ಗೋಡಂಬಿ ಖರೀದಿಯತ್ತ ಕ್ಯಾಂಪ್ಕೋ ಚಿತ್ತ: ಅಧ್ಯಕ್ಷ ಕಿಶೋರ್‌ ಕುಮಾರ್‌ ಕೊಡ್ಗಿ

KannadaprabhaNewsNetwork |  
Published : Sep 01, 2024, 01:48 AM IST
ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್‌ ಕುಮಾರ್‌ ಕೊಡ್ಗಿ ಮಾತು | Kannada Prabha

ಸಾರಾಂಶ

ಕ್ಯಾಂಪ್ಕೋ ಸದಸ್ಯ ಗ್ರಾಹಕರ ಅನುಕೂಲಕ್ಕೆ ಕೃಷಿ ಮಾರುಕಟ್ಟೆಯ ಆಗುಹೋಗುಗಳನ್ನು ಸುಲಭವಾಗಿ ತಲುಪಿಸಲು ಪ್ರತ್ಯೇಕ ಆ್ಯಪ್‌ ರೂಪಿಸಲು ನಿರ್ಧರಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಅಡಕೆ, ಕಾಳುಮೆಣಸು, ಕೋಕೋ ಖರೀದಿಸುತ್ತಿರುವ ಕರ್ನಾಟಕ-ಕೇರಳ‍ದ ಅಂತಾರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೋ ಅವಶ್ಯವಾದರೆ ಗೋಡಂಬಿ ಖರೀದಿಗೆ ಚಿಂತನೆ ನಡೆಸಿದೆ. ಮಂಗಳೂರು ಹೊರವಲಯದ ಅಡ್ಯಾರು ಗಾರ್ಡನ್‌ನಲ್ಲಿ ಶನಿವಾರ ನಡೆದ ಕ್ಯಾಂಪ್ಕೋ(ಕೇಂದ್ರ ಅಡಕೆ ಮತ್ತು ಕೋಕೋ ಮಾರಾಟ ಮತ್ತು ಪರಿಷ್ಕರಣ ಸಹಕಾರಿ ನಿಯಮಿತ) ಇದರ 50ನೇ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷ ಕಿಶೋರ್‌ ಕುಮಾರ್‌ ಕೊಡ್ಗಿ ಈ ಮಾಹಿತಿ ನೀಡಿದರು.

ಮುಂದಿನ 25 ವರ್ಷಗಳ ಯೋಜನೆಯನ್ನು ದೃಷ್ಟಿಯಲ್ಲಿರಿಸಿ ಪುತ್ತೂರಿನ ಕ್ಯಾಂಪ್ಕೋ ಚಾಕಲೇಟ್‌ ಫ್ಯಾಕ್ಟರಿ ಬಳಿ ನಾಲ್ಕೂವರೆ ಎಕರೆ ಜಾಗವನ್ನು ಖರೀದಿಸಲು ನಿರ್ಧರಿಸಲಾಗಿದೆ. ಕ್ಯಾಂಪ್ಕೋ ಸದಸ್ಯರಿಗೆ ನೆರವಾಗುವ ದಿಶೆಯಲ್ಲಿ ಅಗತ್ಯವಾದರೆ ಗೋಡಂಬಿ ಖರೀದಿ ಬಗ್ಗೆ ಚಿಂತನೆ ಇದೆ. ಈ ಬಗ್ಗೆ ಅಂತಿಮ ತೀರ್ಮಾನವನ್ನು ಆಡಳಿತ ಮಂಡಳಿಯಲ್ಲಿ ಚರ್ಚಿಸಿ ಕೈಗೊಳ್ಳಲಾಗುವುದು ಎಂದರು.

ಇದೇ ವೇಳೆ ಸದಸ್ಯ ಗ್ರಾಹಕರು ಕೂಡ ಪೂರ್ಣ ಪ್ರಮಾಣದಲ್ಲಿ ತೆಂಗು ಖರೀದಿಗೆ ಕ್ಯಾಂಪ್ಕೋ ಮುಂದಾಗುವಂತೆ ಒತ್ತಾಯಿಸಿದರು. ಈಗಾಗಲೇ ಕ್ಯಾಂಪ್ಕೋ ಬ್ರಾಂಡ್‌ನಲ್ಲಿ ಪರಿಶುದ್ಧ ತೆಂಗಿನ ಎಣ್ಣೆ ಮಾರುಕಟ್ಟೆ ಪ್ರವೇಶಿಸಿದೆ. ಹೀಗಾಗಿ ತೆಂಗಿನಕಾಯಿ ಖರೀದಿ ಬಗ್ಗೆಯೂ ಕ್ಯಾಂಪ್ಕೋ ಮುಂದಾಗಬೇಕು ಎಂದು ಆಗ್ರಹಿಸಲಾಯಿತು.

