ಸರ್ಕಾರಿ ಶಾಲೆ ಆಸ್ತಿ ಉಳಿಸಲು ಅಭಿಯಾನ: ಡಾ. ಪುರುಷೋತ್ತಮ ಬಿಳಿಮಲೆ

KannadaprabhaNewsNetwork |  
Published : Jan 03, 2026, 01:15 AM IST
900 | Kannada Prabha

ಸಾರಾಂಶ

ವಿವಿಧ ಕನ್ನಡಪರ ಸಂಘಟನೆಗಳ ಸಭೆ ನಡೆಸಲಾಗಿದ್ದು, ಕನ್ನಡಪರ ಹೋರಾಟಗಳ ಸಂದರ್ಭದಲ್ಲಿ ದಾಖಲಿಸಲಾಗಿರುವ ಪ್ರಕರಣಗಳನ್ನು ಹಿಂಪಡೆಯುವ ಸಂಬಂಧ ಪ್ರಾಧಿಕಾರಕ್ಕೆ ಪ್ರಕರಣಗಳ ಪಟ್ಟಿ ನೀಡುವಂತೆ ಕೋರಲಾಗಿದೆ.

ಕನ್ನಡಪ್ರಭ ವಾರ್ತೆ, ತುಮಕೂರು

ಸರ್ಕಾರಿ ಶಾಲೆ ಉಳಿದರೆ ಕನ್ನಡವೂ ಉಳಿಯುತ್ತದೆ ಎಂಬ ಮಾತಿನಲ್ಲಿ ಪ್ರಾಧಿಕಾರ ವಿಶ್ವಾಸವಿಟ್ಟಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆ, ಆಸ್ತಿ ಉಳಿಸಲು ಖಾತೆ ನೋಂದಣಿಯಾಗಿದೆಯೇ? ಎಂಬ ಬಗ್ಗೆ ಅಭಿಯಾನ ನಡೆಸಿ ಈವರೆಗೆ 17,500 ಶಾಲೆಗಳ ಆಸ್ತಿ ಖಾತೆ ನೋಂದಣಿ ಮಾಡಿಸಲಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ತಿಳಿಸಿದ್ದಾರೆ.

ಶುಕ್ರವಾರ ತುಮಕೂರು ಜಿಲ್ಲಾ ಪ್ರವಾಸದಲ್ಲಿದ್ದ ಅವರು ತುಮಕೂರು ಜಿಲ್ಲೆಯ ವಿವಿಧ ಇಲಾಖೆಗಳ ಕನ್ನಡ ಅನುಷ್ಠಾನ ಕುರಿತ ಪ್ರಗತಿ ಪರಿಶೀಲನೆ ಸಭೆ ಹಾಗೂ ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅನುಷ್ಠಾನ ಕುರಿತು ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿ ನಡೆಸಿ, ರಾಜ್ಯದಲ್ಲಿ ವಿವಿಧ ಸರ್ಕಾರಿ ಶಾಲೆಗಳ ಆಸ್ತಿ ಖಾತೆ ನೋಂದಣಿಯಾಗದಿರುವುದನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಗಮನಿಸಿ ಬೃಹತ್ ಅಭಿಯಾನ ನಡೆಸಿತ್ತು. ರಾಜ್ಯದಾದ್ಯಂತ ಹಲವಾರು ಶಾಲೆಗಳಿಗಾಗಿ ದಾನಿಗಳು ನೀಡಿದ ಜಮೀನು ಖಾತೆಯಾಗದೆ ನಂತರದ ಪೀಳಿಗೆ ವಾಪಸ್ ಪಡೆದಿರುವ ಪ್ರಕರಣಗಳು ಹಾಗೂ ಭೂಗಳ್ಳರಿಂದ ಒತ್ತುವರಿಯಾದ ಬಗ್ಗೆ ದೂರುಗಳನ್ನು ಸ್ವೀಕರಿಸಿತು. ಸುಮಾರು ೧೭,೮೦೦ ಶಾಲೆಗಳ ಆಸ್ತಿ ಖಾತೆ ನೋಂದಣಿಯಾಗದಿರುವುದನ್ನು ಪತ್ತೆಹಚ್ಚಿ ಈಗಾಗಲೇ ೧೭,೫೦೦ ಶಾಲೆಗಳಿಗೆ ಆಸ್ತಿ ನೋಂದಣಿ ಮಾಡಿಸಲಾಗಿದೆ. ಬಾಕಿ ೩೦೦ ಶಾಲೆಗಳ ಖಾತೆ ಸದ್ಯದಲ್ಲಿಯೇ ಮಾಡಿಸಲಾಗುವುದು ಎಂದರು.

