ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಲೋಕಸಭಾ ಚುನಾವಣೆ-2024 ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳ ಪ್ರತಿನಿಧಿ ಗಳೊಂದಿಗೆ ಸಭೆಯಲ್ಲಿ ಅವರು ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ವಸತಿ ಪ್ರದೇಶಗಳಲ್ಲಿ ಧ್ವನಿ ವರ್ಧಕಗಳ ಬಳಕೆಗೆ ಅವಕಾಶವಿಲ್ಲ. ಪ್ರಚಾರಕ್ಕೆ ಬಳಸುವ ವಾಹನಗಳಿಗೆ ಜಿಲ್ಲಾ ಮಟ್ಟದಲ್ಲಿ ಚುನಾವಣಾಧಿಕಾರಿ ಮತ್ತು ತಾಲ್ಲೂಕು ಮಟ್ಟದಲ್ಲಿ ಸಹಾಯಕ ಚುನಾವಣಾಧಿಕಾರಿ ಬಳಿ ಅನುಮತಿ ಪಡೆಯಬೇಕು ಎಂದು ತಿಳಿಸಿದರು.
ಅಭ್ಯರ್ಥಿಗಳು ತಾಲೂಕು ಮತ್ತು ಜಿಲ್ಲಾ ಕೇಂದ್ರದಲ್ಲಿ ಸ್ಥಾಪಿಸಲಾಗಿರುವ ಸಿಂಗಲ್ ವಿಂಡೋ ವ್ಯವಸ್ಥೆಯಲ್ಲಿ ತಮ್ಮ ಪ್ರಚಾರ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಅನುಮತಿಯನ್ನು ಪಡೆಯಬಹುದು. ಕಾರ್ಯಕ್ರಮ ನಡೆಸುವ 48 ಗಂಟೆಗಳ ಮುಂಚಿತವಾಗಿ ಅರ್ಜಿ ಸಲ್ಲಿಸಿದರೆ ಒಂದು ದಿನದ ಒಳಗೆ ಅನುಮತಿ ನೀಡಲಾಗುವುದು ಎಂದರು.ಚುನಾವಣೆ ಸಂದರ್ಭ ನೀತಿಸಂಹಿತೆ ಉಲ್ಲಂಘನೆಯಾಗದಂತೆ ನಿಗಾ ಇಡಲು 26 ಕಡೆ ಮೂರು ಪಾಳಿಯಲ್ಲಿ ಚೆಕ್‍ಪೋಸ್ಟ್‌ಗಳು ಕಾರ್ಯನಿರ್ವಹಿಸುತ್ತಿವೆ. ಎಫ್‍ಎಸ್‍ಟಿ, ಎಸ್‍ಎಸ್‍ಟಿ, ವಿಎಸ್‍ಟಿ ತಂಡಗಳು ಕೆಲಸ ಮಾಡುತ್ತಿವೆ. ಚುನಾವಣಾ ಅಕ್ರಮಗಳಿಗೆ ಸಂಬಂಧಿಸಿದಂತೆ ದೂರುಗಳಿದ್ದಲ್ಲಿ 1950 ಮೂಲಕ ಚುನಾ ವಣಾಧಿಕಾರಿ, ಸಹಾಯಕ ಚುನಾವಣಾಧಿಕಾರಿಗಳಿಗೆ ದೂರು ನೀಡಬಹುದು. ಅಭ್ಯರ್ಥಿಗಳು ಅಥವಾ ಸಾರ್ವಜನಿಕರು ತಮ್ಮ ಮೊಬೈಲಲ್ಲೇ ಸಿ-ವಿಜಿಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಂಡು ಆ ಮೂಲಕ ಚುನಾವಣಾ ಅಕ್ರಮಗಳ ಕುರಿತಾದ ಫೋಟೋ, ಆಡಿಯೋ, ವಿಡಿಯೋ ಅಪ್‍ಲೋಡ್ ಮಾಡುವ ಮೂಲಕ ದೂರನ್ನು ನೀಡಬಹುದು. ದೂರುದಾರರ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುವುದು. ದೂರು ದಾಖಲಾದ ನಂತರ ಎಫ್‍ಎಸ್‍ಟಿ ತಂಡದವರು ದೂರಿನ ಕುರಿತು ಕ್ರಮ ವಹಿಸುವರು ಎಂದು ಹೇಳಿದರು.