ವಿಶ್ವ ಆರೋಗ್ಯ ಸಂಸ್ಥೆಗೆ ಮನವರಿಕೆ:

ಅಡಕೆಯನ್ನು ಹಾನಿಕಾರ ಪಟ್ಟಿಯಿಂದ ತೆಗೆದುಹಾಕಲು ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂಎಚ್‌ಒ)ಗೆ ವೈಜ್ಞಾನಿಕ ಸಂಶೋಧನಾ ವರದಿ ಸಲ್ಲಿಸಿ ಮನವರಿಕೆ ಮಾಡುವ ಪ್ರಯತ್ನವನ್ನು ಕ್ಯಾಂಪ್ಕೋ ಮುಂದಿನ ತಿಂಗಳು ಮಾಡಲಿದೆ. ಈ ಮೂಲಕ ಕ್ಯಾನ್ಸರ್‌ ಪಟ್ಟಿಯಿಂದ ಅಡಕೆಯನ್ನು ತೆಗೆದುಹಾಕಲು ಪ್ರಯತ್ನಿಸಲಾಗುವುದು. ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಜೊತೆ ಸಂಪರ್ಕದಲ್ಲಿ ಇರುವುದಾಗಿ ಅಧ್ಯಕ್ಷ ಕಿಶೋರ್‌ ಕುಮಾರ್‌ ಕೊಡ್ಗಿ ಹೇಳಿದರು.

ಅಡಕೆ ಗುಣಮಟ್ಟ ಮಾನದಂಡ:

ಅಡಕೆಯ ಗುಣಮಟ್ಟ ನಿಗದಿಯ ತೇವಾಂಶ ಮಾನದಂಡವನ್ನು ಶೇ.7ರ ಬದಲು ಶೇ.11ಕ್ಕೆ ಹೆಚ್ಚಿಸುವಂತೆ ಸಂಬಂಧಿತ ಇಲಾಖೆಗೆ ಮನವಿ ಮಾಡಲಾಗಿದೆ. ಕಳಪೆ ಗುಣಮಟ್ಟ ಕಾರಣಕ್ಕೆ ಉತ್ತರ ಭಾರತದಲ್ಲಿ ಕೆಲವೊಮ್ಮೆ ಅಡಕೆ ತಿರಸ್ಕೃತಗೊಳ‍್ಳುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಸಕ್ತ ಇರುವ ಮಾನದಂಡವನ್ನು ಹೆಚ್ಚಳಗೊಳಿಸುವ ನಿಟ್ಟಿನಲ್ಲಿ ಆಹಾರ ಮತ್ತು ಸುರಕ್ಷತಾ ವಿಭಾಗದ ಅಧಿಕಾರಿಗಳ ಜೊತೆ ಸಭೆ ನಡೆಸಿ ಅವರಿಗೆ ಮನವರಿಕೆ ಮಾಡಲಾಗುವುದು ಎಂದರು.

ಕೇರಳ ಸರ್ಕಾರಕ್ಕೆ ಮನವಿ: ಕಳೆದ ಬಾರಿ ಬಿಡುಗಡೆಗೊಳಿಸಿದ ಕ್ಯಾಂಪ್ಕೋ ಬ್ರಾಂಡ್‌ನ ರಸಗೊಬ್ಬರವನ್ನು ಕೇರಳದಲ್ಲೂ ಮಾರಾಟ ಮಾಡುವ ಬಗ್ಗೆ ಅಲ್ಲಿನ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಅಲ್ಲಿನ ಸರ್ಕಾರ ಅನುಮತಿಸಿದ ಬಳಿಕ ರಸಗೊಬ್ಬರ ಮಾರಾಟ ಸಾಧ್ಯವಾಗಲಿದೆ ಎಂದರು.

ಕ್ಯಾಂಪ್ಕೋ ಪ್ರತ್ಯೇಕ ಆ್ಯಪ್‌: ಕ್ಯಾಂಪ್ಕೋ ಸದಸ್ಯ ಗ್ರಾಹಕರ ಅನುಕೂಲಕ್ಕೆ ಕೃಷಿ ಮಾರುಕಟ್ಟೆಯ ಆಗುಹೋಗುಗಳನ್ನು ಸುಲಭವಾಗಿ ತಲುಪಿಸಲು ಪ್ರತ್ಯೇಕ ಆ್ಯಪ್‌ ರೂಪಿಸಲು ನಿರ್ಧರಿಸಲಾಗಿದೆ. ಇದರಿಂದ ಕ್ಯಾಂಪ್ಕೋ ಅಡಕೆ ಹಾಗೂ ಇತರೆ ಉತ್ಪನ್ನಗಳ ಧಾರಣೆ ಸಹಿತ ಎಲ್ಲ ಮಾಹಿತಿಯೂ ಆ್ಯಪ್‌ನಲ್ಲಿ ಸಿಗುವಂತೆ ನೋಡಿಕೊಳ್ಳಲಾಗುವುದು ಎಂದರು.