ರಾಜ್ಯಾದ್ಯಂತ ವಿವಿಧ ಸರ್ಕಾರಿ ಇಲಾಖೆ ನೌಕರರು ತಮ್ಮ ಊರಿನ ಶಾಲೆಯಲ್ಲಿ ವ್ಯಾಸಂಗ ಮಾಡಿರುತ್ತಾರೆ. ಅವರು ತಾವು ಓದಿದ ಶಾಲೆಯ ಆಸ್ತಿ ಖಾತೆ ನೋಂದಣಿಯಾಗಿದೆಯೇ ಎಂದು ಪರಿಶೀಲಿಸಿ ಪ್ರಾಧಿಕಾರಕ್ಕೆ ವರದಿ ಮಾಡಿದಲ್ಲಿ ಪ್ರಾಧಿಕಾರವೇ ಕಂದಾಯ ಇಲಾಖೆ ಅಧಿಕಾರಿಗಳಿಂದ ನೋಂದಣಿಗೆ ಕ್ರಮವಹಿಸಲಿದೆ. ಆಯಾ ನೋಂದಾಯಿತ ಖಾತೆ ಛಾಯಾಚಿತ್ರಗಳನ್ನು ಶಾಲಾ ಮುಖ್ಯಸ್ಥರ ಕೊಠಡಿಯಲ್ಲಿ ಅಳವಡಿಸುವುದು ಪ್ರಾಧಿಕಾರದ ಉದ್ದೇಶವಾಗಿದೆ. ಇದಕ್ಕೆ ಎಲ್ಲಾ ಕನ್ನಡಿಗರೂ ಸ್ಪಂದಿಸಬೇಕು. ಈ ಮೂಲಕ ಸರ್ಕಾರಿ ಆಸ್ತಿಯನ್ನು ರಕ್ಷಿಸಬೇಕು ಎಂದು ಹೇಳಿದರು.

ಮಕ್ಕಳು ಅಥವಾ ಶಿಕ್ಷಕರ ಕೊರತೆ ಕಾರಣದಿಂದ ಸರ್ಕಾರಿ ಶಾಲೆಗಳನ್ನು ಮುಚ್ಚುವ ಅಥವಾ ವಿಲೀನಗೊಳಿಸುವ ಪ್ರಕ್ರಿಯೆಗೆ ಸರ್ಕಾರ ಮುಂದಾದಲ್ಲಿ ಖಾಲಿ ಉಳಿಯುವ ಶಾಲಾ ಕಟ್ಟಡವನ್ನು ಯಾವುದಾದರೂ ಸರ್ಕಾರಿ ಇಲಾಖೆಯ ಬಳಕೆಗೆ ಹಸ್ತಾಂತರಿಸಬೇಕು. ಈ ಮೂಲಕ ಸರ್ಕಾರಿ ಆಸ್ತಿಯನ್ನು ಸಂರಕ್ಷಿಸಬೇಕು ಎಂದು ಅವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ್ ಹಾನಗಲ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ರವಿಕುಮಾರ್ ನೀಹಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಈಶ್ವರ್ ಕು. ಮಿರ್ಜಿ, ಜಿಲ್ಲಾ ವಾರ್ತಾಧಿಕಾರಿ ಹಿಮಂತರಾಜು ಜಿ. ಇದ್ದರು.

