ರೈತರ ವಿವಿಧ ಬೇಡಿಕೆ ಈಡೇರಿಕೆಗೆ ಕೇಂದ್ರ ವಿತ್ತ ಸಚಿವೆಗೆ ಕ್ಯಾಂಪ್ಕೊ ಮನವಿ

KannadaprabhaNewsNetwork |  
Published : Jul 04, 2024, 01:07 AM IST
ಕಿಶೋರ್‌ ಕುಮಾರ್‌ ಕೊಡ್ಗಿ | Kannada Prabha

ಸಾರಾಂಶ

ಅಡಕೆಯ ನಾನಾ ಉಪಯೋಗಗಳ ಅನ್ವೇಷಣೆಗಾಗಿ ಮತ್ತು ಅಡಕೆಗೆ ಬಾಧಿಸುತ್ತಿರುವ ರೋಗಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಂಶೋಧನೆ ನಡೆಸಲು ಸಾಕಷ್ಟು ಹಣ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರವನ್ನು ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್‌ ಕುಮಾರ್‌ ಕೊಡ್ಗಿ ಮನವಿ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಅಡಕೆ ಮಾರುಕಟ್ಟೆಯ ಚೇತರಿಕೆಗೆ ಉತ್ತೇಜನ ನೀಡಲು ಮತ್ತು ರೈತರ ಹಲವು ಸಮಸ್ಯೆಗಳಿಗೆ ಪರಿಹಾರ ಒದಗಿಸಿ ಕೊಡುವಂತೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಕ್ಯಾಂಪ್ಕೊ ಮನವಿ ಮಾಡಿದೆ.

ಅಡಕೆ ಮೇಲಿನ ಜಿಎಸ್‌ಟಿಯನ್ನು ಶೇ.5ರಿಂದ ಶೇ.2ಕ್ಕೆ ಇಳಿಸಬೇಕು. ಇದರಿಂದ ರೈತರು ಸಹಕಾರಿ ಸಂಸ್ಥೆಗಳಲ್ಲಿ ವ್ಯವಹರಿಸಲು ಉತ್ತೇಜನ ಸಿಗಲಿದೆ. ತೆರಿಗೆ ಕಳ್ಳತನಕ್ಕೆ ಕಡಿವಾಣ ಬೀಳಲಿದ್ದು, ಸರ್ಕಾರಕ್ಕೆ ತೆರಿಗೆಯ ಆದಾಯ ಹೆಚ್ಚಾಗಲಿದೆ. ಸಹಕಾರಿ ಸಂಸ್ಥೆಗಳು ಮಾರುಕಟ್ಟೆಯಲ್ಲಿ ಹೆಚ್ಚು ಸ್ಪರ್ಧಾತ್ಮಕವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗಲಿದೆ. ಮೈಲುತುತ್ತು ಮೇಲಿನ ಜಿ.ಎಸ್.ಟಿ.ಯನ್ನು ಶೇ.18ರಿಂದ ಶೇ.5ಕ್ಕೆ ಇಳಿಸಬೇಕು. ಇದರಿಂದ ಅಡಕೆ ಬೆಳೆಗಾರರ ಖರ್ಚು ಕಡಿಮೆ ಮಾಡಲು ಸಹಾಯವಾಗಲಿದೆ. ರೈತರು ಅಡಕೆ ಕೊಯ್ಲು ಮತ್ತು ತೋಟದ ನಿರ್ವಹಣೆಗೆ ವಿಶೇಷವಾಗಿ ಕಾರ್ಬನ್‌ ಫೈಬರ್‌ ದೋಟಿಯನ್ನು ಅವಲಂಬಿಸಿದ್ದಾರೆ. ಈ ಉತ್ಪನ್ನದ ಮೇಲೆ ಸರಾಸರಿ ಶೇ.48 ಆಮದು ಸುಂಕ ವಿಧಿಸಲಾಗುತ್ತಿದೆ. ಇದರಿಂದ ಸಾಮಾನ್ಯ ರೈತರಿಗೆ ಕೈಗೆಟುಕುತ್ತಿಲ್ಲ. ಆಮದು ಸುಂಕ ಕಡಿಮೆ ಮಾಡುವುದರಿಂದ ಎಲ್ಲ ವರ್ಗದ ರೈತರಿಗೆ ಸಹಾಯವಾಗಲಿದೆ.

