಯ ಕಾಪಾಡಲು ಶಿಬಿರ ಸಹಕಾರಿ: ತಮ್ಮಯ್ಯ

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀ ವಿದ್ಯಾಲಯದಲ್ಲಿ ಯೋಗ ಶಿಕ್ಷಕರ ತರಬೇತಿ ಶಿಬಿರ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಸದಾ ಕರ್ತವ್ಯದ ಒತ್ತಡದಲ್ಲಿ ಕಾರ್ಯನಿರ್ವಹಿಸುವ ಪೊಲೀಸರಿಗೆ ದೈಹಿಕ ಸದೃಢತೆಯೊಂದಿಗೆ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಇಂತಹ ಶಿಬಿರಗಳು ಸಹಕಾರಿ ಎಂದು ಶಾಸಕ ಎಚ್.ಡಿ ತಮ್ಮಯ್ಯ ಹೇಳಿದರು.

ಜಿಲ್ಲಾ ಪೊಲೀಸ್ ಇಲಾಖೆ ಮತ್ತು ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದಲ್ಲಿ ಆಯೋಜಿಸಿದ್ದ ಯೋಗ ಶಿಕ್ಷಕರ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಪೋಲೀಸರು ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಂಡರೆ ಠಾಣೆಗೆ ಬರುವ ಜನಸಾಮಾನ್ಯರೊಂದಿಗೆ ಸೌಜನ್ಯಯುತವಾಗಿ ವರ್ತಿಸಿ ಅವರಿಗೆ ನ್ಯಾಯ ಕೊಡಿಸಲು ಸಹಕಾರಿಯಾಗುತ್ತದೆ ಎಂದು ಹೇಳಿದರು.ಪೊಲೀಸ್ ಇಲಾಖೆ ಸಿಬ್ಬಂದಿ ತಾಳ್ಮೆ, ಶಿಸ್ತು, ಸಮಚಿತ್ತ ಕಾಪಾಡಿಕೊಳ್ಳಲು ಈ ಶಿಬಿರದಲ್ಲಿ ತರಬೇತಿ ಪಡೆದು ತಮ್ಮ ಠಾಣೆಗಳ ಸಹೋದ್ಯೋಗಿಗಳಿಗೂ ತರಬೇತಿ ನೀಡುವ ಮೂಲಕ ಇಲಾಖೆಗೆ ಒಳ್ಳೆಯ ಹೆಸರು ತರಬೇಕೆಂದು ಹೇಳಿದರು. ಕುಟುಂಬ ಸೇರಿದಂತೆ ಲೌಕಿಕ ಪ್ರಪಂಚದ ಎಲ್ಲಾ ಬಾಂಧವ್ಯಗಳನ್ನು ತೊಡೆದುಹಾಕಿ ಸಮಾಜದ ಏಳಿಗೆಗೆ ಶ್ರಮಿಸುತ್ತಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದ ಸಹೋದರಿಯ ಸೇವೆ ಶ್ಲಾಘನೀಯ ಎಂದರು. ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಂ ಅಮಟೆ ಮಾತನಾಡಿ, ಪೊಲೀಸರಿಗೆ ದೈಹಿಕ ಆರೋಗ್ಯದೊಂದಿಗೆ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಅತ್ಯಗತ್ಯ, ಆ ನಿಟ್ಟಿನಲ್ಲಿ ಜಿಲ್ಲೆಯ 30 ಠಾಣೆಗಳ ಆಯ್ದ 42 ಮಂದಿ ಪೊಲೀಸ್ ಸಿಬ್ಬಂದಿಗೆ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಮತ್ತು ಒತ್ತಡ ನಿರ್ವಹಣೆ ಬಗ್ಗೆ 5 ದಿನಗಳ ಕಾಲ ಪ್ರಜಾಪಿತ ಬ್ರಹ್ಮ ಕುಮಾರಿ ವಿದ್ಯಾಲಯದಲ್ಲಿ ತರಬೇತಿ ಕೊಡಿಸಲಾಗುತ್ತಿದೆ ಎಂದು ಹೇಳಿದರು. ಪೊಲೀಸರು ಎಂದರೆ ಭಯವಲ್ಲ ಭರವಸೆ ಎಂಬ ಧ್ಯೇಯ ವಾಕ್ಯವನ್ನು ಈಡೇರಿಸಲು ಮೃದುತ್ವ ನಿರ್ವಹಣಾ ಕೌಶಲ್ಯ, ಸಮಚಿತ್ತ, ಮಾನಸಿಕ ಒತ್ತಡ ಕಾಯ್ದುಕೊಳ್ಳುವ ಹಿನ್ನೆಲೆಯಲ್ಲಿ ಈ ಶಿಬಿರ ಆಯೋಜಿಸಲಾಗಿದೆ ಎಂದು ಹೇಳಿದರು. ತರಬೇತಿ ಪಡೆಯುತ್ತಿರುವ ಶಿಬಿರಾರ್ಥಿಗಳು ಶ್ರದ್ಧೆಯಿಂದ ಕಲಿತು ತಮ್ಮ ಠಾಣೆಯ ಸಹದ್ಯೋಗಿಗಳಿಗೆ ಕಲಿಸಿದರೆ ಈ ಶಿಬಿರಕ್ಕೆ ನಿಜವಾದ ಅರ್ಥ ಬರುತ್ತದೆ ಎಂದು ಹೇಳಿದ ಅವರು, ಮುಂಬರುವ ದಿನಗಳಲ್ಲಿ ಮಾನಸಿಕ ಖಿನ್ನತೆ ತೊಲಗಿಸಲು ಅಗತ್ಯವಿರುವ ಶಿಬಿರ ಹಮ್ಮಿಕೊಳ್ಳುವ ಚಿಂತನೆ ಇದೆ ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ರಾಜಯೋಗಿನಿ ಭಾಗ್ಯ, ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಕೃಷ್ಣಮೂರ್ತಿ, ಸಶಸ್ತ್ರ ಮೀಸಲು ಪಡೆಯ ವೃತ್ತ ನಿರೀಕ್ಷಕ ಸಹದೇವ, ಸಂಪನ್ಮೂಲ ವ್ಯಕ್ತಿ ಡಾ.ಮಹೇಂದ್ರ ಇದ್ದರು. ಈ ಕಾರ್ಯಕ್ರಮವನ್ನು ಜ್ಞಾನರಶ್ಮಿ ಶಾಲೆ ಮುಖ್ಯಸ್ಥ ನಂದಕುಮಾರ್ ನಿರೂಪಿಸಿದರು. ಶೀಲಾ ಸ್ವಾಗತಿಸಿದರು.

6 ಕೆಸಿಕೆಎಂ 5ಚಿಕ್ಕಮಗಳೂರಿನ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದಲ್ಲಿ ಆಯೋಜಿಸಿದ್ದ ಯೋಗ ಶಿಕ್ಷಕರ ತರಬೇತಿ ಶಿಬಿರವನ್ನು ಶಾಸಕ ಎಚ್‌.ಡಿ. ತಮ್ಮಯ್ಯ ಉದ್ಘಾಟಿಸಿದರು. ಎಸ್ಪಿ ಡಾ. ವಿಕ್ರಂ ಅಮಟೆ, ಎಎಸ್ಪಿ ಕೃಷ್ಣಮೂರ್ತಿ ಇದ್ದರು.

Share this article