ವೇದಿಕೆಯಲ್ಲಿ ಉಪಾಧ್ಯಕ್ಷ ಶಂಕರನಾರಾಯಣ ಭಟ್‌ ಖಂಡಿಗೆ, ನಿರ್ದೇಶಕರಾದ ಎಸ್‌.ಆರ್‌.ಸತೀಶ್ಚಂದ್ರ, ದಯಾನಂದ ಹೆಗ್ಡೆ, ಕೃಷ್ಣಪ್ರಸಾದ್‌ ಮಡ್ತಿಲ, ಶಂಭುಲಿಂಗ ಜಿ.ಹೆಗ್ಡೆ, ಕೆ.ಬಾಲಕೃಷ್ಣ ರೈ, ಜಯರಾಮ ಸರಳಾಯ, ಪದ್ಮರಾಜ ಪಟ್ಟಾಜೆ, ಎಂ.ಮಹೇಶ್‌ ಚೌಟ, ರಾಘವೇಂದ್ರ ಭಟ್‌ ಪಿ., ಜಯಪ್ರಕಾಶ್‌ ನಾರಾಯಣ ಟಿ.ಕೆ, ರಾಧಾಕೃಷ್ಣನ್‌, ಸತ್ಯನಾರಾಯಣ ಪ್ರಸಾದ್‌, ಸುರೇಶ್‌ ಕುಮಾರ್‌ ಶೆಟ್ಟಿ, ರಾಘವೇಂದ್ರ ಎಚ್‌.ಎಂ., ವ್ಯವಸ್ಥಾಪಕ ನಿರ್ದೇಶಕ ಡಾ.ಬಿ.ವಿ.ಸತ್ಯನಾರಾಯಣ ಇದ್ದರು.

ಕ್ಯಾಂಪ್ಕೋ 5.99 ಕೋಟಿ ರು. ನಿವ್ವಳ ಲಾಭ

ಕಳೆದ ಸಾಲಿನಲ್ಲಿ ಕ್ಯಾಂಪ್ಕೋ 3,336.87 ಕೋಟಿ ರು. ಸಾರ್ವಕಾಲಿಕ ದಾಖಲೆಯ ವಹಿವಾಟು ನಡೆಸಿ 5.99 ಕೋಟಿ ರು. ನಿವ್ವಳ ಲಾಭ ಗಳಿಸಿದೆ. ವಿದೇಶಿ ಅಡಕೆಯ ಅಕ್ರಮ ಆಮದಿನಿಂದ ದೇಶಿ ಮಾರುಕಟ್ಟೆಯಲ್ಲಿ ಅಡಕೆ ಧಾರಣೆ ಮೇಲೆ ಪ್ರಭಾವ ಬೀರಿದರೂ ಪರಿಣಾಮಕಾರಿ ಕಾರ್ಯತಂತ್ರಗಳ ಮೂಲಕ ತೆಗೆದುಕೊಂಡ ತೀರ್ಮಾನದಿಂದ ಅಂತಿಮ ತ್ರೈಮಾಸಿಕ ಅವಧಿಯಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಅಧ್ಯಕ್ಷ ಕಿಶೋರ್ ಕುಮಾರ್‌ ಕೊಡ್ಗಿ ಹೇಳಿದರು.