ಲೋಕಸಭಾ ಮತಕ್ಷೇತ್ರದ ಸಾಮಾನ್ಯ ವೀಕ್ಷಕರಾದ ಪೂನಂ ಮಾತನಾಡಿ, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಾಮಾನ್ಯ ವೀಕ್ಷಕರಾಗಿ ತಾವು ನೇಮಕವಾಗಿದ್ದು ಸರ್ಕ್ಯೂಟ್ ಹೌಸ್‍ನ ರೂಂ ಸಂಖ್ಯೆ 2ರಲ್ಲಿ ಲಭ್ಯವಿರುತ್ತೇನೆ. ಚುನಾವಣೆಗೆ ಸಂಬಂಧಿಸಿದಂತೆ ಸಮಸ್ಯೆಗಳು ಇದ್ದಲ್ಲಿ ತಮ್ಮ ಮೊಬೈಲ್ ಸಂಖ್ಯೆ 8147695215 ನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.
ವೆಚ್ಚ ವೀಕ್ಷಕ ಸರೋಜ್ ಕುಮಾರ್ ಬೆಹೆರಾ ಮಾತನಾಡಿ, ಮುಕ್ತ ಮತ್ತು ನ್ಯಾಯೋಚಿತ ಚುನಾವಣೆ ನಡೆಸಲು ಅಭ್ಯರ್ಥಿಗಳ ಸಹಕಾರ ಅಗತ್ಯವಾಗಿದೆ. ಅಭ್ಯರ್ಥಿ ಗಳ ಚುನಾವಣಾ ವೆಚ್ಚ ನಿರ್ವಹಣೆಗೆ ಸಂಬಂಧಿಸಿದಂತೆ ನೆರವು ನೀಡಲು ವೆಚ್ಚ ವೀಕ್ಷಕರು ಲಭ್ಯವಿರಲಿದ್ದು, ಮೊ.ಸಂ.7760692479 , 8904703613 ದೂರವಾಣಿ ಕರೆ ಮೂಲಕವೂ ವೆಚ್ಚ ವೀಕ್ಷಕರನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.
ಸಭೆಯಲ್ಲಿ ವೆಚ್ಚ ವೀಕ್ಷಕರಾದ ಮೀನಾಕ್ಷಿ ಸಿಂಗ್, ಲೋಕಸಭಾ ಚುನಾವಣಾ ಅಭ್ಯರ್ಥಿಗಳು, ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಹಾಜರಿದ್ದರು.
ಟಿವಿ, ಎಲೆಕ್ಟ್ರಾನಿಕ್, ದೃಶ್ಯ ಮಾಧ್ಯಮ, ಸಾಮಾಜಿಕ ಜಾಲತಾಣಗಳಲ್ಲಿ ಚುನಾವಣೆಗೆ ಸಂಬಂಧಿಸಿದ ಜಾಹೀರಾತು ನೀಡುವ ಮುನ್ನ ಎಂಸಿಎಂಸಿ ಸಮಿತಿ ಮುಂದೆ ಜಾಹೀರಾತು ವಿಷಯವನ್ನು ನೀಡಿ ದೃಢೀಕರಣ ಪಡೆಯಬೇಕು. ಮುದ್ರಣ ಮಾಧ್ಯಮದಲ್ಲಿ ಜಾಹಿರಾತು ಪ್ರಕಟಿಸಲು ಮತದಾನ ಮುಕ್ತಾಯಕ್ಕೆ ನಿಗದಿಯಾದ ಸಮಯಕ್ಕಿಂತ 48 ಗಂಟೆ ಮುಂಚಿತವಾಗಿ ದೃಢೀಕರಣ ಪಡೆಯುವುದು ಕಡ್ಡಾಯವಾಗಿರುತ್ತದೆ. ಕರಪತ್ರಗಳನ್ನು ಪ್ರಕಟಿಸುವ ಅಭ್ಯರ್ಥಿಗಳು ಮುದ್ರಕರ ಹೆಸರು, ಮುದ್ರಿಸುವ ಪ್ರತಿಗಳ ಸಂಖ್ಯೆಯನ್ನು ಘೋಷಿಸಿ ವಿತರಣೆಗೆ ಅನುಮತಿ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದರು.