ಭ್ರಷ್ಟಾಚಾರ ವಿರುದ್ಧ ಜಾಗೃತಿ ಸಪ್ತಾಹ 2023 ಕಾರ್ಯಕ್ರಮಮುಂಡರಗಿ: ಸರ್ಕಾರ ಲೋಕಾಯುಕ್ತ ಸಂಸ್ಥೆಯನ್ನು ಮುಖ್ಯವಾಗಿ ಸರ್ಕಾರಿ ಕಚೇರಿಗಳು ಹಾಗೂ ಸರ್ಕಾರಿ ಅಧಿಕಾರಿಗಳಿಂದ ಸಾರ್ವಜನಿಕರಿಗಾಗುತ್ತಿರುವ ತೊಂದರೆಗಳನ್ನು ತಪ್ಪಿಸಿ ಅವರ ಮೇಲೆ ಒಂದು ಹತೋಟಿಯನ್ನು ಇಡುವುದಕ್ಕಾಗಿ ಲೋಕಾಯುಕ್ತ ಸಂಸ್ಥೆಯನ್ನು ಪ್ರಾರಂಭಿಸಿದೆ ಎಂದು ಗದಗ ಜಿಲ್ಲಾ ಲೋಕಾಯುಕ್ತ ಡಿವೈಎಸ್ಪಿ ಡಾ. ವಿಜಯ್ ಬಿರಾದಾರ ಹೇಳಿದರು. ಅವರು ಸೋಮವಾರ ಪಟ್ಚಣದ ಜಗದ್ಗುರು ತೋಂಟದಾರ್ಯ ಸರ್ಕಾರಿ ಪದವಿ ಕಾಲೇಜಿನಲ್ಲಿ ಕರ್ನಾಟಕ ಲೋಕಾಯುಕ್ತ ಪೊಲೀಸ್ ಠಾಣೆ ಗದಗ, ಜಗದ್ಗುರು ತೋಂಟದಾರ್ಯ ಸರ್ಕಾರಿ ಪದವಿ ಕಾಲೇಜ್ ಮುಂಡರಗಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಭ್ರಷ್ಟಾಚಾರ ವಿರುದ್ಧ ಜಾಗೃತಿ ಸಪ್ತಾಹ 2023 ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಪ್ರಮುಖವಾಗಿ ಭ್ರಷ್ಟಾಚಾರ ತಡೆಗಟ್ಟುವಿಕೆ ಮತ್ತು ಭ್ರಷ್ಟಾಚಾರವನ್ನು ಪತ್ತೆ ಹಚ್ಚಿ ನಿರ್ಮೂಲನೆ ಮಾಡುವುದು ಈ ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ.
ಸರ್ಕಾರದ ವಿವಿಧ ಇಲಾಖೆಗಳ ಕಾಮಾಗಾರಿಯಲ್ಲಿ ಕಳಪೆ ಕಾಮಗಾರಿ ಅಥವಾ ಅಕ್ರಮ ವ್ಯವಹಾರ ನಡೆದ ಕುರಿತು ದೂರು ನೀಡಿದಲ್ಲಿಯೂ ಸಹ ಅಂತಹ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಲಾಗುವುದು.
ನಮ್ಮ ಖಾತೆ ಬದಲಾವಣೆ, ಜನನ ಹಾಗೂ ಮರಣ ಉತಾರ ನೀಡುವುದು, ಆಸ್ತಿ ಖರೀದಿ ಸೇರಿದಂತೆ ವಿವಿಧ ಕರ್ತವ್ಯಗಳಲ್ಲಿ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಲಂಚ ತೆಗೆದುಕೊಳ್ಳುವುದು ಕಂಡು ಬಂದಲ್ಲಿ ಸಾಕ್ಷಿ ಸಹಿತವಾಗಿ ದೂರು ನೀಡಿದಲ್ಲಿ ಅಂತವರ ವಿರುದ್ಧವಾಗಿ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು. ಲಂಚ ಸ್ವೀಕರಿಸುವುದು ಎಷ್ಟು ಅಪರಾಧವೋ, ಕೊಡುವುದು ಸಹ ಅಷ್ಟೇ ಅಪರಾಧವಾಗಿದ್ದು, ಕೊಡುವವರೂ ಸಹ ಈ ಬಗ್ಗೆ ಯೋಚಿಸಬೇಕಿದೆ ಎಂದರು.ಸಕಾಲದಡಿಯಲ್ಲಿ ಸರ್ಕಾರ ಪ್ರತಿ ಕಾರ್ಯಗಳಿಗೂ ಸಮಯ ನಿಗದಿಪಡಿಸಿದೆ. ಮಾಹಿತಿ ಹಕ್ಕು ಅಧಿನಿಯಮವನ್ನು ದುರುಪಯೋಗ ಮಾಡಿಕೊಳ್ಳದೇ ಸದುಪಯೋಗ ಮಾಡಿಕೊಳ್ಳಬೇಕು. ಯಾವುದೇ ಅರ್ಜಿ ಸಲ್ಲಿಸುವಾಗ ಸ್ವೀಕೃತಿಯ ಪ್ರತಿಯನ್ನು ಪಡೆದುಕೊಳ್ಳುವುದು ಅವಶ್ಯವಾಗಿದೆ. ಇದರಿಂದ ನೈಜವಾಗಿ ತನಿಖೆ ನಡೆಸಲು ಅನುಕೂಲವಾಗುತ್ತದೆ. ವಿದ್ಯಾರ್ಥಿಗಳು ಕಲಂ 14ರಿಂದ 35 ರವರೆಗೆ ಎಲ್ಲ ಕಲಂಗಳನ್ನು ಓದಿ ತಿಳಿದುಕೊಳ್ಳಬೇಕು. ವಿದ್ಯಾರ್ಥಿಗಳು ಮೊಬೈಲ್ ಬಳಕೆ ಬದಲು ಪುಸ್ತಕ ಓದುವ ಹವ್ಯಾಸ ಬೆಳಸಿಕೊಳ್ಳಬೇಕು. ವಿದ್ಯಾರ್ಥಿ ಜೀವನದಲ್ಲಿ ಮೊಬೈಲ್ ಬಳಕೆ ಸರಿಯಲ್ಲ. ಅವಶ್ಯವಿದ್ದಷ್ಟುಮಾತ್ರ ಬಳಸಿಕೊಳ್ಳಬೇಕು ಎಂದರು. ಜಿಲ್ಲೆಯಲ್ಲಿ ಲೋಕಾಯುಕ್ತೆ ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ದೂರುಗಳು ದಾಖಲಾಗುತ್ತಿದ್ದು, ವಿದ್ಯಾರ್ಥಿ, ಯುವಮಿತ್ರರು ಭ್ರಷ್ಟಾಚಾರ ಕಡಿಮೆ ಮಾಡಲು ಶ್ರಮಿಸಬೇಕು. ನಿಮ್ಮ ಕಣ್ಣೆದುರಿನಲ್ಲಿ ನಡೆಯುವ ಭ್ರಷ್ಟಾಚಾರದ ಕುರಿತು ದೂರನ್ನು ದಾಖಲಿಸಬೇಕು ಎಂದರು.