ಹೊನ್ನಾವರ: ರೈತರಿಂದ ಬೆಳೆಗಳನ್ನು ಖರೀದಿ ಮಾಡುವ ಜತೆಗೆ ವಿವಿಧ ಸೌಲಭ್ಯಗಳನ್ನು ನೀಡುತ್ತಾ ಬಂದಿರುವ ಕ್ಯಾಂಪ್ಕೋ ಇಂದು ಉತ್ತುಂಗ ಸ್ಥಿತಿಯಲ್ಲಿರಲು ರೈತ ಗ್ರಾಹಕರು ಮುಖ್ಯ ಕಾರಣ ಎಂದು ಮಂಗಳೂರಿನ ಕ್ಯಾಂಪ್ಕೋ ಅಧ್ಯಕ್ಷ ಎ. ಕಿಶೋರ್ ಅಭಿಪ್ರಾಯಪಟ್ಟರು.
ಅಧಿಕಾರಿಗಳಿಂದ ರೈತರ ಬೆಳೆ ರಕ್ಷಣೆಗೆ ಇರುವ ತೊಡಕು, ಅಡಕೆ ಉತ್ಪನ್ನಗಳನ್ನು ಇನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಿಕೊಳ್ಳಲು ನಡೆಯಬೇಕಾದ ಸಂಶೋಧನೆ, ಗೊಬ್ಬರ, ಉತ್ತಮ ಇಳುವರಿ ಬರುವ ಸಸಿ ಪೂರೈಕೆ ಸೇರಿದಂತೆ ಹಲವು ವಿಷಯದ ಕುರಿತು ಸಂಸ್ಥೆಯ ನಿರ್ದೆಶಕರು ಹಾಗೂ ಅಧಿಕಾರಿಗಳೊಂದಿಗೆ ರೈತರು ಚರ್ಚೆ ನಡೆಸಿದರು.
ಕ್ಯಾಂಪ್ಕೋ ಸದಸ್ಯರು ತಿಳಿಸಿದ ಎಲ್ಲ ಸಮಸ್ಯೆಗಳ, ನ್ಯೂನತೆಗಳ ಬಗ್ಗೆ ಅವಲೋಕನ ನಡೆಸುತ್ತೇವೆ. ಗೊಬ್ಬರ ಪೂರೈಕೆ, ವಿವಿಧ ಸೌಲಭ್ಯಗಳ ಮಾಹಿತಿ, ಬೆಳೆ ಖರೀದಿ ಇರುವ ತೊಡಕು ನಿವಾರಣೆಯ ಸಮಸ್ಯೆಗಳನ್ನು ಸ್ಥಳದಲ್ಲೆ ಪರಿಹರಿಸಿದರು. ಗಂಭೀರ ವಿಷಯಗಳ ಬಗ್ಗೆ ಆಡಳಿತ ಮಂಡಳಿಯಲ್ಲಿ ಚರ್ಚೆಮಾಡಿ, ಈ ಬಗ್ಗೆ ಒಮ್ಮತದ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಎ. ಕಿಶೋರ್ ಉತ್ತರಿಸಿದರು.ಅಡಕೆ ಬೆಳೆಗಾರ ಜಿ.ಎನ್. ಗೌಡ ಮಾತನಾಡಿ, ಗ್ರಾಮೀಣ ಭಾಗದ ಸಣ್ಣಪುಟ್ಟ ಅಡಕೆ ಬೆಳೆ ರೈತರಿಗೂ ಅನೂಕೂಲವಾಗುವಂತೆ ಪಟ್ಟಣದ ಕೇಂದ್ರ ಬಸ್ ನಿಲ್ದಾಣದ ಆಸುಪಾಸಿನಲ್ಲಿ ಕಚೇರಿ ತೆರೆದು, ವಹಿವಾಟಿಗೆ ಅನುಕೂಲ ಮಾಡಬೇಕು. ಜತೆಗೆ ಯಾವ ಗುಣಮಟ್ಟದ ಅಡಕೆ ಖರೀದಿ ಮಾಡುತ್ತೀರಿ ಎನ್ನುವುದು ತಿಳಿಸಬೇಕು ಎಂದರು.
ಕ್ಯಾಂಪ್ಕೋ ವ್ಯವಸ್ಥಾಪಕ ನಿರ್ದೇಶಕ ಡಾ. ಬಿ.ವಿ. ಸತ್ಯನಾರಾಯಣ ಪ್ರಾಸ್ತವಿಕವಾಗಿ ಮಾತನಾಡಿ, 16 ಅಡಕೆ ಖರೀದಿ ಕೇಂದ್ರ, 12 ಚಾಕಲೇಟ್ ಉತ್ಪನ್ನ, 32 ಉಪಕೇಂದ್ರದ ಮೂಲಕ ₹3300 ಕೋಟಿಯಷ್ಟು ವ್ಯವಹಾರ ಮಾಡುತ್ತಾ ಬಂದಿದೆ ಎಂದು ವಿವರಿಸಿದರು.
ಸಂಸ್ಥೆಯ ಕೃಷ್ಣಪ್ರಸಾದ, ಬಾಲಕೃಷ್ಣ ರೈ, ಮಹೇಶ ಚೌಟಾ, ಸುರೇಶ ಶೆಟ್ಟಿ, ಜಯಪ್ರಕಾಶ, ರಾಘವೇಂದ್ರ ಭಟ್, ಜಯರಾಮ ಶೆಟ್ಟಿ, ರತ್ನಾಕರ ಮತ್ತಿತರು ಇದ್ದರು. ಸಂಸ್ಥೆಯ ನಿರ್ದೇಶಕ ಶಂಭುಲಿಂಗ ಹೆಗ್ಡೆ ನಡಗೋಡು ಸ್ವಾಗತಿಸಿದರು. ಸಂಸ್ಥೆಯ ಉಪಾಧ್ಯಕ್ಷ ಶಂಕರ ನಾರಾಯಣ ಭಟ್ ಖಂಡಿಗೆ ವಂದಿಸಿದರು.