ವಿವಿಧ ಕನ್ನಡಪರ ಸಂಘಟನೆಗಳ ಸಭೆ:

ವಿವಿಧ ಕನ್ನಡಪರ ಸಂಘಟನೆಗಳ ಸಭೆ ನಡೆಸಲಾಗಿದ್ದು, ಕನ್ನಡಪರ ಹೋರಾಟಗಳ ಸಂದರ್ಭದಲ್ಲಿ ದಾಖಲಿಸಲಾಗಿರುವ ಪ್ರಕರಣಗಳನ್ನು ಹಿಂಪಡೆಯುವ ಸಂಬಂಧ ಪ್ರಾಧಿಕಾರಕ್ಕೆ ಪ್ರಕರಣಗಳ ಪಟ್ಟಿ ನೀಡುವಂತೆ ಕೋರಲಾಗಿದೆ. ಕನ್ನಡಪರ ಹೋರಾಟಗಾರರಿಗೆ ಸಭೆ ನಡೆಸಲು ಕಾನೂನು ವ್ಯಾಪ್ತಿಯಲ್ಲಿ ಪ್ರವಾಸಿ ಮಂದಿರಗಳಲ್ಲಿ ಅವಕಾಶ ನೀಡಲು ತಿಳಿಸಲಾಗಿದೆ ಎಂದು ಡಾ. ಪುರುಷೋತ್ತಮ ಬಿಳಿಮಲೆ ತಿಳಿಸಿದರು.

ಸರ್ಕಾರಿ ಕಟ್ಟಡಗಳು, ವಾಣಿಜ್ಯ ಕಟ್ಟಡಗಳು ಸೇರಿ ವಿವಿಧೆಡೆ ನಾಮ ಫಲಕಗಳು ೬೦/೪೦ ಅನುಪಾತದಲ್ಲಿ ಅಳವಡಿಸುವ ಸಂಬಂಧ ನಗರ ಸ್ಥಳೀಯ ಸಂಸ್ಥೆಗಳು ಈ ನಿಯಮ ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕಿದೆ. ಒಂದೊಮ್ಮೆ ಈ ಅನುಪಾತದಲ್ಲಿ ಕನ್ನಡದ ನಾಮಫಲಕ ಅಳವಡಿಸದ ಕಂಪನಿಗಳು ಅಥವಾ ಅಂಗಡಿ-ಮುಂಗಟ್ಟು ಪರವಾನಗಿ ನವೀಕರಿಸದಂತೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದು ಹೇಳಿದರು. ಸಾರ್ವಜನಿಕರು ಅತಿ ಹೆಚ್ಚು ವ್ಯವಹರಿಸುವ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಒಬ್ಬ ಕನ್ನಡದ ಅಧಿಕಾರಿ ಕಡ್ಡಾಯವಾಗಿ ನೇಮಿಸಬೇಕೆಂದು ಈಗಾಗಲೇ ಸೂಚನೆ ನೀಡಲಾಗಿದೆ. ಹೊರ ರಾಜ್ಯಗಳಿಂದ ವರ್ಗವಾಗಿ ಬಂದ ಬ್ಯಾಂಕ್ ಅಧಿಕಾರಿ ೩ ತಿಂಗಳೊಳಗೆ ಕನ್ನಡ ಕಡ್ಡಾಯವಾಗಿ ಕಲಿಯುವಂತೆ ಸೂಚಿಸಿರುವುದಾಗಿ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರ ಕ್ಷೇತ್ರಕ್ಕೆ ಆರ್ಥಿಕ ಶಿಸ್ತು ಅಗತ್ಯ
ಅಧಿಕಾರಿಗಳು ಜಾತ್ಯತೀತವಾಗಿ ಕೆಲಸ ಮಾಡಿ : ಸಿಎಂ ಸಿದ್ದರಾಮಯ್ಯ