ಕಳಪೆ ಅಡಕೆ ನಾಶಕ್ಕೆ ಮನವಿಅಡಕೆ ಹಾಗೂ ಕಾಳುಮೆಣಸು ಧಾರಣೆಯಲ್ಲಿ ಏರಿಳಿತ ಇದೆ. ಕಳೆದ ಬಾರಿ ಕಾಳುಮೆಣಸು ಧಾರಣೆ ಕುಸಿತದಿಂದ ಸಂಸ್ಥೆಗೆ ನಷ್ಟ ಉಂಟಾಗಿದೆ. ಆದರೂ ಈ ಬಾರಿ ಧಾರಣೆ ಏರಿಕೆಯಿಂದ ತುಸು ಲಾಭದ ಭರವಸೆ ಇದೆ. ಅಡಕೆ ಮಾರುಕಟ್ಟೆ ಈಗಲೂ ಕ್ಯಾಂಪ್ಕೋ ಹಿಡಿತದಲ್ಲೇ ಇದೆ. ಈ ಬಗ್ಗೆ ಯಾರೂ ಆತಂಕ ಅಥವಾ ಗಾಳಿಸುದ್ದಿಗೆ ಕಿವಿಗೊಡಬೇಕಾಗಿಲ್ಲ ಎಂದರು. ಪ್ರಸಕ್ತ ಉತ್ತರ ಭಾರತದಲ್ಲಿ ಇಲ್ಲಿನ ಅಡಕೆ ಜೊತೆಗೆ ಕಲಬೆರಕೆಯ ಕೆಂಪಡಕೆಯನ್ನು ಮಿಶ್ರಣ ಮಾಡಿ ಗುಣಮಟ್ಟ ರಹಿತ ಅಡಕೆ ಮಾರಾಟವಾಗುತ್ತಿದೆ. ಇದನ್ನು ತಡೆಯುವುದಲ್ಲದೆ, ಇಂತಹ ಅಡಕೆ ಕಂಡುಬಂದರೆ ಅದನ್ನು ನಾಶಪಡಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ ಎಂದರು.

ಕ್ಯಾಂಪ್ಕೋ ಯೋಜನೆ ಸಂಸ್ಕರಿತ ಪೆಪ್ಪರ್‌ನ್ನು ಕ್ಯಾಂಪ್ಕೋ ಬ್ರಾಂಡ್‌ನಲ್ಲಿ ಶೀಘ್ರವೇ ಉತ್ತರ ಭಾರತ ಮಾರುಕಟ್ಟೆಗೆ ಪರಿಚಯಿಸಲಾಗುವುದು. ಕ್ಯಾಂಪ್ಕೋದ ಹೊಸ ಸ್ವಾದಭರಿತ ಚಾಕಲೇಟ್‌ ಉತ್ಪನ್ನ, ಹೊಸ ಬಗೆಯಲ್ಲಿ ತೆಂಗಿನ ಎಣ್ಣೆಯನ್ನು ಶೀಘ್ರವೇ ಮಾರುಕಟ್ಟೆಗೆ ಬಿಡುಗಡೆಗೊಳಿಸುವುದಾಗಿ ಅವರು ಹೇಳಿದರು. ಕ್ಯಾಂಪ್ಕೋ ಸುಪರ್ದಿಯಲ್ಲಿ ಕಾವಿನಲ್ಲಿ ಎಚ್‌ಪಿಸಿಎಲ್‌ ವತಿಯಿಂದ ಹೊಸ ಪೆಟ್ರೋಲ್‌ ಬಂಕ್‌ ನಿರ್ಮಿಸಲು ಚಿಂತಿಸಲಾಗಿದೆ ಎಂದರು.

ಬಯಲುಸೀಮೆಗೆ ಕ್ಯಾಂಪ್ಕೋ ವಿಸ್ತರಣೆ ಬೇಡಿಕೆತುಮಕೂರು ಸೇರಿದಂತೆ ಬಯಲುಸೀಮೆಗೆ ಕ್ಯಾಂಪ್ಕೋ ಕಾರ್ಯ ವಿಸ್ತರಿಸುವಂತೆ ಬೆಳೆಗಾರರೊಬ್ಬರು ಆಗ್ರಹಿಸಿದರು. ಬಯಲು ಸೀಮೆಯಲ್ಲಿ ಕ್ಯಾಂಪ್ಕೋಗೆ ಚಟುವಟಿಕೆಗೆ ಅಗತ್ಯವಾದ ಜಾಗ ಸುಲಭ ದರದಲ್ಲಿ ಲಭ್ಯವಾಗಲಿದೆ. ಅಲ್ಲದೆ ಅಡಕೆ, ತೆಂಗು ಬೆಳೆಗಾರರಿಗೆ ಅನುಕೂಲವಾಗಲು ಕ್ಯಾಂಪ್ಕೋ ಶಾಖೆ ಹಾಗೂ ಫ್ಯಾಕ್ಟರಿಯನ್ನು ಬಯಲು ಸೀಮೆಯಲ್ಲೂ ತೆರೆಯುವಂತೆ ಆಗ್ರಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಟಿ ಆತ್ಮ*ತ್ಯೆಗೆ ಸರ್ಕಾರಿ ನೌಕರಿಗೆ ಸೇರುವಂತೆ ಕುಟುಂಬ ಒತ್ತಡ ಕಾರಣ?
ನಮ್ಮವರಿಗೆ ಇಲ್ಲದ ಪರಿಹಾರ ಅವರಿಗೆ ಏಕೆ : ಬಿಜೆಪಿ ಆಕ್ರೋಶ