27 ರಂದು ಕ್ಯಾಂಪ್ಕೋ ವಿಟ್ಲ ಶಾಖೆಯ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ

KannadaprabhaNewsNetwork |  
Published : Mar 28, 2026, 02:30 AM IST
 | Kannada Prabha

ಸಾರಾಂಶ

​ರೈತರ ಆರ್ಥಿಕಾಭಿವೃದ್ಧಿಯ ಬೆನ್ನೆಲುಬಾಗಿರುವ ಪ್ರತಿಷ್ಠಿತ ಕ್ಯಾಂಪ್ಕೊ ಸಂಸ್ಥೆ ವಿಟ್ಲದಲ್ಲಿ ತನ್ನ ನೂತನ ಶಾಖಾ ಕಟ್ಟಡ ನಿರ್ಮಾಣಕ್ಕೆ ಸಜ್ಜಾಗಿದೆ. ಮಾ. 27 ರಂದು ಬೆಳಗ್ಗೆ 9.30 ಗಂಟೆಗೆ ವಿಟ್ಲದ ಶ್ರೀ ಪಂಚಲಿಂಗೇಶ್ವರ ಸನ್ನಿಧಿಯ ಬಳಿ ಖರೀದಿ ಮಾಡಿದ ಜಾಗದಲ್ಲಿ ಶಂಕುಸ್ಥಾಪನಾ ಸಮಾರಂಭವನ್ನು ಹಮ್ಮಿಕೊಂಡಿದೆ.

ಮಂಗಳೂರು: ​ರೈತರ ಆರ್ಥಿಕಾಭಿವೃದ್ಧಿಯ ಬೆನ್ನೆಲುಬಾಗಿರುವ ಪ್ರತಿಷ್ಠಿತ ಕ್ಯಾಂಪ್ಕೊ ಸಂಸ್ಥೆ ವಿಟ್ಲದಲ್ಲಿ ತನ್ನ ನೂತನ ಶಾಖಾ ಕಟ್ಟಡ ನಿರ್ಮಾಣಕ್ಕೆ ಸಜ್ಜಾಗಿದೆ. ಮಾ. 27 ರಂದು ಬೆಳಗ್ಗೆ 9.30 ಗಂಟೆಗೆ ವಿಟ್ಲದ ಶ್ರೀ ಪಂಚಲಿಂಗೇಶ್ವರ ಸನ್ನಿಧಿಯ ಬಳಿ ಖರೀದಿ ಮಾಡಿದ ಜಾಗದಲ್ಲಿ ಶಂಕುಸ್ಥಾಪನಾ ಸಮಾರಂಭವನ್ನು ಹಮ್ಮಿಕೊಂಡಿದೆ.

ಕ್ಯಾಂಪ್ಕೊದ ವಿಟ್ಲ ಶಾಖೆಯು 1986 ರಲ್ಲಿ ಕೇವಲ 76 ಸೆಂಟ್ಸ್ ಜಾಗದಲ್ಲಿ (19,188 ಚದರ ಅಡಿ ಕಟ್ಟಡ ವಿಸ್ತೀರ್ಣ) ನಿರ್ಮಾಣಗೊಂಡು, ಕಳೆದ ಹಲವು ದಶಕಗಳಿಂದ ಅಸಂಖ್ಯಾತ ಬೆಳೆಗಾರ ಸದಸ್ಯರಿಗೆ ನಿರಂತರವಾಗಿ ಅತ್ಯುತ್ತಮ ಸೇವೆ ಸಲ್ಲಿಸುತ್ತಾ ಬಂದಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ವಾಹನ ದಟ್ಟಣೆ ಹಾಗೂ ಶಾಖೆಯನ್ನು ತಲುಪುವ ಇಕ್ಕಟ್ಟಾದ ರಸ್ತೆಯಿಂದಾಗಿ ಸಂಸ್ಥೆಯ ದೈನಂದಿನ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿರುವುದಲ್ಲದೆ, ವಹಿವಾಟಿಗೆ ಆಗಮಿಸುವ ರೈತ ಬಾಂಧವರಿಗೂ ಸಾಕಷ್ಟು ಅನಾನುಕೂಲಗಳು ಎದುರಾಗುತ್ತಿದ್ದವು.

