ಕನ್ನಡಪ್ರಭ ವಾರ್ತೆ ಹಾವೇರಿ
ಬಹಳ ದಿನಗಳ ತರುವಾಯ, ಅಪರೂಪಕ್ಕೆ ಬಂದ ಮಳೆ ವಿವಿಧೆಡೆ ಅವಾಂತರ ಸೃಷ್ಟಿಸಿದೆ.ಹಾವೇರಿ, ಶಿಗ್ಗಾಂವಿ, ಸವಣೂರು, ರಾಣಿಬೆನ್ನೂರು, ಹಾನಗಲ್, ಬ್ಯಾಡಗಿ ತಾಲೂಕು ಸೇರಿದಂತೆ ಜಿಲ್ಲೆಯ ವಿವಿಧೆಡೆ ಸೋಮವಾರ ಸಂಜೆ ಗಂಟೆಗೂ ಹೆಚ್ಚು ಕಾಲ ಸುರಿಯಿತು.
ಸಂಜೆ ೪.೩೦ರ ವೇಳೆಗೆ ಗುಡುಗು, ಮಿಂಚು ಸಮೇತ ಏಕಾಏಕಿ ಧಾರಾಕಾರ ಮಳೆ ಸುರಿಯಲಾರಂಭಿಸಿತು. ಹತ್ತು ನಿಮಿಷ ಬಂದು ಹೋಗಬಹುದು ಅಂದುಕೊಂಡು ಕಂಡಲ್ಲಿ ಆಶ್ರಯ ಪಡೆದು ನಿಂತಿದ್ದವರು ಗಂಟೆಗಟ್ಟಲೆ ನಿಲ್ಲುವಂತಾಯಿತು.ಇಲ್ಲಿಯ ಶಹರ ಠಾಣೆಯಿಂದ ಪ್ರವಾಸಿ ಮಂದಿರ, ತಾಪಂ ಕಾರ್ಯಾಲಯದವರೆಗೂ ರಸ್ತೆಯಲ್ಲಿ ನೀರು ಹರಿಯಿತು. ಇದರಿಂದ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ಚರಂಡಿ ತುಂಬಿ ನಗರದ ವಿವಿಧೆಡೆ ರಸ್ತೆ ಮೇಲೆ ನೀರು ಹರಿಯಿತು. ಹಾನಗಲ್ಲ ರಸ್ತೆ ಮೇಲೂ ನೀರು ಹರಿದು ಸಮಸ್ಯೆಯಾಯಿತು. ಇದೇ ವೇಳೆ ವಿದ್ಯುತ್ ಪೂರೈಕೆ ಯಲ್ಲಿ ವ್ಯತ್ಯಯವಾಯಿತು.
ಜಿಲ್ಲಾದ್ಯಂತ ಬರಗಾಲದ ಛಾಯೆ ಆವರಿಸಿತ್ತು. ಜಿಲ್ಲೆಯ ಎಂಟು ತಾಲೂಕುಗಳು ಬರಪೀಡಿತ ಪಟ್ಟಿಗೆ ಸೇರಿವೆ. ರೈತರು ಮಳೆ–ಬೆಳೆಯಿಲ್ಲದೆ ಕಂಗಾಲಾಗಿದ್ದಾರೆ. ಇಂಥ ಸಂದರ್ಭದಲ್ಲಿ ಬರಗಾಲದಲ್ಲಿ ವರವಾಗಿ ಈ ಮಳೆ ಬಂದಿದೆ ಎಂದು ಜಿಲ್ಲೆಯ ಜನರು ಮಾತನಾಡಿಕೊಂಡರು.ಅ.25ರಿಂದ ಸ್ವಾತಿ ನಕ್ಷತ್ರದ ಮಳೆ ಆರಂಭವಾಗಬೇಕಿತ್ತು. ಆರಂಭದಿಂದಲೂ ಕೈಕೊಟ್ಟ ಈ ಮಳೆ, ಕಡೆಯ ದಿನ ಅಂದರೆ ಸೋಮವಾರ ದರ್ಶನ ಕೊಟ್ಟಿತು. ಸ್ವಾತಿ ನಕ್ಷತ್ರದ ಮಳೆಗೆ ಭಾರಿ ಮಹತ್ವವಿದೆ. ಇದು ಮಳೆಗಾಲದ ಕೊನೆಯಲ್ಲಿ ಬರುವ ಮಳೆಯಾದ ಕಾರಣ ಮಳೆ ನೀರು ಸಂಗ್ರಹ (ಮಳೆ ಕೊಯ್ಲು) ಮಾಡುವವರಿಗೆ ಅಮೂಲ್ಯ. ಹೀಗಾಗಿಯೇ ಸ್ವಾತಿ ಮಳೆ ಬಂದರೆ ಬೇಸಿಗೆಯಲ್ಲಿ ನೀರಿನ ಬರ ಬಾರದು ಎಂಬ ನಂಬಿಕೆಯಿದೆ. ಆದರೆ, ನಿರೀಕ್ಷಿತ ಮಟ್ಟದಲ್ಲಿ ಈ ಬಾರಿ ಮಳೆ ಸುರಿದಿಲ್ಲ.
ಅಧಿಕ ಬಿಸಿಲಿನ ತಾಪದಿಂದ ಬೆಂದಿದ್ದ ಜನರಿಗೆ ಮಳೆಯ ಸಿಂಚನ ಮುದ ನೀಡಿತು. ಬಹಳ ದಿನಗಳ ನಂತರ ಸುರಿದ ಮಳೆಯಲ್ಲಿ ಮಕ್ಕಳು ಆಟವಾಡುತ್ತಾ ಸಂಭ್ರಮಿಸಿದರು. ಗುಡುಗು, ಮಿಂಚಿನ ಆರ್ಭಟ ಕಂಡು ಬಂತು.