ಅಡಕೆ ಮತ್ತು ಕರಿಮೆಣಸು ಉತ್ಪಾದನೆಯಲ್ಲಿ ನಮ್ಮ ದೇಶ ಸ್ವಾವಲಂಬನೆ ಹೊಂದಿದೆ. ಆದರೂ, ಇವೆರಡರ ಅಕ್ರಮ ಆಮದು ಅವ್ಯಾಹತವಾಗಿ ನಡೆಯುತ್ತಿರುವುದು ರೈತರ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇದು ರೈತರ ಜೀವನೋಪಾಯಕ್ಕೆ ಮಾರಕವಾಗಿದೆ. ವಿದೇಶಿ ಅಡಕೆಗೆ ಕನಿಷ್ಠ ಆಮದು ಬೆಲೆ ಘೋಷಣೆ ಮಾಡಿದರೂ, ಅಧಿಕಾರಿಗಳು ವಶಪಡಿಸಿಕೊಂಡ ಅಕ್ರಮ ಆಮದು ಅಡಕೆಯನ್ನು ಸ್ಥಳೀಯ ಮಾರುಕಟ್ಟೆಯಲ್ಲಿ ಮರು ಹರಾಜು ಹಾಕಲಾಗುತ್ತಿದೆ. ಮಾನವನ ಉಪಯೋಗಕ್ಕೆ ಯೋಗ್ಯವಲ್ಲದ ಇಂತಹ ಅಡಕೆ ಅನಿಯಂತ್ರಿತ ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಗೆ ಪ್ರವೇಶ ಪಡೆದು, ದೇಸಿ ಮಾರುಕಟ್ಟೆಗೆ ಮಾರಣಾಂತಿಕ ಹೊಡೆತ ನೀಡುತ್ತಿದೆ. ಇಂತಹ ವಶಪಡಿಸಿಕೊಂಡ ಅಡಕೆಯನ್ನು ಮರುಹರಾಜಿಗೆ ಅನುವು ಮಾಡಿಕೊಡದೆ ಅದನ್ನು ನಾಶಪಡಿಸುವ ನಿರ್ದಾಕ್ಷಿಣ್ಯ ಕ್ರಮ ಜರುಗಿಸಿದಾಗ ಮಾತ್ರ ಸಮಸ್ಯೆಯ ಮೂಲೋತ್ಪಾಟನೆ ಸಾಧ್ಯವಾಗುವುದು. ಉಪಯೋಗಿಸಬಹುದಾದ ಅಡಕೆಗೆ ಕನಿಷ್ಠ ಬೆಲೆ ನಿಗದಿಪಡಿಸಿ ಸಹಕಾರ ಸಂಸ್ಥೆಗಳು ಹರಾಜಿನಲ್ಲಿ ಭಾಗವಹಿಸಲು ಅವಕಾಶ ನೀಡಬೇಕು.

ಎಲ್ಲ ದೊಡ್ಡ ಸರಕು ವಾಹನಗಳಿಗೆ ಜಿ.ಪಿ.ಎಸ್‌. ಅಳವಡಿಸುವುದು ಮತ್ತು ಎಲ್ಲ ತಪಾಸಣಾ ಕೇಂದ್ರಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಅಳವಡಿಸಿ ತಪಾಸಣೆ ನಡೆಸುವುದರ ಮೂಲಕ ಅಕ್ರಮ ವ್ಯವಹಾರವನ್ನು ತಡೆಯಬಹುದು. ಸಿಜಿಎಸ್ಟಿ, ಎಸ್ಜಿಎಸ್ಟಿ ಮತ್ತು ಐಜಿಎಸ್ಟಿ ಮುಂತಾದ ಬಹು ಸ್ತರದ ತೆರಿಗೆಯ ಬದಲು ಸರಳ ಮತ್ತು ಏಕೀಕೃತ ತೆರಿಗೆ ವ್ಯವಸ್ಥೆಯನ್ನು ಜಾರಿಗೆಗೊಳಿಸಬೇಕು. ಜಿಎಸ್ಟಿಯ ಐಟಿಸಿ ಪೋರ್ಟಲ್‌ ಅಡಿಯಲ್ಲಿ ಕೆವೈಸಿ ಹೊಂದಾಣಿಕೆಯಾಗದೆ ಹೋದರೆ ತೆರಿಗೆ ಪಾವತಿದಾರರನ್ನು ಹೊಣೆಗಾರರನ್ನಾಗಿಸುವುದನ್ನು ತಪ್ಪಿಸಲು ಕ್ರಮ ತೆಗೆದುಕೊಳ್ಳಬೇಕು ಮತ್ತು ಅದರ ಹೊಣೆಗಾರಿಕೆಗೆ ಸಂಬಂಧಪಟ್ಟ ಇಲಾಖೆಗಳೇ ಜವಾಬ್ದಾರರಾಗಬೇಕು.

ಅಡಕೆಯು ಹಲವಾರು ಔಷಧೀಯ ಗುಣಗಳನ್ನು ಹೊಂದಿದ್ದು, ನಮ್ಮ ದೇಶದಲ್ಲಿ ಸಾಂಸ್ಕೃತಿಕವಾಗಿ ಮತ್ತು ಧಾರ್ಮಿಕವಾಗಿ ಜನರ ಜೀವನದಲ್ಲಿ ಹಾಸು ಹೊಕ್ಕಾಗಿದೆ. ಹಾಗಾಗಿ ಅಡಕೆಯ ನಾನಾ ಉಪಯೋಗಗಳ ಅನ್ವೇಷಣೆಗಾಗಿ ಮತ್ತು ಅಡಕೆಗೆ ಬಾಧಿಸುತ್ತಿರುವ ರೋಗಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಂಶೋಧನೆ ನಡೆಸಲು ಸಾಕಷ್ಟು ಹಣ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರವನ್ನು ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್‌ ಕುಮಾರ್‌ ಕೊಡ್ಗಿ ಮನವಿ ಮಾಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪೌರಕಾರ್ಮಿಕರ ಉಪಹಾರ ಭತ್ಯೆ ₹70ಕ್ಕೆ ಏರಿಕೆ: ಸಿಎಂ
ಬಿಜೆಪಿ, ಮೋದಿಗೆ ಬೈಯುತ್ತಿರುವೆ, ಬಂಧಿಸಲು ಧಮ್ ಬೇಕು : ಪ್ರಕಾಶ್‌