12 ಕೋಟಿ ರು. ವೆಚ್ಚದ ಬೃಹತ್ ಯೋಜನೆ: ಈ ಎಲ್ಲ ಅಡೆತಡೆಗಳನ್ನು ನಿವಾರಿಸಿ, ರೈತ ಸದಸ್ಯರಿಂದ ಅಡಿಕೆ, ಕೊಕ್ಕೊ, ಕಾಳುಮೆಣಸು ಸೇರಿದಂತೆ ಇತರ ಕೃಷಿ ಉತ್ಪನ್ನಗಳ ಖರೀದಿ ಮತ್ತು ನಿರ್ವಹಣೆಯನ್ನು ಸುಗಮಗೊಳಿಸುವ ಸದುದ್ದೇಶದಿಂದ ಕ್ಯಾಂಪ್ಕೊ ಮುಂದಡಿ ಇಟ್ಟಿದೆ. 2024ರಲ್ಲಿ ಬಂಟ್ವಾಳ ತಾಲೂಕಿನ ವಿಟ್ಲ ಕಸಬಾ ಗ್ರಾಮದ ವ್ಯಾಪ್ತಿಯಲ್ಲಿಯೇ ನೂತನ ಜಾಗವನ್ನು ಸಂಸ್ಥೆ ಖರೀದಿಸಿದೆ. ಈ ವಿಶಾಲವಾದ ನಿವೇಶನದಲ್ಲಿ ಸುಮಾರು 12 ಕೋಟಿ ರು. ವೆಚ್ಚದಲ್ಲಿ ಸುಮಾರು 30,000 ಚದರ ಅಡಿ ವಿಸ್ತೀರ್ಣದ ಅತ್ಯಾಧುನಿಕ ಕಚೇರಿ ಹಾಗೂ ಗೋದಾಮು ಸಮುಚ್ಚಯವನ್ನು ನಿರ್ಮಿಸಲು ಉದ್ದೇಶಿಸಿದೆ. ಈ ನೂತನ ಕಟ್ಟಡ ಸುಲಭ ಸಂಪರ್ಕ ರಸ್ತೆ ಹಾಗೂ ವಿಶಾಲವಾದ ವಾಹನ ನಿಲುಗಡೆ ಸೌಲಭ್ಯವನ್ನು ಹೊಂದಿದೆ. ಇದು ರೈತ ಬಾಂಧವರಿಗೆ ಅತ್ಯಂತ ಅನುಕೂಲಕರವಾಗುವುದರ ಜೊತೆಗೆ ಸಂಸ್ಥೆಯ ದೈನಂದಿನ ವಹಿವಾಟುಗಳನ್ನು ಇನ್ನಷ್ಟು ವೇಗವಾಗಿ ಮತ್ತು ಸುಗಮವಾಗಿ ನಡೆಸಲು ಸಹಕಾರಿಯಾಗಲಿದೆ.​ಈ ಬೃಹತ್ ಕಟ್ಟಡದ ಸಿವಿಲ್ ಕಾಮಗಾರಿಯ ಗುತ್ತಿಗೆಯನ್ನು ವಿಟ್ಲದ ಪ್ರತಿಷ್ಠಿತ ಮೆಸರ್ಸ್ ಗಾನ್ವಿ ಇನ್ಫ್ರಾ ಪ್ರಾಜೆಕ್ಟ್ಸ್ಸಸಂಸ್ಥೆಗೆ ವಹಿಸಲಾಗಿದ್ದು, ಕಾಮಗಾರಿ ಆರಂಭಗೊಂಡ ಕೇವಲ 18 ತಿಂಗಳೊಳಗೆ ಈ ನೂತನ ಕಟ್ಟಡ ಪೂರ್ಣಗೊಂಡು ರೈತರ ಸೇವೆಗೆ ಮುಕ್ತವಾಗುವ ನಿರೀಕ್ಷೆಯಿದೆ.ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕೆ. ಪ್ರಭಾಕರ್ ಭಟ್ ಅವರು ಈ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಲಿದ್ದಾರೆ. ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಗೂ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಕ್ಯಾಂಪ್ಕೊ ಸಂಸ್ಥೆಯ ಅಧ್ಯಕ್ಷ ಎಸ್. ಆರ್. ಸತೀಶ್‌ಚಂದ್ರ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಕ್ಯಾಂಪ್ಕೊದ ಮಾಜಿ ಅಧ್ಯಕ್ಷರುಗಳಾದ ಕೊಂಕೋಡಿ ಪದ್ಮನಾಭ, ಎ. ಕಿಶೋರ್ ಕುಮಾರ್ ಕೊಡ್ಗಿ, ಕ್ಯಾಂಪ್ಕೊ ಉಪಾಧ್ಯಕ್ಷರಾದ ಪದ್ಮರಾಜ ಪಟ್ಟಾಜೆ, ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಬಿ.ವಿ. ಸತ್ಯನಾರಾಯಣ, ವಿಟ್ಲ ಜಿಲ್ಲಾ ಪಂಚಾಯತ್ ಅಧ್ಯಕ್ಷ ಕರುಣಾಕರ ನಾಯ್ತೊಟ್ಟು ಮತ್ತಿತರರು ಭಾಗವಹಿಸುವರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗುರಿ ನಿರ್ಧಾರದಲ್ಲಿ ಸ್ಪಷ್ಟತೆ ಅಗತ್ಯ: ಡಾ.ಕುರಿಯನ್‌
ಬನ್ನಂಜೆ ಬ್ರಹ್ಮಕಲಶೋತ್ಸವ: ಚಪ್ಪರ ಮುಹೂರ್ತ ಸಂಪನ್ನ